ದಿಲ್ಲಿ ಮೆಟ್ರೋ ವಿರುದ್ಧದ 4,660 ಕೋ.ರೂ.ಮಧ್ಯಸ್ಥಿಕೆ ಪ್ರಕರಣ: ಅನಿಲ್ ಅಂಬಾನಿಯ ಸಂಸ್ಥೆಗೆ ಗೆಲುವು

Update: 2021-09-09 17:00 GMT

ಹೊಸದಿಲ್ಲಿ,ಸೆ.9: ಮಧ್ಯಸ್ಥಿಕೆ ನ್ಯಾಯಾಧಿಕರಣವು 2017ರಲ್ಲಿ ದಿಲ್ಲಿ ಮೆಟ್ರೋ ವಿರುದ್ಧ ಪ್ರಕರಣವೊಂದರಲ್ಲಿ ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಪರ ನೀಡಿದ್ದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ಎತ್ತಿ ಹಿಡಿದಿದೆ. ಇದರೊಂದಿಗೆ ಬಡ್ಡಿಸಹಿತ 4,660 ಕೋ.ರೂ.ಗಳ ಮೊತ್ತವು ಕಂಪನಿಯ ಕೈಸೇರಲಿದ್ದು,ಇದನ್ನು ಸಾಲಗಳನ್ನು ತೀರಿಸಲು ಬಳಸುವುದಾಗಿ ಅದು ತಿಳಿಸಿದೆ.

ಅಂಬಾನಿಯವರ ದೂರಸಂಪರ್ಕ ಕಂಪನಿ ಈಗಾಗಲೇ ದಿವಾಳಿಯಾಗಿದ್ದು,ಎಸ್‌ಬಿಐ ತನ್ನ ವಿರುದ್ಧ ದಾಖಲಿಸಿರುವ ವೈಯಕ್ತಿಕ ದಿವಾಳಿತನ ಪ್ರಕರಣದಲ್ಲಿಯೂ ಅವರು ಕಾನೂನು ಸಮರ ನಡೆಸುತ್ತಿದ್ದಾರೆ. ಹೀಗಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಅಂಬಾನಿ ಪಾಲಿಗೆ ಮಹತ್ವದ ಗೆಲುವಾಗಿದೆ. ಗುರುವಾರ ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ರಿಲಯನ್ಸ್ ಇನ್ಫ್ರಾ ಶೇರುಗಳು ಶೇ.5ರಷ್ಟು ಏರಿಕೆಯನ್ನು ದಾಖಲಿಸಿವೆ.

ರಿಲಯನ್ಸ್ ಈ ಹಣವನ್ನು ಸಾಲಗಳ ಮರುಪಾವತಿಗೆ ಬಳಸಲಿದೆ ಎಂದು ಕಂಪನಿಯ ವಕೀಲರು ವಿಚಾರಣೆ ವೇಳೆ ತಿಳಿಸಿದ ಹಿನ್ನೆಲೆಯಲ್ಲಿ ಕಂಪನಿಯ ಖಾತೆಗಳನ್ನು ಅನುತ್ಪಾದಕ ಆಸ್ತಿಗಳೆಂದು ಪರಿಗಣಿಸದಂತೆ ಸರ್ವೋಚ್ಚ ನ್ಯಾಯಾಲಯವು ಬ್ಯಾಂಕುಗಳಿಗೆ ತಾಕೀತು ಮಾಡಿದೆ. ಪ್ರಕರಣದಲ್ಲಿಯ ಅಂತಿಮ ತೀರ್ಪು ಸಾಲದಾತರ ಮೇಲೆ ನ್ಯಾಯಾಲಯವು ವಿಧಿಸಿದ್ದ ನಿರ್ಬಂಧಗಳನ್ನೂ ತೆಗೆದುಹಾಕಿದೆ.

ಪ್ರಕರಣದ ವಿವರ

ದೇಶದ ಮೊದಲ ಖಾಸಗಿ ನಗರ ರೈಲ್ವೆ ಯೋಜನೆಯನ್ನು 2038ರವರೆಗೆ ನಡೆಸುವ ಬಗ್ಗೆ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ 2008ರಲ್ಲಿ ದಿಲ್ಲಿ ಮೆಟ್ರೋದ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿತ್ತು. 2012ರಲ್ಲಿ ಶುಲ್ಕಗಳು ಮತ್ತು ಕಾರ್ಯಾಚರಣೆಗಳ ಕುರಿತು ವಿವಾದಗಳುಂಟಾದ ಬಳಿಕ ಅಂಬಾನಿಯವರ ಕಂಪನಿಯು ದಿಲ್ಲಿಯ ವಿಮಾನ ನಿಲ್ದಾಣ ಮೆಟ್ರೋ ಯೋಜನೆಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು ಮತ್ತು ಒಪ್ಪಂದದ ಉಲ್ಲಂಘನೆ ಆರೋಪದಲ್ಲಿ ದಿಲ್ಲಿ ಮೆಟ್ರೋದ ವಿರುದ್ಧ ಮಧ್ಯಸ್ಥಿಕೆ ಪ್ರಕರಣವನ್ನು ಆರಂಭಿಸಿತ್ತು ಹಾಗೂ ಸಮಾಪನ ಶುಲ್ಕವನ್ನು ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News