ಡ್ರೋನ್ ಚಲಾಯಿಸಲು ಮಧ್ಯಪ್ರಾಚ್ಯ ಯೋಧರಿಗೆ ಇರಾನ್ ತರಬೇತಿ: ಇಸ್ರೇಲ್ ಆರೋಪ

Update: 2021-09-12 16:51 GMT

ಜೆರುಸಲೇಂ, ಸೆ.12: ಡ್ರೋನ್ ಗಳ ನಿರ್ವಹಣೆ ಮತ್ತು ಚಲಾಯಿಸುವ ಕುರಿತು ವಿದೇಶೀ ಸೈನಿಕರಿಗೆ ಇರಾನ್ ನ ಇಸ್ಪಹಾನ್ ನಗರದ ಬಳಿ ಇರುವ ವಾಯುನೆಲೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಇಸ್ರೇಲ್ನ ರಕ್ಷಣಾ ಸಚಿವರು ಆರೋಪಿಸಿದ್ದಾರೆ. ಒಮಾನ್ ಬಂದರಿನಿಂದ ಹೊರಟಿದ್ದ ಇಸ್ರೇಲ್ನ ತೈಲ ಟ್ಯಾಂಕರ್ ಮೇಲೆ ಇತ್ತೀಚೆಗೆ ನಡೆದ ಶಂಕಿತ ಡ್ರೋನ್ ದಾಳಿಯ ಬಳಿಕ ಇರಾನ್ ನಡೆಯನ್ನು ವಿಶ್ವದ ರಾಷ್ಟ್ರಗಳು ಎಚ್ಚರಿಕೆಯಿಂದ ಗಮನಿಸುತ್ತಿವೆ.

ಭಯೋತ್ಪಾದಕ ಕೃತ್ಯ ನಡೆಸುವ ಯೆಮೆನ್, ಇರಾಕ್, ಸಿರಿಯಾ ಮತ್ತು ಲೆಬನಾನ್ನ ಹೋರಾಟಗಾರರಿಗೆ ಇರಾನ್ ನ ಇಶ್ಫಹಾನ್ ನಗರದ ಉತ್ತರದಲ್ಲಿರುವ ಕಶನ್ ವಾಯುನೆಲೆಯಲ್ಲಿ ಇರಾನ್ ನಲ್ಲಿ ನಿರ್ಮಿತ ಯುಎವಿ(ಮಾನವರಹಿತ ವೈಮಾನಿಕ ವಾಹನ)ಗಳ ಚಲಾವಣೆ, ನಿರ್ವಹಣೆ ಬಗ್ಗೆ ತರಬೇತಿ ನೀಡುತ್ತಿರುವ ಮಾಹಿತಿ ಲಭಿಸಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಬೆನ್ನೀ ಗಾಂಟ್ಜ್ ರವಿವಾರ ಹೇಳಿದ್ದಾರೆ.

 ಗಾಝಾ ಪಟ್ಟಿ ಪ್ರದೇಶದಲ್ಲಿ ಡ್ರೋನ್ ನಿರ್ಮಾಣ ಆರಂಭಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಡ್ರೋನ್ ತಂತ್ರಜ್ಞಾನವನ್ನು ವರ್ಗಾಯಿಸಲು ಇರಾನ್ ಪ್ರಯತ್ನಿಸುತ್ತಿದೆ. ಕಶನ್ ವಾಯುನೆಲೆಯ ರನ್ವೇಯಲ್ಲಿ ಯುಎವಿಗಳ ದಾಸ್ತಾನು ಇರಿಸಿರುವುದು ಉಪಗ್ರಹದ ಚಿತ್ರಗಳಿಂದ ತಿಳಿದುಬಂದಿದೆ ಎಂದು ಟೆಲ್ಅವೀವ್ ಬಳಿಯ ರೀಚ್ಮನ್ ವಿವಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಗಾಂಟ್ಸ್ ಹೇಳಿದರು.

ಇಸ್ರೇಲ್ನ ಸಂಸ್ಥೆಯೊಂದರ ಮಾಲಕತ್ವದ ಮರ್ಸರ್ ಸ್ಟ್ರೀಟ್ ಎಂಬ ತೈಲ ಸಾಗಾಟದ ಹಡಗಿನಲ್ಲಿ ಜುಲೈ 29ರಂದು ನಡೆದ ಸ್ಫೋಟದಲ್ಲಿ ಇಬ್ಬರು ಸಿಬಂದಿಗಳು ಮೃತಪಟ್ಟಿದ್ದರು. ಈ ದಾಳಿಯ ಬಗ್ಗೆ ಪರಿಶೋಧನೆ ನಡೆಸಿದ್ದ ಅಮೆರಿಕದ ಸ್ಫೋಟಕ ತಜ್ಞರು, ಸ್ಫೋಟಕ ಹೊತ್ತೊಯ್ದ ಡ್ರೋನ್ ಇರಾನ್ ನಲ್ಲಿ ನಿರ್ಮಾಣಗೊಂಡಿದೆ ಎಂದು ವರದಿ ನೀಡಿದ್ದರು. ಇರಾನ್ ಈ ಆರೋಪವನ್ನು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News