×
Ad

ಮಹಿಳೆಯರು ಇನ್ನೂ ಕ್ರಿಕೆಟ್ ಆಡಬಹುದು: ಅಫ್ಘಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಸ್ಪಷ್ಟನೆ

Update: 2021-09-11 20:49 IST

ಕಾಬೂಲ್, ಸೆ.11: ಅಫ್ಘಾನ್ ನಲ್ಲಿ ಮಹಿಳೆಯರಿಗೆ ಕ್ರಿಕೆಟ್ ಆಡಲು ಇನ್ನೂ ಅವಕಾಶವಿದೆ. ಇದನ್ನು ಯಾವ ರೀತಿ ಸಾಧ್ಯವಾಗಿಸಬಹುದು ಎಂಬ ಬಗ್ಗೆ ರೂಪುರೇಷೆಯನ್ನು ಶೀಘ್ರ ರೂಪಿಸಲಾಗುವುದು ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅಜೀಝುಲ್ಲಾ ಫಜ್ಲಿ ಹೇಳಿದ್ದಾರೆ.

ಮಹಿಳೆಯರಿಗೆ ಕ್ರಿಕೆಟ್ ಆಡಲು ಯಾವ ರೀತಿ ಅವಕಾಶ ಕಲ್ಪಿಸುತ್ತೇವೆ ಎಂಬುದು ಅತೀ ಶೀಘ್ರವೇ ನಿಮಗೆ ಸ್ಪಷ್ಟವಾಗಲಿದೆ. ಈ ನಿಟ್ಟಿನಲ್ಲಿ ಇಡುವ ಹೆಜ್ಜೆಯ ಬಗ್ಗೆ ಅತೀ ಶೀಘ್ರ ನಿಮಗೆ ಶುಭಸುದ್ಧಿ ತಲುಪಲಿದೆ. ಅಫ್ಘಾನ್ ಮಹಿಳಾ ಕ್ರಿಕೆಟ್ ತಂಡದ ಎಲ್ಲಾ 25 ಆಟಗಾರ್ತಿಯರೂ ದೇಶದಲ್ಲೇ ಉಳಿದಿದ್ದು, ದೇಶ ಬಿಟ್ಟು ತೆರಳಲು ಇಚ್ಚಿಸಿಲ್ಲ ಎಂದು ಫಜ್ಲಿ ಹೇಳಿರುವುದಾಗಿ ಆಸ್ಟ್ರೇಲಿಯಾದ ಎಸ್ಬಿಎಸ್ ರೇಡಿಯೊ ಶುಕ್ರವಾರ ವರದಿ ಮಾಡಿದೆ.

ಶುಕ್ರವಾರ ಇದೇ ಮಾಧ್ಯಮದೊಂದಿಗೆ ಮಾತನಾಡಿದ್ದ ತಾಲಿಬಾನ್ ನ ಸಾಂಸ್ಕತಿಕ ಆಯೋಗದ ಉಪಾಧ್ಯಕ್ಷ ಅಹ್ಮದುಲ್ಲಾ ವಾಸಿಖ್ ಅವರು ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ, ಅಫ್ಘಾನ್ ಪುರುಷರ ತಂಡದೆದುರು ನವೆಂಬರ್ ನಲ್ಲಿ ಹೋರ್ಬರ್ಟ್ನಲ್ಲಿ ಆಯೋಜಿಸಿರುವ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸುವುದಾಗಿ ಎಚ್ಚರಿಸಿತ್ತು.

ತಕ್ಷಣ ಎಚ್ಚೆತ್ತುಕೊಂಡಿದ್ದ ಅಫ್ಘಾನ್ ಕ್ರಿಕೆಟ್ ಮಂಡಳಿ, ಅಫ್ಘಾನ್ ನ ಸಂಸ್ಕತಿ ಅಥವಾ ಧಾರ್ಮಿಕ ಪರಿಸ್ಥಿತಿಯನ್ನು ಬದಲಾಯಿಸುವ ಅಧಿಕಾರ ತನಗಿಲ್ಲ. ಆದ್ದರಿಂದ ತಾಲಿಬಾನ್ ನ ನಿರ್ಧಾರಕ್ಕೆ ಪುರುಷರ ಕ್ರಿಕೆಟ್ ತಂಡಕ್ಕೆ ಶಿಕ್ಷೆ ವಿಧಿಸಬಾರದು ಎಂದು ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News