ಅಫ್ಘಾನ್ ಗೆ ಖತರ್ ವಿದೇಶ ಸಚಿವರ ಭೇಟಿ: ಅಫ್ಘಾನ್ ಪ್ರಧಾನಿ ಜತೆ ಚರ್ಚೆ

Update: 2021-09-13 16:55 GMT

ಕಾಬೂಲ್, ಸೆ.13: ಖತರ್ ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ರವಿವಾರ ಅಫ್ಘಾನ್ ಗೆ ಭೇಟಿ ನೀಡಿ ತಾಲಿಬಾನ್ ನೇಮಿಸಿದ ಪ್ರಧಾನಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ. ಕಳೆದ ತಿಂಗಳು ಅಫ್ಘಾನ್ ತಾಲಿಬಾನ್ ನಿಯಂತ್ರಣಕ್ಕೆ ಬಂದ ಬಳಿಕ ಆ ದೇಶಕ್ಕೆ ಉನ್ನತ ಮಟ್ಟದ ವಿದೇಶಿ ನಿಯೋಗ ನೀಡಿರುವ ಪ್ರಪ್ರಥಮ ಭೇಟಿ ಇದಾಗಿದೆ.

ಖತರ್ ವಿದೇಶಿ ಸಚಿವರು ಅಫ್ಘಾನ್ ಪ್ರಧಾನಿ ಮುಲ್ಲಾ ಮುಹಮ್ಮದ್ ಹಸನ್ ಅಖುಂದ್ ಹಾಗೂ ಹಲವು ಹಿರಿಯ ಸಚಿವರನ್ನು ಭೇಟಿಯಾದರು . ದ್ವಿಪಕ್ಷೀಯ ಸಂಬಂಧ, ಮಾನವೀಯ ನೆರವು, ಆರ್ಥಿಕ ಅಭಿವೃದ್ಧಿ, ಜಗತ್ತಿನೊಂದಿಗೆ ಸಂವಹನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ. ಸಭೆಯಲ್ಲಿ ಉಪಪ್ರಧಾನಿ ಅಬ್ದುಲ್ ಸಲಾಮ್ ಹನಫಿ, ವಿದೇಶ ಸಚಿವ ಅಮೀರ್ ಖಾನ್ ಮುತ್ತಾಖಿ, ರಕ್ಷಣಾ ಸಚಿವ ಯಾಕೂಬ್ ಮುಜಾಹಿದ್, ಒಳಾಡಳಿತ ಸಚಿವ ಸಿರಾಜುದ್ದೀನ್ ಹಕ್ಕಾನಿ, ಗುಪ್ತಚರ ಇಲಾಖೆ ಮುಖ್ಯಸ್ಥ ಅಬ್ದುಲ್ ಹಖ್ ವಾಸಿಖ್ ಪಾಲ್ಗೊಂಡಿದ್ದರು ಎಂದು ಅಲ್ಜಝೀರಾ ಟಿವಿ ವದಿ ಮಾಡಿದೆ.

ತಾಲಿಬಾನ್ ಮೇಲೆ ಅತೀ ಹೆಚ್ಚು ಪ್ರಭಾವ ಹೊಂದಿರುವ ದೇಶಗಳಲ್ಲಿ ಒಂದಾಗಿರುವ ಖತರ್, ಅಫ್ಗಾನ್ನಿಂದ ಅಮೆರಿಕ ಹಾಗೂ ಇತರ ದೇಶಗಳ ಪ್ರಜೆಗಳ ತೆರವು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಫ್ಘಾನ್ ನಿಂದ ಅಮೆರಿಕ ಪಡೆಗಳ ವಾಪಸಾತಿ ಕುರಿತ ನಿರ್ಧಾರವನ್ನು ಖತರ್ ನ ರಾಜಧಾನಿ ದೋಹದಲ್ಲಿರುವ ತಾಲಿಬಾನ್ನ ರಾಜಕೀಯ ಸಮಿತಿು ಉಪಸ್ಥಿತಿಯಲ್ಲಿ ಕೈಗೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News