ಮಧ್ಯಪ್ರದೇಶದ ಪರಿಷ್ಕೃತ ಪಠ್ಯಕ್ರಮದಲ್ಲಿ ರಾಮಚರಿತಮಾನಸ, ರಾಮಸೇತು ಸೇರ್ಪಡೆ

Update: 2021-09-15 07:33 GMT
Photo: ANI

ಭೋಪಾಲ್:  ಮಧ್ಯಪ್ರದೇಶದಲ್ಲಿ ಪರಷ್ಕೃತ ಪಠ್ಯಕ್ರಮದಂತೆ ಪದವಿ ವಿದ್ಯಾರ್ಥಿಗಳು ತುಳಸೀದಾಸ್ ರಚಿತ ʼರಾಮಚರಿತಮಾನಸ' ಕಲಿಯಲಿದ್ದರೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ರಾಮಸೇತುವಿನ  ಕುರಿತು ಕಲಿಯಲಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಶಿಕ್ಷಣ ಪಡೆಯುವ ಆಯ್ಕೆಯನ್ನೂ ರಾಜ್ಯದಲ್ಲಿ ನೀಡಲಾಗುವುದು.

ರಾಜ್ಯದ ಉನ್ನತ ಶಿಕ್ಷಣ ಪಠ್ಯಕ್ರಮ ಸಮಿತಿಯ ಶಿಫಾರಸಿನಂತೆ "ರಾಮಚರಿತ ಮಾನಸ್ ಕೆ ವ್ಯಾವಹಾರಿಕ್ ದರ್ಶನ್" ಎಂಬ ಐಚ್ಛಿಕ ಕೋರ್ಸ್ ಪ್ರಥಮ ವರ್ಷದ ಬಿಎ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ 2021-22ರಿಂದ ಆರಂಭಿಸಲಾಗುತ್ತಿದೆ.

ಈ ಕೋರ್ಸ್ ಮಾಡಿದ ವಿದ್ಯಾರ್ಥಿಗಳಿಗೆ 100 ಅಂಕಗಳ ಪ್ರಶ್ನೆಪತ್ರಿಕೆ ಇರಲಿದ್ದು `ಭಾರತೀಯ ಸಂಸ್ಕೃತಿಯ ಮೂಲಸಂಪನ್ಮೂಲಗಳಲ್ಲಿ ಆಧ್ಯಾತ್ಮಿಕತೆ ಮತ್ತು ಧರ್ಮ, "ವೇದಗಳು, ಉಪನಿಷತ್ತುಗಳು ಮತ್ತು ಪುರಾಣಗಳ ನಾಲ್ಕು ಯುಗಗಳು, "ರಾಮಾಯಣ ಮತ್ತು ಶ್ರೀ ರಾಮಚರಿತಮಾನಸ ನಡುವಿನ ಭಿನ್ನತೆಗಳು ಮತ್ತು ದೈವೀಕ ಅಸ್ತಿತ್ವದ ಅವತಾರದ ಕುರಿತಾದ ವಿಷಯಗಳ ಪ್ರಶ್ನೆಗಳಿರಲಿವೆ.

ಇಂಗ್ಲಿಷ್ ಫೌಂಡೇಶನ್ ಕೋರ್ಸ್ ಭಾಗವಾಗಿ ಸಿ ರಾಜಗೋಪಾಲಾಚಾರಿ ಅವರ ಮಹಾಭಾರತವನ್ನು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಲಿಸಲಾಗುವುದು. ಆರೆಸ್ಸೆಸ್ ಸ್ಥಾಪಕ ಕೆ ಬಿ ಹೆಡ್ಗೇವಾರ್, ಜನ ಸಂಘ ಮುಖ್ಯಸ್ಥ ದೀನ್ ದಯಾಳ್ ಉಪಾಧ್ಯಾಯ ಮತ್ತು ಬಿ ಆರ್ ಅಂಬೇಡ್ಕರ್ ಅವರ ಜೀವನಚರಿತ್ರೆಗಳು ಪಠ್ಯದ ಭಾಗವಾಗಲಿವೆ.

ದೇಶದ ಭವ್ಯ ಇತಿಹಾಸವನ್ನು ಮುನ್ನೆಲೆಗೆ ತರುವ ಯತ್ನದ ಭಾಗವಾಗಿ ಪಠ್ಯಕ್ರಮವನ್ನು ಪರಿಷ್ಕರಿಸಲಾಗುತ್ತಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News