ಕಾಬೂಲ್ ಗೆ ಆಗಮಿಸಿದ ಪಾಕ್ ವಾಣಿಜ್ಯ ವಿಮಾನ

Update: 2021-09-13 16:54 GMT

ಕಾಬೂಲ್, ಸೆ.13: ಪಾಕಿಸ್ತಾನದ ವಾಣಿಜ್ಯ ವಿಮಾನ ಸೋಮವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು ಕಳೆದ ತಿಂಗಳು ಅಫ್ಗಾನಿಸ್ತಾನದ ಆಡಳಿತವನ್ನು ತಾಲಿಬಾನ್ ಮತ್ತೆ ನಿಯಂತ್ರಣಕ್ಕೆ ಪಡೆದ ಬಳಿಕ ಅಫ್ಘಾನ್ ಗೆ ಆಗಮಿಸಿದ ಪ್ರಪ್ರಥಮ ಅಂತರ್ ರಾಷ್ಟ್ರೀಯ ವಾಣಿಜ್ಯ ವಿಮಾನ ಇದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇಸ್ಲಾಮಾಬಾದ್ ನಿಂದ ಕಾಬೂಲ್ಗೆ ಆಗಮಿಸಿದ ಈ ವಿಮಾನದಲ್ಲಿ ಸುಮಾರು 10 ಪ್ರಯಾಣಿಕರಿದ್ದರು, ಬಹುಷಃ ಇವರೆಲ್ಲಾ ವಿಮಾನದ ಸಿಬಂದಿ ವರ್ಗದವರಾಗಿರಬಹುದು. ಈ ವಿಮಾನದಲ್ಲಿ ಸುಮಾರು 100 ಪ್ರಯಾಣಿಕರು ಇಸ್ಲಾಮಾಬಾದ್ ಗೆ ರಿಟರ್ನ್ ಟಿಕೆಟ್ ಕಾಯ್ದಿರಿಸಿದ್ದಾರೆ. ಇವರಲ್ಲಿ ಹೆಚ್ಚಿನವರು ವಿಶ್ವಬ್ಯಾಂಕ್ನಂತಹ ಅಂತರ್ ರಾಷ್ಟ್ರೀಯ ಸಂಸ್ಥೆಗಳ ಸಿಬ್ಬಂದಿಯ ಸಂಬಂಧಿಕರು ಎಂದು ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. 

ಅಫ್ಗಾನ್ ಗೆ ಶೀಘ್ರ ವಾಣಿಜ್ಯ ವಿಮಾನ ಸೇವೆ ಆರಂಭಿಸಲು ತಾನು ಉತ್ಸುಕನಾಗಿರುವುದಾಗಿ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ವೇಸ್(ಪಿಐಎ) ಕಳೆದ ವಾರ ಹೇಳಿಕೆ ನೀಡಿತ್ತು. ವಿಮಾನದಿಂದ ಇಳಿಯುವ ಪ್ರಯಾಣಿಕರನ್ನು ಟರ್ಮಿನಲ್ಗೆ ಕರೆದೊಯ್ಯಲು ಸಿದ್ಧವಾಗಿರಿಸಿದ್ದ ಬಸ್ಸಿನ ಮೇಲೆ ‘ಅಫ್ಘಾನ್ ಗೆ ಸ್ವಾಗತ’ ಎಂದು ಬರೆಯಲಾಗಿತ್ತು. ಆದರೆ ಪ್ರಯಾಣಿಕರು ಕಾಲ್ನಡಿಗೆಯಲ್ಲೇ ತೆರಳಿದರು. ಇದೊಂದು ಅಪೂರ್ವ ಕ್ಷಣವಾಗಿದ್ದು ಇದಕ್ಕಾಗಿ ಕಾಯುತ್ತಿದ್ದೆವು. ಇದು ಇತರ ವಿಮಾನಸಂಸ್ಥೆಗಳಿಗೂ ಪ್ರೇರಣೆ ನೀಡಬಹುದು ಎಂದು ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.

ಕಳೆದ ವಾರ ಖತರ್ ಏರ್ವೇಸ್ ಸಂಸ್ಥೆ ಕಾಬೂಲ್ ನಿಲ್ದಾಣದಿಂದ ಹಲವು ವಿಮಾನಗಳ ಕಾರ್ಯಾಚರಣೆ ನಡೆಸಿತ್ತು. ಆದರೆ ಇದು ವಾಣಿಜ್ಯ ವಿಮಾನಗಳಲ್ಲ, ಅಫ್ಘಾನ್ ನಲ್ಲಿ ಇನ್ನೂ ಉಳಿದುಕೊಂಡಿರುವ ವಿದೇಶೀಯರು ಮತ್ತು ದೇಶ ಬಿಟ್ಟು ತೆರಳಲು ಉತ್ಸುಕರಾಗಿರುವ ಅಫ್ಗನ್ನರನ್ನು ಸ್ಥಳಾಂತರಿಸುವ ಬಾಡಿಗೆ ವಿಮಾನಗಳಾಗಿದ್ದವು. ಅಫ್ಘಾನ್ ಏರ್ಲೈನ್ ಸಂಸ್ಥೆ ಸೆಪ್ಟಂಬರ್ 3ರಿಂದ ದೇಶೀಯ ವಿವಾನ ಸೇವೆಯನ್ನು ಆರಂಭಿಸಿದೆ.

ವಿದೇಶಿ ಪಡೆಗಳನ್ನು ಅಫ್ಗಾನ್ನಿಂದ ಹಿಂಪಡೆಯುವ ನಿರ್ಧಾರ ಪ್ರಕಟಿಸಿದ ಬಳಿಕ ಆಗಸ್ಟ್ 31ರೊಳಗೆ ಅಫ್ಘಾನ್ ನಿಂದ ತೆರವು ಕಾರ್ಯಾಚರಣೆ ಪೂರ್ಣಗೊಳಿಸುವುದಾಗಿ ಅಮೆರಿಕ ಹೇಳಿತ್ತು. ಅಂತಿಮವಾಗಿ ಗೊಂದಲ, ಅವ್ಯವಸ್ಥೆ, ಹಿಂಸೆಯ ನಡುವೆ ಈ ಪ್ರಕ್ರಿಯೆ ಪೂರ್ಣಗೊಂಡಾಗ ಕಾಬೂಲ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಅಸ್ತವ್ಯಸ್ತಗೊಂಡಿತ್ತು. ಬಳಿಕ ಖತರ್ ಮತ್ತಿತರ ದೇಶಗಳ ತಾಂತ್ರಿಕ ನೆರವು ಪಡೆದು ವಿಮಾನ ನಿಲ್ದಾಣದ ಕಾರ್ಯಾಚರಣೆ ಮರು ಆರಂಭಿಸುವ ಉಪ್ರಮಕ್ಕೆ ತಾಲಿಬಾನ್ ಚಾಲನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News