2017ಗಿಂತ ಮೊದಲು 'ಅಬ್ಬಾ ಜಾನ್' ಎಂದು ಹೇಳುವವರಿಗೆ ಮಾತ್ರ ರಾಜ್ಯದಲ್ಲಿ ರೇಷನ್ ದೊರಕುತ್ತಿತ್ತು ಎಂದ ಆದಿತ್ಯನಾಥ್

Update: 2021-09-13 09:55 GMT

ಲಕ್ನೋ: ಉತ್ತರ ಪ್ರದೇಶದಲ್ಲಿ 2017ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದಲ್ಲಿ ಒಂದು ಸಮುದಾಯ ಮಾತ್ರ ರೇಷನ್ ಪಡೆಯುತ್ತಿತ್ತು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವಿವಾರ ಹೇಳಿಕೊಂಡಿದ್ದಾರೆ.

ಕುಶಿನಗರ ಪಟ್ಟಣದಲ್ಲಿ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ಅವರು "ನಿಮಗೆ 2017ಗಿಂತ ಮುಂಚೆ ರೇಷನ್ ದೊರೆತಿತ್ತೇ?" ಎಂದು ಪ್ರಶ್ನಿಸಿದರು. "ಈ ಹಿಂದೆ ಕೇವಲ ಅಬ್ಬಾ ಜಾನ್ ಎಂದು ಹೇಳುವವರು ಮಾತ್ರ ರೇಷನ್ ಅನ್ನು ಅರಗಿಸಿಕೊಳ್ಳುತ್ತಿದ್ದರು.  ಶ್ರೀನಗರಕ್ಕೆಂದು ಮೀಸಲಾಗಿದ್ದ ರೇಷನ್ ನೇಪಾಳಕ್ಕೆ ಹೋಗಿ ನಂತರ ಬಾಂಗ್ಲಾದೇಶಕ್ಕೆ ಹೋಗುತ್ತಿತ್ತು" ಎಂದು ಹೇಳಿಕೆ ನೀಡಿದ್ದಾರೆ.

ನನ್ನ ಆಡಳಿತದಲ್ಲಿ ಯಾರಾದರೂ ಬಡವರಿಂದ ರೇಷನ್ ಕಸಿದರೆ ಅಂತಹ ವ್ಯಕ್ತಿ ಖಂಡಿತವಾಗಿಯೂ ಜೈಲಿಗೆ ಹೋಗುತ್ತಾರೆ ಎಂದೂ ಅವರು ಹೇಳಿದರು.

ಆದಿತ್ಯನಾಥ್ ಅವರ ಈ ಹೇಳಿಕೆಗಳು ರಾಜ್ಯದಲ್ಲಿ 2017ರ ತನಕ ಅಧಿಕಾರದಲ್ಲಿದ್ದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸರಕಾರದ ಟೀಕೆಯೆಂದೇ ತಿಳಿಯಲಾಗಿದೆ.

"1947ರಲ್ಲಿ ಆರಂಭವಾದ ರಾಜಕೀಯ ಜಾತಿ,ಧರ್ಮ, ಪ್ರಾಂತ್ಯ, ಭಾಷೆ, ಕುಟುಂಬ ಮತ್ತು ವಂಶಕ್ಕೆ ಸೀಮಿತವಾಗಿತ್ತು, ಪ್ರಧಾನಿ ಮೋದಿ ಅದನ್ನು ಗ್ರಾಮಗಳಿಗೆ, ಬಡವರಿಗೆ, ರೈತರಿಗೆ, ಯುವಜನರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಮಾಡಿದರು" ಎಂದು ಆದಿತ್ಯನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News