ಹರ್ಯಾಣ: ಕಾಂಗ್ರೆಸ್ ಸೇರಲು ಮುಂದಾದ ಬಿಜೆಪಿಯ ಇಬ್ಬರು ನಾಯಕರು
ಹೊಸದಿಲ್ಲಿ: ಬಿಜೆಪಿಯ ಇಬ್ಬರು ನಾಯಕರು ಹಾಗೂ ಇಂಡಿಯನ್ ನ್ಯಾಶನಲ್ ಲೋಕ ದಳದ ಓರ್ವ ನಾಯಕ ಹರ್ಯಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಸೇರುವವರ ಪೈಕಿ ಬಂಡಾಯ ಬಿಜೆಪಿ ನಾಯಕ ಪವನ್ ಬೆನಿವಾಲ್, ಕೈಗಾರಿಕೋದ್ಯಮಿ ಅಶೋಕ್ ಗೋಯೆಲ್ ಹಾಗೂ ಮಾಜಿ ಸಂಸತ್ ಸದಸ್ಯ, ಐಎನ್ ಎಲ್ ಡಿಯೊಂದಿಗೆ ದೀರ್ಘ ನಂಟು ಕಡಿದುಕೊಂಡಿರುವ ತಾರಾ ಸಿಂಗ್ ಅವರ ಪುತ್ರ ಕನ್ವರ್ಜಿತ್ ಸಿಂಗ್ ಸೇರಿದ್ದಾರೆ.
2014 ರ ವಿಧಾನಸಭಾ ಚುನಾವಣೆಗೆ ಮುನ್ನ ಬೆನಿವಾಲ್ ಅವರು ಐಎನ್ಎಲ್‌ಡಿ ತೊರೆದು ಬಿಜೆಪಿ ಸೇರಿದ್ದರು. ಅವರು 2014 ಮತ್ತು 2019 ರಲ್ಲಿ ಎಲ್ಲಾನಾಬಾದ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಐಎನ್‌ಎಲ್‌ಡಿಯ ಅಭಯ್ ಚೌಟಾಲಾ ವಿರುದ್ಧ ಸ್ಪರ್ಧಿಸಿದ್ದರು. ಆದರೆ ಎರಡು ಬಾರಿ ಸೋತಿದ್ದರು. ಈಗ ನಡೆಯುತ್ತಿರುವ ರೈತರ ಆಂದೋಲನವನ್ನು ಬೆಂಬಲಿಸಿ ಅಭಯ್ ಚೌಟಾಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಎಲ್ಲಾನಾಬಾದ್ ಕ್ಷೇತ್ರದಲ್ಲಿ ಮುಂಬರುವ ಕೆಲವು ತಿಂಗಳಲ್ಲಿ ಉಪಚುನಾವಣೆ ನಡೆಯಲಿದೆ. ಬೆನಿವಾಲ್ ಎಲ್ಲಾನಾಬಾದ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.
ಹೊಸದಿಲ್ಲಿಯಲ್ಲಿ ಪಕ್ಷದ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಈ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ.