ಎಲ್ಲಾ ಕಾಶ್ಮೀರಿ ಹಿಂದುಗಳು ಕಾಶ್ಮೀರ ಪಂಡಿತರಲ್ಲ : ಜಮ್ಮು ಕಾಶ್ಮೀರ, ಲಡಾಖ್ ಹೈಕೋರ್ಟ್

Update: 2021-09-15 07:37 GMT

ಶ್ರೀನಗರ್: ಎಲ್ಲಾ ಕಾಶ್ಮೀರಿ ಹಿಂದುಗಳು ಕಾಶ್ಮೀರಿ ಪಂಡಿತರಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

"ಸಾಮಾನ್ಯ ಅನಿಸಿಕೆಯಲ್ಲಿ ಕಾಶ್ಮೀರಿ ಪಂಡಿತರೆಂದರೆ ಕಾಶ್ಮೀರದಲ್ಲಿ ತಲೆಮಾರುಗಳಿಂದ ವಾಸವಾಗಿರುವ ಕಾಶ್ಮೀರಿ ಮಾತನಾಡುವ ಬ್ರಾಹ್ಮಣರಾಗಿದ್ದು ತಮ್ಮ ವಿಶಿಷ್ಟ ಉಡುಗೆತೊಡುಗೆ, ಪದ್ಧತಿಗಳು ಮತ್ತು ಸಂಪ್ರದಾಯಗಳಿಂದ ಗುರುತಿಸಲ್ಪಡುತ್ತಾರೆ ಎಂಬುದನ್ನು ಅಲ್ಲಗಳೆಯಲಾಗದು. ಆದರೆ ಕಾಶ್ಮೀರ ಕಣಿವೆಯಲ್ಲಿ ವಾಸವಾಗಿರುವ ಇತರ ಹಿಂದುಗಳಾದ ರಜಪೂತರು, ಬ್ರಾಹ್ಮಣರು, ಪರಿಶಿಷ್ಟ ಜಾತಿ, ವರ್ಗಗಳು ಮತ್ತು ಹಲವು ಇತರರಿಗಿಂತ ಕಾಶ್ಮೀರಿ ಪಂಡಿತರು ಪ್ರತ್ಯೇಕವಾಗಿ ಗುರುತಿಸಬಲ್ಲ ಸಮುದಾಯವಾಗಿದ್ದಾರೆ" ಎಂದು ಜಸ್ಟಿಸ್ ಸಂಜೀವ್ ಕುಮಾರ್ ಹೇಳಿದರು.

ಪ್ರಧಾನಮಂತ್ರಿಗಳ ಪ್ಯಾಕೇಜ್ ಅಡಿಯಲ್ಲಿ ವಲಸಿಗರಲ್ಲದ ಕಾಶ್ಮೀರಿ ಪಂಡಿತರಿಗೆ  ನೀಡಲಾದ ಉದ್ಯೋಗ ಮೀಸಲಾತಿಯಡಿಯಲ್ಲಿ ನೇಮಕಾತಿಗಳನ್ನು  ಆಗ್ರಹಿಸಿ ಸಲ್ಲಿಸಲಾದ ಅಪೀಲನ್ನು ತಿರಸ್ಕರಿಸುವ ವೇಳೆ ನ್ಯಾಯಮೂರ್ತಿಗಳು ಮೇಲಿನಂತೆ ಹೇಳಿದ್ದಾರೆ.

ಹೆಚ್ಚಾಗಿ ಕ್ಷತ್ರಿಯರು, ರಜಪೂತರು, ಪರಿಶಿಷ್ಟರು, ಕಾಶ್ಮೀರಿಗಳಲ್ಲದ ಬ್ರಾಹ್ಮಣರು ಹಾಗೂ ಇತರರು ತಮ್ಮನ್ನು ಕಾಶ್ಮೀರಿ ಪಂಡಿತರೆಂದು ಪರಿಗಣಿಸಿ ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅನ್ವಯ ಪುನರ್ವಸತಿ ಸವಲತ್ತು ತಮಗೂ ಕಲ್ಪಿಸಬೇಕೆಂದು ಅರ್ಜಿಯಲ್ಲಿ ಕೋರಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕಾಶ್ಮೀರಿ ಪಂಡಿತರಂತೆ ವಲಸೆ ಹೋಗದ ಹಾಗೂ ಕಾಶ್ಮೀರದಲ್ಲಿಯೇ ವಾಸವಾಗಿರುವ ಎಲ್ಲಾ ಹಿಂದುಗಳನ್ನು ಕಾಶ್ಮೀರಿ ಪಂಡಿತರೆಂದು ಪರಿಗಣಿಸಿ ಅವರಿಗೆ ಸವಲತ್ತುಗಳನ್ನು ಒದಗಿಸಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರೂ ನ್ಯಾಯಾಲಯ ಅದನ್ನು ಒಪ್ಪಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News