9/11ರ ದಾಳಿಯ ಸಂತ್ರಸ್ತರಿಗೆ ಬ್ರಿಟನ್ ರಾಣಿ ಶೃದ್ಧಾಂಜಲಿ ಸಲ್ಲಿಕೆ
ಲಂಡನ್, ಸೆ.11: ಅಮೆರಿಕದ ಮೇಲೆ 2001ರ ಸೆಪ್ಟಂಬರ್ 11ರಂದು (9/11) ನಡೆದ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರು , ನೊಂದವರು ಹಾಗೂ ಬದುಕಿ ಉಳಿದವರ ಪರವಾಗಿ ತಾನು ಪ್ರಾರ್ಥಿಸುತ್ತೇನೆ ಎಂದು ಬ್ರಿಟನ್ನ ರಾಣಿ ಎಲಿಝಬೆತ್ ಹೇಳಿದ್ದಾರೆ.
ನನ್ನ, ಕುಟುಂಬದ ಮತ್ತು ದೇಶದ ಭಾವನೆ ಮತ್ತು ಪ್ರಾರ್ಥನೆ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ, ಸಂತ್ರಸ್ತರಾದ ಮತ್ತು ಪರಿಣಾಮಕ್ಕೆ ಒಳಗಾದ , ಈ ಸಂದರ್ಭ ತುರ್ತು ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ನಿಯೋಜನೆಗೊಂಡಿದ್ದ ಕಾರ್ಯಕರ್ತರ ಪರವಾಗಿ ಸದಾ ಇರುತ್ತದೆ ಎಂದು 9/11ರ ವಾರ್ಷಿಕ ದಿನದ ಸಂದರ್ಭ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ಗೆ ಕಳಿಸಿರುವ ಸಂದೇಶದಲ್ಲಿ ಬ್ರಿಟನ್ ರಾಣಿ ಹೇಳಿದ್ದಾರೆ.
2010ರಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ಗೆ ನೀಡಿದ್ದ ಭೇಟಿಯ ನೆನಪು ಇನ್ನೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಇದರ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಹಲವು ದೇಶದ, ಹಲವು ಧರ್ಮದ ಜನತೆ ಶೃದ್ಧಾಂಜಲಿ ಸಲ್ಲಿಸುವ ಜತೆಗೇ, ಈ ಪ್ರಸಿದ್ಧ ತಾಣವನ್ನು ಮರು ನಿರ್ಮಿಸಲು ಜತೆಗೂಡಿ ಕೆಲಸ ಮಾಡಿದ ಹಲವು ಸಮುದಾಯದವರ ದೃಢಚಿತ್ತ, ಮನೋಬಲಕ್ಕೆ ಕೂಡಾ ಗೌರವ ಸಲ್ಲಿಸಬೇಕಾಗಿದೆ ಎಂದವರು ಹೇಳಿದ್ದಾರೆ.
2001ರ ಸೆಪ್ಟಂಬರ್ 11ರಂದು ಅಲ್ಖೈದಾ ಸಂಘಟನೆಯ 11 ಉಗ್ರರು ಅಮೆರಿಕದ 4 ವಾಣಿಜ್ಯ ವಿಮಾನಗಳನ್ನು ಹೈಜಾಕ್ ಮಾಡಿದ್ದು 2 ವಿಮಾನಗಳನ್ನು ನ್ಯೂಯಾರ್ಕ್ನ ವರ್ಲ್ಡ್ ಟ್ರೇಡ್ ಸೆಂಟರ್ನ ಅವಳಿ ಕಟ್ಟಡಕ್ಕೆ ಡಿಕ್ಕಿ ಹೊಡೆಸಿದ್ದರು. 3ನೇ ವಿಮಾನ ಪೆಂಟಗಾನ್ನತ್ತ ಚಲಿಸಿದ್ದರೆ 4ನೇ ವಿಮಾನ ಪೆನಿನ್ಸಿಲ್ವೇನಿಯಾದಲ್ಲಿ ಅಪಘಾತಕ್ಕೆ ಈಡಾಗಿತ್ತು. ಈ ವಿಧ್ವಂಸ ಕೃತ್ಯದಲ್ಲಿ 2,977 ಮಂದಿ ಮೃತಪಟ್ಟಿದ್ದು ಇದರಲ್ಲಿ 67 ಬ್ರಿಟಿಷ್ ಪ್ರಜೆಗಳೂ ಸೇರಿದ್ದರು.