ಮಹಿಳೆಯರ ಸ್ನಾತಕೋತ್ತರ ಪದವಿ ಸಹಿತ ಉನ್ನತ ಅಧ್ಯಯನಕ್ಕೆ ಅವಕಾಶ: ತಾಲಿಬಾನ್

Update: 2021-09-12 16:50 GMT
ಅಫ್ಘಾನ್ ನ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಖಿ ಹಕ್ಕಾನಿ [photo: twitter.com/UPSCPractice]

 ಕಾಬೂಲ್, ಸೆ.12: ಮಹಿಳೆಯರು ಸ್ನಾತಕೋತ್ತರ ಪದವಿ ಸಹಿತ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮುಂದುವರಿಸಬಹುದು. ಆದರೆ ತರಗತಿಗಳಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶ ಇರಬೇಕು ಮತ್ತು ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವುದು ಕಡ್ಡಯವಾಗಿದೆ ಎಂದು ತಾಲಿಬಾನ್ ಹೇಳಿದೆ.

 ಈ ಬಗ್ಗೆ ರೂಪಿಸಲಾದ ಹೊಸ ನೀತಿಯ ಬಗ್ಗೆ ಅಫ್ಘಾನ್ ನ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಖಿ ಹಕ್ಕಾನಿ ರವಿವಾರ ಮಾಹಿತಿ ನೀಡಿದ್ದಾರೆ. ಕಳೆದ 20 ವರ್ಷದಲ್ಲಿ ಮಹಿಳೆಯರ ಕುರಿತ ತಾಲಿಬಾನ್ ನ ನಿಲುವಿನಲ್ಲಿ ಬದಲಾವಣೆಯಾಗಿದೆ ಎಂದು ಪ್ರತಿಪಾದಿಸಿದ ಅವರು ಈಗ ಏನಿದೆಯೋ ಅದರ ಮೇಲೆ ನಿರ್ಮಾಣ ಕಾರ್ಯ ಮುಂದುವರಿಸಲಿದ್ದೇವೆ ಎಂದರು.

ಮಹಿಳಾ ವಿವಿ ವಿದ್ಯಾರ್ಥಿಗಳಿಗೆ ಕಡ್ಡಾಯ ವಸ್ತ್ರಸಂಹಿತೆ ಸಹಿತ ಹಲವೊಂದು ನಿರ್ಬಂಧಗಳಿವೆ. ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ ಕಲಿಯಲು ಅವಕಾಶ ನೀಡುವುದಿಲ್ಲ, ಸಹಶಿಕ್ಷಣಕ್ಕೂ ಅವಕಾಶ ಇಲ್ಲ. ತರಗತಿಗಳಲ್ಲಿ ಕಲಿಸುವ ಪಠ್ಯವಿಷಯಗಳನ್ನೂ ಪರಿಶೀಲಿಸಿದ ಬಳಿಕವೇ ಅಂತಿಮಗೊಳಿಸಲಾಗುವುದು. ಅಫ್ಘಾನ್ ವಿವಿಯ ಪದವೀಧರರು ವಿಶ್ವದ ಇತರ ವಿವಿ ಪದವೀಧರರೊಂದಿಗೆ ಸ್ಪರ್ಧಾತ್ಮಕವಾಗಿರಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಹಕ್ಕಾನಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಅಫ್ಘಾನ್ ತಾಲಿಬಾನ್ ನಿಯಂತ್ರಣಕ್ಕೆ ಬರುವ ಮೊದಲು ದೇಶದ ವಿವಿಗಳಲ್ಲಿ ಸಹಶಿಕ್ಷಣ ಪದ್ಧತಿಯಿತ್ತು ಮತ್ತು ಮಹಿಳೆಯರಿಗೆ ವಸ್ತ್ರಸಂಹಿತೆ ಕಡ್ಡಾಯವಾಗಿರಲಿಲ್ಲ. ನೂತನ ಶಿಕ್ಷಣ ನೀತಿಯಲ್ಲಿ ಈ ಪದ್ಧತಿಗೆ ತಿಲಾಂಜಲಿ ನೀಡುವ ಸೂಚನೆಯಿದೆ.

ಈ ಹಿಂದೆ ತಾಲಿಬಾನ್ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಸಂಗೀತ ಮತ್ತು ಕಲೆಗೆ ನಿಷೇಧ ಹೇರಲಾಗಿತ್ತು. ಆದರೆ ಈಗ ತನ್ನ ನಿಲುವು ಬದಲಾಗಿದೆ ಎಂದು ತಾಲಿಬಾನ್ ಹೇಳುತ್ತಿದೆ. ಅಫ್ಘಾನ್ನಲ್ಲಿ ರಚನೆಯಾಗಿರುವ ಸರಕಾರಕ್ಕೆ ಅಂತರ್ ರಾಷ್ಟ್ರೀಯ ಸಮುದಾಯದ ಮಾನ್ಯತೆ ದಕ್ಕಿಸಿಕೊಳ್ಳಲು ತಾಲಿಬಾನ್ ಇದೀಗ ಶತಪ್ರಯತ್ನ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News