ಬಿಜೆಪಿಯಿಂದ ಸಿಪಿಎಂ ಕಚೇರಿ ಮೇಲೆ ದಾಳಿ ಆರೋಪ: ಪ್ರಧಾನಿ ಮೋದಿಗೆ ಪತ್ರ ಬರೆದ ಸೀತಾರಾಮ ಯೆಚೂರಿ

Update: 2021-09-09 18:25 GMT

ಹೊಸದಿಲ್ಲಿ, ಸೆ. 9 : ತ್ರಿಪುರಾದಲ್ಲಿರುವ ಸಿಪಿಎಂ ಪಕ್ಷದ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರ ಗುಂಪೊಂದು ಸೆಪ್ಟಂಬರ್ 8ರಂದು ಪೂರ್ವ ಯೋಜಿತವಾಗಿ ದಾಳಿ ನಡೆಸಿದೆ ಎಂದು ಆರೋಪಿಸಿ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ದಾಳಿಕೋರರು ನಿರ್ಭಯದಿಂದ ದಾಳಿ ನಡೆಸಿರುವುದು ಸರಕಾರದ ಬೆಂಬಲವನ್ನು ತೋರಿಸುತ್ತದೆ. ತ್ರಿಪುರಾದಲ್ಲಿ ಪಕ್ಷದ ಕೇಂದ್ರ ಕಚೇರಿ ಸೇರಿದಂತೆ ಹಲವು ಕಚೇರಿಗಳ ಮೇಲೆ ಬಿಜೆಪಿ ಕಾರ್ಯಕರ್ತರು ಪೂರ್ವಯೋಜಿತವಾಗಿ ದಾಳಿ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದಾಳಿಯಿಂದ ಉದಯಪುರ ಉಪ ವಿಭಾಗೀಯ ಕಚೇರಿ, ಗೋಮತಿ ಜಿಲ್ಲಾ ಸಮಿತಿ ಕಚೇರಿ, ಸೆಫಹಿಜಾಲ ಜಿಲ್ಲಾ ಸಮಿತಿ ಕಚೇರಿ, ಬಿಸಾಲ್‌ಗಡ ಉಪ ವಿಭಾಗೀಯ ಸಮಿತಿ ಕಚೇರಿ, ಸಂತಾರ್ ಬಝಾರ್ ಉಪ ವಿಭಾಗೀಯ ಕಚೇರಿ, ಪಶ್ಚಿಮ ತ್ರಿಪುರಾ ಜಿಲ್ಲಾ ಸಮಿತಿ ಕಚೇರಿ ಹಾಗೂ ಸದಾರ್ ಉಪ ವಿಭಾಗೀಯ ಸಮಿತಿ ಕಚೇರಿ ಹಾನಿಗೀಡಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಅಗರ್ತಲಾದಲ್ಲಿರುವ ಪಕ್ಷದ ರಾಜ್ಯ ಸಮಿತಿ ಕಚೇರಿಯ ಮೇಲೆ ಅವರು ತೀವ್ರ ದಾಳಿ ನಡೆಸಿದ್ದಾರೆ. ಕಟ್ಟಡದ ನೆಲ ಮಹಡಿ ಹಾಗೂ ಎರಡನೇ ಮಹಡಿಯಲ್ಲಿ ದಾಂಧಲೆ ನಡೆಸಿದ್ದಾರೆ. ಕಚೇರಿಯ ಎರಡು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ತ್ರಿಪುರಾದ ಜನ ನಾಯಕ ದಶರಥ ಅವರ ಪುತ್ಥಳಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸಿಪಿಎಂನ ಹಲವು ನಾಯಕರು ಹಾಗೂ ಕಾರ್ಯಕರ್ತರ ಮನೆಗಳ ಮೇಲೆ ಕೂಡ ದಾಳಿ ನಡೆಸಲಾಗಿದೆ ಹಾಗೂ ಬೆಂಕಿ ಹಚ್ಚಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News