ಭಾರತದ ರಕ್ಷಣಾ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಹಂಚುತ್ತಿದ್ದ ರೈಲ್ವೆ ಪೋಸ್ಟಲ್‌ ಸಿಬ್ಬಂದಿ ಭರತ್‌ ಬಂಧನ

Update: 2021-09-11 09:42 GMT

ಹೊಸದಿಲ್ಲಿ: ರಕ್ಷಣಾ ಸಂಬಂಧಿ ಪತ್ರಗಳ ಫೋಟೋಗಳನ್ನು ತೆಗೆದು ಮಾಹಿತಿಯನ್ನು ಪಾಕಿಸ್ತಾನದ ಐಎಸ್‍ಐ ಏಜಂಟರಿಗೆ ರವಾನಿಸುತ್ತಿದ್ದ ರೈಲ್ವೆ ಪೋಸ್ಟಲ್ ಸೇವೆಗಳ  ಸಿಬ್ಬಂದಿಯೊಬ್ಬರನ್ನು ಬಂಧಿಸುವುದರೊಂದಿಗೆ ಸೇನಾ ಗುಪ್ತಚರ ವಿಭಾಗ ಹಾಗೂ ರಾಜಸ್ಥಾನ ಪೊಲೀಸರು ʼವಿಶಿಷ್ಟ' ಬೇಹುಗಾರಿಕಾ ಜಾಲವೊಂದನ್ನು ಬೇಧಿಸಿದ್ದಾರೆ. ಆರೋಪಿಯನ್ನು ಭರತ್‌ ಎಂದು ಗುರುತಿಸಲಾಗಿದೆ.

ಭರತ್ ಗೊದರ ಎಂಬ ಹೆಸರಿನ ರೈಲ್ವೆ ಪೋಸ್ಟಲ್ ಸಿಬ್ಬಂದಿಯ ಮೇಲೆ ಸೇನೆಯ ಗುಪ್ತಚರ ಏಜನ್ಸಿ ಕೆಲ ಕಾಲದಿಂದ ನಿಗಾ ಇಟ್ಟಿತ್ತು. ಈತ ರೈಲ್ವೆ ಪೋಸ್ಟಲ್ ಸೇವೆಯ ಸಾರ್ಟಿಂಗ್ ಹಬ್ ಅಥವಾ ವಿಂಗಡಣಾ ಹಬ್‍ನಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಆಗಿದ್ದ. ಆರ್ಮಿ ಪೋಸ್ಟಲ್ ಆಫೀಸ್ ವಿಳಾಸಕ್ಕೆ ಬರುತ್ತಿದ್ದ ಎಲ್ಲಾ ಪತ್ರಗಳನ್ನೂ ಆತ ತೆರೆಯುತ್ತಿದ್ದನೆನ್ನಲಾಗಿದೆ.

ಸೇನೆಗೆ ತಲುಪಬೇಕಿದ್ದ ಅಧಿಕೃತ ಹಾಗೂ ಖಾಸಗಿ ಪತ್ರಗಳನ್ನು ಐಎಸ್‍ಐಗೆ ರವಾನಿಸಿದ ಪ್ರಕರಣ ಇದೇ ಮೊದಲು. ಮೂಲಗಳ ಪ್ರಕಾರ ಆರೋಪಿಯು ಫೇಸ್‍ಬುಕ್ ಮೆಸೆಂಜರ್ ಮೂಲಕ  ಮಹಿಳೆಯೊಬ್ಬಳ ಸಂಪರ್ಕಕ್ಕೆ ಬಂದಿದ್ದ. ಆಕೆ ತಾನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್ ಎಂಬಲ್ಲಿ  ನರ್ಸಿಂಗ್ ಸಹಾಯಕಿ ಎಂದು ಹೇಳಿಕೊಂಡಿದ್ದಳು. ಕೇವಲ ರಾತ್ರಿ ಪಾಳಿಯಲ್ಲಿ ಮಾತ್ರ ಕೆಲಸ ಮಾಡುತ್ತಿದ್ದ ಭರತ್,  ಎಪಿಒ ವಿಳಾಸದ ಎಲ್ಲಾ ಪತ್ರಗಳನ್ನು ತೆರೆದು ಅದರ ಫೋಟೋ ಕ್ಲಿಕ್ಕಿಸಿ ಆ ಮಹಿಳೆಗೆ ಕಳುಹಿಸುತ್ತಿದ್ದನೆನ್ನಲಾಗಿದೆ.

ಇಬ್ಬರ ನಡುವೆ ಆತ್ಮೀಯತೆ ಬಹಳಷ್ಟು ಹೆಚ್ಚಾಗಿತ್ತಲ್ಲದೆ ಇಬ್ಬರೂ ವಾಟ್ಸ್ಯಾಪ್ ಮೂಲಕ ವೀಡಿಯೋ ಕರೆಗಳನ್ನು ಮಾಡುತ್ತಿದ್ದರಲ್ಲದೆ ಆತ ಆಕೆಗೆ ಭಾರತೀಯ ಸಂಖ್ಯೆಯೊಂದರಿಂದ ವಾಟ್ಸ್ಯಾಪ್ ಖಾತೆಯನ್ನು ಸಕ್ರಿಯಗೊಳಿಸಿದ್ದ ಹಾಗೂ ಇದನ್ನೇ ಆಕೆ ಬಳಸುತ್ತಿದ್ದಳೆಂದು ಅಧಿಕಾರಿಗಳು ಹೇಳಿದ್ದಾರೆ.

ಈತನ ಕೃತ್ಯದಿಂದ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು, ಸೇನಾ ಘಟಕಗಳ ಪಿನ್‍ಕೋಡ್‍ಗಳು ಮತ್ತಿತರ ಮಾಹಿತಿ ಐಎಸ್‍ಐಗೆ  ಹೋಗಿತ್ತು. ಆತ ಸಂಪರ್ಕದಲ್ಲಿದ್ದ ಮಹಿಳೆ ಪಾಕ್ ಐಎಸ್‍ಐ ಏಜಂಟ್ ಎಂದು ತಿಳಿದು ಬಂದಿದೆ.

ಗುರುವಾರ ರಾತ್ರಿ ಭರತ್‍ನನ್ನು ಮಿಲಿಟರಿ ಇಂಟಲಿಜೆನ್ಸ್ (ಸದರ್ನ್ ಕಮಾಂಡ್) ಮತ್ತು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಅಧಿಕೃತ ಗೌಪ್ಯತಾ ಕಾಯಿದೆಯನ್ವಯ ಬಂಧಿಸಲಾಗಿದ್ದು, ಆತನ ವಿಚಾರಣೆ ನಡೆಯುತ್ತಿದೆ. ಆತನ ಮೊಬೈಲ್ ಫೋನಿನಿಂದ ರಕ್ಷಣಾ ಸಂಬಂಧಿ ಪತ್ರಗಳು ಹಾಗೂ ಫೋಟೋಗಳನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News