ಮುಂದಿನ ಆರೆಂಟು ತಿಂಗಳಲ್ಲಿ ಕೋವಿಡ್-19 ಕೊನೆಯಾಗುತ್ತದೆಯೇ?

Update: 2021-09-15 03:50 GMT
ಸಾಂದರ್ಭಿಕ ಚಿತ್ರ (Photo source: PTI)

ಹೊಸದಿಲ್ಲಿ, ಸೆ.15: ಇಡೀ ವಿಶ್ವದಲ್ಲೇ ತಲ್ಲಣ ಎಬ್ಬಿಸಿರುವ ಕೋವಿಡ್-19 ಸಾಂಕ್ರಾಮಿಕ ಮುಂದಿನ ಕೆಲ ತಿಂಗಳಲ್ಲಿ ಕೊನೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿರುವ ಮಂದಿಗೆ ಇದು ಕೆಟ್ಟ ಸುದ್ದಿ. ಮುಂದಿನ ದಿನಗಳಲ್ಲಿ ಈ ಸಾಂಕ್ರಾಮಿಕ ರೋಗದ ಇನ್ನಷ್ಟು ಅಲೆಗಳು ಜಗತ್ತನ್ನು ಅಪ್ಪಳಿಸಲಿವೆ ಎನ್ನುವ ಆತಂಕವನ್ನು ಸಾಂಕ್ರಾಮಿಕ ರೋಗ ತಜ್ಞರು ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಗಳು ಮತ್ತೆ ರದ್ದಾಗುವ ಹಾಗೂ ವೈದ್ಯಕೀಯ ವ್ಯವಸ್ಥೆಯ ಅಸಮರ್ಪಕತೆಯಿಂದಾಗಿ ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ತುಳುಕುವ ಸಾಧ್ಯತೆಯನ್ನು ಅಂದಾಜಿಸಿದ್ದಾರೆ.

ಮಿನ್ನಿಯಾಪೊಲೀಸ್‌ನ ಮಿನ್ನೆಸೊಟಾ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗಗಳ ಸಂಶೋಧನೆ ಮತ್ತು ನೀತಿ ಕೇಂದ್ರದ ನಿರ್ದೇಶಕ ಮೈಕೆಲ್ ಓಸ್ಟರ್ ಹೋಮ್ ಅವರ ಪ್ರಕಾರ, ಮುಂದಿನ ಚಳಿಗಾಲದ ವೇಳೆಗೆ ಮತ್ತೆ ಕೊರೋನ ವೈರಸ್ ಸಾಂಕ್ರಾಮಿಕ ವ್ಯಾಪಕವಾಗುವ ಎಲ್ಲ ಸಾಧ್ಯತೆಗಳಿವೆ. ಹೀಗೆ ವ್ಯಾಪಕವಾಗಿ ಹರಡುವ ಸಾಂಕ್ರಾಮಿಕ ಜಗತ್ತಿನಾದ್ಯಂತ ಎಲ್ಲ ದುರ್ಬಲ ವರ್ಗದವರ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ.

"ಪ್ರಕರಣಗಳ ನಿರಂತರ ಏರಿಕೆ ವಿಶ್ವಾದ್ಯಂತ ಮುಂದುವರಿಯಲಿದೆ ಎನ್ನುವುದು ನನ್ನ ಅಂದಾಜು" ಎಂಬ ಅವರ ಹೇಳಿಕೆಯನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿದೆ. "ಬಳಿಕ ಅದು ಬಹುಶಃ ದಿಢೀರನೇ ಕಡಿಮೆಯಾಗಬಹುದು. ಆದರೆ ಮತ್ತೊಮ್ಮೆ ಈ ವರ್ಷದ ಚಳಿಗಾಲದಲ್ಲಿ ಹೆಚ್ಚಬಹುದು" ಎಂದು ಹೇಳಿದ್ದಾರೆ.

ಬಹುತೇಕ ಎಲ್ಲ ತಜ್ಞರು ಈ ಅಂಶವನ್ನು ಒಪ್ಪುತ್ತಾರೆ; ಸದ್ಯೋಭವಿಷ್ಯದಲ್ಲಿ ಕೋವಿಡ್ ಕಣ್ಮರೆಯಾಗುವ ಸಾಧ್ಯತೆ ಇಲ್ಲ. ಕನಿಷ್ಠ ಮುಂದಿನ ಆರೆಂಟು ತಿಂಗಳಿನಲ್ಲಿ ಇದು ಅಂತ್ಯ ಕಾಣದು. ಈ ಸಾಂಕ್ರಾಮಿಕ ಕೊನೆಗೊಳ್ಳುವ ಮುನ್ನ ವಿಶ್ವದ ಎಲ್ಲೆಡೆ ಪ್ರತಿಯೊಬ್ಬ ವ್ಯಕ್ತಿ ಕೂಡಾ ಕನಿಷ್ಠ ಒಂದು ಬಾರಿ ಈ ಸೋಂಕಿಗೆ ತುತ್ತಾಗಲಿದ್ದಾರೆ. ಹರಡುವಿಕೆಯ ಅಲೆಗಳ ನಡುವಿನ ಸ್ಪರ್ಧೆ ಹೊಸ ಪ್ರಬೇಧಗಳಿಗೆ ಕಾರಣವಾಗಲಿದೆ ಮತ್ತು ಈ ಮಾರಕ ಅಲೆ ನಮ್ಮೆಲ್ಲರನ್ನೂ ಸ್ಪರ್ಶಿಸುವವರೆಗೂ ಇಡೀ ಜಗತ್ತಿಗೆ ಲಸಿಕೆ ನೀಡಿಕೆ ಅಸಾಧ್ಯ ಎಂದು ಅಭಿಪ್ರಾಯಪಡುತ್ತಾರೆ.

ಕೋವಿಡ್-19 ರೋಗದ ವಿರುದ್ಧದ ಹೋರಾಟಕ್ಕೆ ಎದುರಾಗಿರುವ ಅತಿ ದೊಡ್ಡ ಸವಾಲು ಎಂದರೆ, ರೋಗದ ವಿರುದ್ಧ ಪರಿಣಾಮಕಾರಿ ಲಸಿಕೆಯ ಕೊರತೆ. ಆದರೆ ಇಂದು ಜಗತ್ತು ವೈರಸ್ ಜತೆಗೆ ಹೊಂದಿಕೊಳ್ಳುವುದನ್ನು ಕಲಿತಿದ್ದು, ಇದೀಗ ಜಗತ್ತಿನ ಎಲ್ಲ ಜನರಿಗೆ ಲಸಿಕೆ ನೀಡುವುದು ನಮ್ಮ ಮುಂದಿನ ಸಂಭಾವ್ಯ ಸವಾಲು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News