ಹರ್ಯಾಣ: ಮಿನಿ ಸಚಿವಾಲಯಕ್ಕೆ ಮುತ್ತಿಗೆ ಹಾಕಿದ ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಿದ ಪೊಲೀಸರು

Update: 2021-09-07 15:27 GMT
ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮಂಗಳವಾರ ಕರ್ನಲ್ ನಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ ನಲ್ಲಿ ಸೇರಿದ್ದ ಸಾವಿರಾರು ರೈತರು.

ಹೊಸದಿಲ್ಲಿ: ಹರ್ಯಾಣದ ಕರ್ನಾಲ್‌ನಲ್ಲಿ ಆಗಸ್ಟ್ 28 ರಂದು ರೈತರ ಮೇಲೆ ಪೊಲೀಸರ ಲಾಠಿ ಚಾರ್ಜ್ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಮೆರವಣಿಗೆ ಮೂಲಕ ಮಂಗಳವಾರ ಮಿನಿ ಸಚಿವಾಲಯದತ್ತ ತೆರಳಿದ್ದ ರೈತರು ಜಿಲ್ಲಾಡಳಿತ ಕಚೇರಿಗಳಿಗೆ ಮುತ್ತಿಗೆ ಹಾಕಿದರು. ರೈತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ.

ಆರು ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟಿದ ನಂತರ, ರೈತರು ಕರ್ನಾಲ್‌ನಲ್ಲಿರುವ ಮಿನಿ-ಸೆಕ್ರೆಟರಿಯೇಟ್ ಗೆ ಮುತ್ತಿಗೆ ಹಾಕಿದ್ದಾರೆ. ಕರ್ನಲ್ ನ ಅನಜ್ ಮಂಡಿಯಲ್ಲಿ ಕಿಸಾನ್ ಮಹಾಪಂಚಾಯತ್ ಮುಗಿದ ಬಳಿಕ ರೈತರು ಕರ್ನಾಲ್ ಮಿನಿ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ಮುಂದಾದರು.

ಕರ್ನಾಲ್ ಮಹಾಪಂಚಾಯತ್‌ಗಾಗಿ ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ರೈತ ಮುಖಂಡರ 11 ಸದಸ್ಯರ ನಿಯೋಗವನ್ನು ಈ ಮೊದಲು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಲು ಆಹ್ವಾನಿಸಲಾಗಿತ್ತು. ಆದರೆ ಮಾತುಕತೆ ವಿಫಲವಾದ ಬಳಿಕ ರೈತರು ಕರ್ನಾಲ್‌ನ ಮಿನಿ-ಸೆಕ್ರೆಟರಿಯೇಟ್ ಕಡೆಗೆ ಮೆರವಣಿಗೆ ಆರಂಭಿಸಿದರು.

ಆಗಸ್ಟ್ 28 ರಂದು ನಡೆದ ಘಟನೆಯಲ್ಲಿ ಹಲವಾರು ರೈತರು ಹಾಗೂ  ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದರು. ಹಲ್ಲೆಯಿಂದಾಗಿ ಒಬ್ಬ ರೈತ ಸಾವನ್ನಪ್ಪಿದ್ದಾನೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News