ಮೃತಪಟ್ಟ ವಕೀಲರ ಮಕ್ಕಳು ಪರಿಹಾರ ಕೋರಿ ಸಲ್ಲಿಸಿದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2021-09-14 18:15 GMT

ಹೊಸದಿಲ್ಲಿ, ಸೆ. 14:   ಕೋವಿಡ್ ಅಥವಾ ಇತರ ಕಾರಣಗಳಿಂದ 60 ವರ್ಷಗಳ ಒಳಗೆ ಮೃತಪಟ್ಟ ವಕೀಲರ ಮಕ್ಕಳಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಲು ಕೇಂದ್ರ ಸರಕಾರ ಹಾಗೂ ಇತರರಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ವಕೀಲರ ಜೀವ ಇತರರ ಜೀವಕ್ಕಿಂತ ಹೆಚ್ಚು ಅಮೂಲ್ಯವಾದುದು ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.

ನ್ಯಾಯವಾದಿಗಳು ಸಲ್ಲಿಸುವ ನಕಲಿ ಸಾರ್ವಜನಿಕ ಹಿತಾಸಕ್ತಿ ದಾವೆಗೆ ನ್ಯಾಯಾಲಯ ಉತ್ತೇಜನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ, ಮನವಿ ‘‘ಪ್ರಚಾರ ಹಿತಾಸಕ್ತಿ ದಾವೆ’’ ಎಂದು ಹೇಳಿದೆ. ಅಲ್ಲದೆ, ಈ ಮನವಿಯಲ್ಲಿ ಒಂದೇ ಒಂದು ಸಕಾರಣವಿಲ್ಲ ಎಂದು ತಿಳಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಬಿ.ವಿ. ನಾಗರತ್ನ ಅವರನ್ನು ಕೂಡ ಒಳಗೊಂಡ ಪೀಠ, ದೇಶದಲ್ಲಿ ಕೋವಿಡ್ನಿಂದ ಹಲವು ಜನರು ಸಾವನ್ನಪ್ಪಿದ್ದಾರೆ. ಕೋವಿಡ್ ಕಾರಣದಿಂದ ಸಾವನ್ನಪ್ಪಿದವರ ಮಕ್ಕಳಿಗೆ ಪರಿಹಾರ ವಿತರಣೆಗೆ ಮಾರ್ಗಸೂಚಿ ರೂಪಿಸುವ ಬಗ್ಗೆ ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ ಅದು ಪೀಠ ಹೇಳಿತು. ಸಮಾಜದ ಇತರ ಜನರು ಮುಖ್ಯರಲ್ಲವೇ? ಎಂದು ಮನವಿ ಸಲ್ಲಿಸಿದ ದೂರುದಾರ ಪರ ವಕೀಲ ಪ್ರದೀಪ್ ಕುಮಾರ್ ಯಾದವ್ ಅವರನ್ನು ಪೀಠ ಪ್ರಶ್ನಿಸಿತು.

‘‘ಇದು ಪ್ರಚಾರ ಹಿತಾಸಕ್ತಿಯ ದಾವೆ. ನೀವು ಕಪ್ಪು ಕೋಟು ಧರಿಸುತ್ತೀರಿ ಎಂದಾದರೆ, ನಿಮ್ಮ ಜೀವ ಇತರರಿಗಿಂತ ಹೆಚ್ಚು ಅಮೂಲ್ಯವಾದುದಲ್ಲ, ಇಂತಹ ನಕಲಿ ಸಾರ್ವಜನಿಕ ಹಿತಾಸಕ್ತಿ ದಾವೆಗೆ ನಾವು ಉತ್ತೇಜನ ನೀಡುವುದಿಲ್ಲ’’ ಎಂದು ಪೀಠ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News