ಉತ್ತರದ ಕತ್ತೆಯನ್ನು ದಕ್ಷಿಣದ ಕುದುರೆ ಮಾಡಲು ಹೊರಟವರು!

Update: 2021-09-15 07:30 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕರ್ನಾಟಕದಲ್ಲಿ ಕನ್ನಡವನ್ನು ಹಂತ ಹಂತವಾಗಿ ಸಾಯಿಸಿ, ಈ ಜಾಗದಲ್ಲಿ ಹಿಂದಿಯನ್ನು ಕೂರಿಸುವ ಪ್ರಯತ್ನವೊಂದು ಸದ್ದಿಲ್ಲದೆ ನಡೆಯುತ್ತಿದೆ. ಈಗಾಗಲೇ ಇಂಗ್ಲಿಷ್ ಮಾಧ್ಯಮ ಶಾಲೆಗಳ ಕಾರಣದಿಂದಾಗಿ ಕನ್ನಡವನ್ನು ಶಾಲೆಗಳ ಮೂಲಕ ಕಲಿಯುತ್ತಿದ್ದ ಮಕ್ಕಳಿಗೆ ಕನ್ನಡ ಅಪರಿಚಿತ ಭಾಷೆಯಾಗುತ್ತಿದೆ. ಒಂದು ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳು ಇಂಗ್ಲಿಷ್ ಬರೆಯಲು ತಿಣುಕಿದಂತೆಯೇ, ಇಂದು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳು ಕನ್ನಡದಲ್ಲಿ ಬರೆಯುವುದಕ್ಕೆ ತಿಣುಕುತ್ತಿದ್ದಾರೆ. ಇತರೆಲ್ಲ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿ ಕನ್ನಡವೇ ಮನೆ ಭಾಷೆಯಾಗಿ ಬಳಸುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿಲ್ಲ. ಕರ್ನಾಟಕದಲ್ಲಿ ಮಾತೃ ಭಾಷೆಯಾಗಿ ಕೊಂಕಣಿ, ಬ್ಯಾರಿ, ಕೊಡವ, ಹವ್ಯಕ, ತುಳು, ಮರಾಠಿ, ಮಲಯಾಳಂ, ಉರ್ದು ಇತ್ಯಾದಿಗಳನ್ನು ಬಳಸುವ ಸಮುದಾಯಗಳಿವೆ. ಇವರೆಲ್ಲರೂ ಕನ್ನಡವನ್ನು ತನ್ನದಾಗಿಸಿಕೊಳ್ಳುವುದು ಶಾಲೆಗಳಲ್ಲಿ ಮತ್ತು ಕನ್ನಡದ ಸಮಾಜಕ್ಕೆ ತೆರೆದುಕೊಂಡಾಗ. ಆದರೆ ಇಂದು ‘ಬದುಕುವುದಕ್ಕೆ ಇಂಗ್ಲಿಷ್ ಅನಿವಾರ್ಯ’ ಎನ್ನುವ ನಂಬಿಕೆ ಸಮಾಜದಲ್ಲಿ ಬಲವಾಗಿ ಬೇರೂರಿರುವುದರಿಂದ, ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಹೊರಳುತ್ತಿದ್ದಾರೆ.

ಕನ್ನಡ ಮಾಧ್ಯಮ ಕೇವಲ ಸರಕಾರಿ ಶಾಲೆಗಳಿಗಷ್ಟೇ ಸೀಮಿತವಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ವಿದ್ಯಾರ್ಥಿಗಳಲ್ಲಿ ಉಳಿಸಲೇಬೇಕು ಎಂದಾದರೆ ಇಂಗ್ಲಿಷ್ ಜೊತೆ ಜೊತೆಗೆ ಕನ್ನಡವನ್ನು ಕಲಿಸುವ ಏರ್ಪಾಡಾಗಬೇಕು ಎಂದು ಹಲವು ಶಿಕ್ಷಣ ತಜ್ಞರು ಅಭಿಪ್ರಾಯಗಳನ್ನು ಮುಂದಿಟ್ಟಿದ್ದಾರೆ. ಇಂಗ್ಲಿಷ್ ಮಾಧ್ಯಮವಿಲ್ಲ ಎನ್ನುವ ಕಾರಣಕ್ಕಾಗಿ ವಿದ್ಯಾರ್ಥಿಗಳ ಕೊರತೆಯಿಂದ ಸರಕಾರಿ ಶಾಲೆಗಳು ಮುಚ್ಚಬಾರದು. ಯಾಕೆಂದರೆ, ಸರಕಾರಿ ಶಾಲೆಗಳ ಉದ್ದೇಶ ಕನ್ನಡ ಭಾಷೆಯನ್ನು ಮೇಲೆತ್ತುವುದಷ್ಟೇ ಅಲ್ಲ, ಎಲ್ಲ ವರ್ಗಗಳಿಗೂ ಸಮಾನ ಶಿಕ್ಷಣ ನೀಡುವ ಮಹದುದ್ದೇಶವನ್ನು ಅವು ಹೊಂದಿವೆ. ಯಾವ ಭಾಷೆಯಲ್ಲಾದರೂ ಸರಿ, ದುರ್ಬಲ ವರ್ಗಗಳಿಗೂ ಶಿಕ್ಷಣ ದೊರಕುವಂತೆ ಮಾಡುವುದು ಸರಕಾರದ ಆದ್ಯತೆಯಾಗಬೇಕು. ಇದೇ ಸಂದರ್ಭದಲ್ಲಿ ಕನ್ನಡವನ್ನು ಜೊತೆಯಾಗಿ ಸರಕಾರಿ ಶಾಲೆಗಳ ಮೂಲಕವೇ ಹೇಗೆ ಉಳಿಸಬಹುದು ಎನ್ನುವುದಕ್ಕೂ ಯೋಜನೆಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಪಠ್ಯವನ್ನು ಬೋಧಿಸುವುದರಿಂದ, ಮಕ್ಕಳನ್ನು ಕನ್ನಡ-ಇಂಗ್ಲಿಷ್ ಎರಡರಲ್ಲೂ ಪರಿಣತರನ್ನಾಗಿ ಮಾಡಬಹುದು ಎಂದು ಚಿಂತಕರು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ.

ಶಾಲೆಗಳನ್ನು ಹೊರತು ಪಡಿಸಿದರೆ ಕನ್ನಡ ಉಳಿದಿರುವುದು ಬ್ಯಾಂಕ್, ಕೋರ್ಟ್, ಸರಕಾರಿ ಕಚೇರಿಗಳಂತಹ ಸಾರ್ವಜನಿಕರು ವ್ಯವಹರಿಸುವ ಪ್ರದೇಶಗಳಲ್ಲಿ. ಜನ ಸಾಮಾನ್ಯರು ತಮ್ಮ ಅಗತ್ಯಗಳಿಗಾಗಿ ಓಡಾಡುವ ಸ್ಥಳಗಳಲ್ಲಿ ಕನ್ನಡ ಕಡ್ಡಾಯ ಮಾಡಿದಾಗ, ಜನರಿಗೆ ಕನ್ನಡ ಕಲಿಯುವ ಅನಿವಾರ್ಯ ಸೃಷ್ಟಿಯಾಗುತ್ತದೆ. ಹೊರ ರಾಜ್ಯಗಳಿಂದ ಬಂದವರೂ, ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಕನ್ನಡ ಕಲಿಯುತ್ತಾರೆ. ವಿಪರ್ಯಾಸವೆಂದರೆ, ಇಂದು ಇಂಗ್ಲಿಷ್‌ನೊಂದಿಗೆ ಗುದ್ದಾಡುತ್ತಾ ಜೀವ ಉಳಿಸಿಕೊಂಡಿರುವ ಕನ್ನಡವನ್ನು ಸಂಪೂರ್ಣ ಇಲ್ಲವಾಗಿಸಲು ಹಿಂದಿ ಭಾಷೆ ಅಖಾಡಕ್ಕಿಳಿದಿದೆ. ಕನ್ನಡವನ್ನು ಸಂಪೂರ್ಣ ಸಾಯಿಸಿ ಆ ಜಾಗದಲ್ಲಿ ಹಿಂದಿಯನ್ನು ತಂದುಕೂರಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಬ್ಯಾಂಕ್‌ಗಳ ವಿಲೀನದ ಬಳಿಕ, ಕರ್ನಾಟಕದ ಬಹುತೇಕ ಬ್ಯಾಂಕ್‌ಗಳ ನಿಯಂತ್ರಣ ಉತ್ತರ ಭಾರತೀಯರ ಕೈ ಸೇರಿದೆ. ಕನ್ನಡವೇ ಬಾರದ ಪರಭಾಷಿಕರ ಜೊತೆಗೆ ಕನ್ನಡಿಗರು ಮೂಕಾಭಿನಯದ ಮೂಲಕ ತಮ್ಮ ಕೆಲಸ ಮಾಡಿಸಿಕೊಳ್ಳಬೇಕಾಗಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಅವರ ಭಾಷೆಯನ್ನು ಸಿಬ್ಬಂದಿ ಕಲಿಯುವ ಬದಲು, ಈ ಸಿಬ್ಬಂದಿಯ ಭಾಷೆಯನ್ನು ಕಲಿಯಬೇಕಾದ ಅಸಹಾಯಕ ಸ್ಥಿತಿ ಗ್ರಾಹಕರದು. ರೈಲ್ವೇ ಇಲಾಖೆ, ವಿಮಾನ ನಿಲ್ದಾಣಗಳಲ್ಲಿ ಮಾತ್ರವಲ್ಲ, ಇತ್ತೀಚೆಗೆ ರಾಜ್ಯ ಬಿಜೆಪಿ ನಾಯಕರ ಸಭೆ ಸಮಾರಂಭಗಳಲ್ಲೂ ಕನ್ನಡ ಸಂಪೂರ್ಣ ಕಡೆಗಣಿಸಲ್ಪಟ್ಟು, ಉತ್ತರ ಭಾರತದ ನಾಯಕರನ್ನು ಓಲೈಸುವುದಕ್ಕಾಗಿ ಅಲ್ಲಿ ಹಿಂದಿಯನ್ನು ವೀರಾಜಮಾನಗೊಳಿಸಲಾಗುತ್ತಿದೆ. ಈ ಬಗ್ಗೆ ಕನ್ನಡ ಪರ ಹೋರಾಟಗಾರರು ಈಗಾಗಲೇ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಹಿಂದಿ ಭಾರತದ ರಾಷ್ಟ್ರಭಾಷೆಯಲ್ಲ ಎನ್ನುವುದು ಸ್ಪಷ್ಟವಾಗಿದ್ದರೂ, ಹಿಂದಿಯನ್ನು ಬೇರೆ ಬೇರೆ ರೀತಿಯ ಒತ್ತಡಗಳ ಮೂಲಕ ಕೇಂದ್ರ ಸರಕಾರ ಹೇರಲು ಮುಂದಾಗಿದೆ. ಶಿಕ್ಷಣ ನೀತಿಯ ಮೂಲಕವೂ ವಿದ್ಯಾರ್ಥಿಗಳು ಹಿಂದಿಯನ್ನು ಕಲಿಯಲೇಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ. ಈ ದೇಶದ ಬಹು ಸಂಸ್ಕೃತಿಯನ್ನು ನಾಶ ಮಾಡಿ, ಅಲ್ಲಿ ವೈದಿಕ ಸಂಸ್ಕೃತಿಯನ್ನು ಸ್ಥಾಪಿಸುವ ಆರೆಸ್ಸೆಸ್‌ನ ಸಂಚಿನ ಒಂದು ಭಾಗ ಹಿಂದಿ ಹೇರಿಕೆ. ದೇಶದಲ್ಲಿನ ಭಾಷಾ ವೈವಿಧ್ಯವನ್ನು ನಾಶ ಮಾಡಿ ‘ಒಂದು ದೇಶಕ್ಕೆ ಒಂದೇ ಭಾಷೆ’ ಎನ್ನುವುದನ್ನು ಜಾರಿಗೆ ತರಲು ಅದು ಯೋಜನೆ ರೂಪಿಸಿದೆ. ಯಾವ ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದೆಯೋ ಅಲ್ಲೆಲ್ಲ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿದೆ. ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಹಿಂದಿ ತನ್ನ ಬಾಲ ಬಿಚ್ಚಿದೆ. ಇಂಗ್ಲಿಷ್ ಕಲಿಯಲೇಬೇಕಾದ ಅನಿವಾರ್ಯ ಇರುವುದರಿಂದ ಪೋಷಕರೇ ಆದ್ಯತೆಯ ಮೇಲೆ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಗಳಲ್ಲಿ ಓದಿಸುತ್ತಿದ್ದಾರೆ. ಆದರೆ ಹಿಂದಿ ಭಾಷೆ, ನಮ್ಮ ಬದುಕಿಗೆ ಯಾವ ರೀತಿಯಲ್ಲೂ ಅನಿವಾರ್ಯವಲ್ಲ. ಹೀಗಿದ್ದರೂ ಅದನ್ನು ಕನ್ನಡಿಗರ ಮೇಲೆ ಹೇರುವುದು ಎಷ್ಟು ಸರಿ? ಯಾವ ಕಾರಣಕ್ಕಾಗಿ ನಾವು ಹಿಂದಿಯನ್ನು ಬಲವಂತವಾಗಿ ನಮ್ಮ ಮಕ್ಕಳಿಗೆ ಕಲಿಸಬೇಕು? ಎನ್ನುವ ಪ್ರಶ್ನೆಗಳನ್ನು ಪೋಷಕರು ಕೇಳುತ್ತಿದ್ದಾರೆ. ಮಾತ್ರವಲ್ಲ, ಕೇಂದ್ರ ಸರಕಾರದ ಈ ಕನ್ನಡ ವಿರೋಧಿ ಧೋರಣೆಯ ವಿರುದ್ಧ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ. ಕನ್ನಡ ಮತ್ತು ಹಿಂದಿಯ ನಡುವಿನ ತಿಕ್ಕಾಟ ಸಂಘರ್ಷ ರೂಪವನ್ನು ಪಡೆಯುತ್ತಿದೆ.

ಇಷ್ಟಕ್ಕೂ ದಕ್ಷಿಣ ಭಾರತ ಹಿಂದಿಯನ್ನು ಕಲಿತು ಪಡೆದುಕೊಳ್ಳುವುದಾದರೂ ಏನನ್ನು? ಐಟಿ ಬಿಟಿ, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಹಿಂದಿ ಅರಿಯದ ದಕ್ಷಿಣ ಭಾರತವೇ ಅಗ್ರ ಸ್ಥಾನದಲ್ಲಿದೆ. ಸಿನೆಮಾ, ರಂಗಭೂಮಿ, ಕಲೆ, ಸಾಹಿತ್ಯ ಕ್ಷೇತ್ರದಲ್ಲೂ ದಕ್ಷಿಣ ಭಾರತದ ಖ್ಯಾತಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿದೆ. ಆಸ್ಕರ್‌ನಂತಹ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದವರ ಸಾಲಿನಲ್ಲಿ ದಕ್ಷಿಣ ಭಾರತೀಯರಿದ್ದಾರೆ. ಉತ್ತರ ಭಾರತಕ್ಕೆ ಹೋಲಿಸಿದರೆ, ಅಭಿವೃದ್ಧಿಯಲ್ಲಿ ದಕ್ಷಿಣ ಭಾರತ ಮುಂಚೂಣಿಯಲ್ಲಿದೆ. ಇದೇ ಸಂದರ್ಭದಲ್ಲಿ, ಹಿಂದಿ ಭಾಷೆಯನ್ನಾಡುವ ಉತ್ತರದ ಬಹುತೇಕ ರಾಜ್ಯಗಳು ಬಡತನ, ಅನಕ್ಷರತೆ, ಅನಾರೋಗ್ಯ, ಅಪರಾಧ ಚಟುವಟಿಕೆ ಮೊದಲಾದ ಕಾರಣಗಳಿಗಾಗಿ ಸುದ್ದಿಯಲ್ಲಿವೆ. ಈ ದೇಶದ ಚುಕ್ಕಾಣಿಯನ್ನು ಉತ್ತರ ಭಾರತ ತನ್ನ ಕೈಯಲ್ಲೇ ಇಟ್ಟುಕೊಂಡರೂ, ದಕ್ಷಿಣ ಭಾರತ ಅವರ ಮೇಲರಿಮೆಗಳಿಗೆ ಸವಾಲು ಹಾಕುವಂತೆ ಎಲ್ಲ ಕ್ಷೇತ್ರಗಳಲ್ಲಿ ಬೆಳೆದಿದೆ. ತಮಿಳು, ಮಲಯಾಳಂ, ಕನ್ನಡದಂತಹ ದ್ರಾವಿಡ ಭಾಷೆಗಳ ಮೂಲಕವೇ ದಕ್ಷಿಣ ಭಾರತ ಇಂದು ವಿಶ್ವದ ಮುಂದೆ ತಲೆಯೆತ್ತಿ ನಿಂತಿದೆೆ. ಹೀಗಿರುವಾಗ, ಕೇಂದ್ರ ಸರಕಾರ ಬೇಕಾದರೆ ಕಡ್ಡಾಯವಾಗಿ ಎರಡು ದಕ್ಷಿಣ ಭಾರತೀಯ ಭಾಷೆಯನ್ನು ಉತ್ತರ ಭಾರತೀಯರಿಗೆ ಕಡ್ಡಾಯ ಮಾಡಲಿ. ಆ ಮೂಲಕ ದಕ್ಷಿಣ ಭಾರತವನ್ನು ಮಾದರಿಯಾಗಿಟ್ಟು ಉತ್ತರ ಭಾರತವನ್ನು ಮುನ್ನಡೆಸಲಿ. ಇದೇ ಸಂದರ್ಭದಲ್ಲಿ ದಕ್ಷಿಣ ಭಾರತೀಯರು ಹಿಂದಿಯನ್ನು ಬೇಡವೇ ಬೇಡ ಎನ್ನುವುದಿಲ್ಲ. ಅನಗತ್ಯವಾಗಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಹಿಂದಿಯ ಹೇರಿಕೆ ಬೇಡ ಎಂದಷ್ಟೇ ಆಕ್ಷೇಪಿಸುತ್ತಿದ್ದಾರೆ. ಹಿಂದಿ ಭಾಷೆಯನ್ನು ಅರಿತು, ಆ ಭಾಷೆಯಲ್ಲಿ ಸಾಧನೆ ಮಾಡಿದ ದಕ್ಷಿಣ ಭಾರತೀಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ.

ತಮಗೆ ಹಿಂದಿ ಭಾಷೆಯ ಅಗತ್ಯವಿದೆ ಎಂದಾದರೆ, ಅದನ್ನು ಅವರು ಯಾವ ರೀತಿಯಲ್ಲಾದರೂ ತಮ್ಮದಾಗಿಸಿಕೊಳ್ಳಬಲ್ಲರು. ಹಿಂದಿ ರಂಗಭೂಮಿ, ಸಿನೆಮಾ ಮಾತ್ರವಲ್ಲ, ಉತ್ತರ ಭಾರತದ ರಾಜಕೀಯದಲ್ಲೂ ಮಿಂಚಿದ ಹಲವು ದಕ್ಷಿಣ ಭಾರತೀಯರು ನಮ್ಮ ಮುಂದಿದ್ದಾರೆ. ಹಾಗೆಯೇ ಹಿಂದಿ ಚಿತ್ರಗಳನ್ನು ಪ್ರೀತಿಯಿಂದ ನೋಡುವ ಕನ್ನಡಿಗರ ಸಂಖ್ಯೆ ಕಡಿಮೆಯೇನಿಲ್ಲ. ಆದುದರಿಂದ ಹಿಂದಿಯ ‘ಹೇರಿಕೆ’ ಬೇಡ ಎನ್ನುವ ಚಳವಳಿಯನ್ನು ಬಲಗೊಳಿಸುವ ಮೂಲಕ ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತ ತನ್ನ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕು. ಹಿಂದಿಯ ದಬ್ಬಾಳಿಕೆ ನಮ್ಮ ಭಾಷೆ ಸಂಸ್ಕೃತಿಯ ಮೇಲೆ ಮಾತ್ರವಲ್ಲ, ದಕ್ಷಿಣ ಭಾರತದ ಅಭಿವೃದ್ಧಿಯ ಮೇಲೆ, ಆರ್ಥಿಕ ಚಟುವಟಿಕೆಗಳ ಮೇಲೂ ದುಷ್ಪರಿಣಾಮ ಬೀರಲಿದೆ. ಕನ್ನಡಿಗರು ಹಿಂದಿ ಭಾಷಿಗರ ಜೀತದಾಳು ಆಗುವ ಮುನ್ನವೇ ಎಚ್ಚೆತ್ತುಕೊಂಡು ಉತ್ತರ ಭಾರತೀಯರ ದಬ್ಬಾಳಿಕೆಯ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡಬೇಕಾಗಿದೆ. ‘ಉತ್ತರದ ಕಾಶಿಯಲ್ಲಿ ಕತ್ತೆ ಮಿಂದೈ ತರಲು ದಕ್ಷಿಣದ ದೇಶಕದು ಕುದುರೆಯಹುದೆ?’ ಉತ್ತರ ಭಾರತದ ಕತ್ತೆ ಕಾಶಿಯಲ್ಲಿ ಮಿಂದು ದಕ್ಷಿಣ ಭಾರತಕ್ಕೆ ಬಂದರೆ ಅದು ಕುದುರೆಯಾಗುವುದಿಲ್ಲ ಎನ್ನುವ ಕುವೆಂಪು ಮಾತನ್ನು ಕೇಂದ್ರದ ದೊರೆಗಳಿಗೆ ತಲುಪಿಸುವ ಕೆಲಸವನ್ನು ರಾಜ್ಯದ ಬಿಜೆಪಿ ಸರಕಾರ ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News