ಹತ್ರಸ್‌ ಕ್ರೌರ್ಯಕ್ಕೆ ಒಂದು ವರ್ಷ: ಬೆದರಿಕೆಗಳ ನಡುವೆ ನ್ಯಾಯಕ್ಕಾಗಿ ಕಾಯುತ್ತಿರುವ ಸಂತ್ರಸ್ತೆಯ ಕುಟುಂಬ

Update: 2021-09-15 11:42 GMT

ಹೊಸದಿಲ್ಲಿ,ಸೆ.15: ಉತ್ತರ ಪ್ರದೇಶದ ಹತ್ರಸ್ ಜಿಲ್ಲೆಯ ಬೂಲಗಡಿ ಗ್ರಾಮದಲ್ಲಿ 2020,ಸೆ.14ರಂದು ಮನೆ ಬಳಿಯ ಗದ್ದೆಯಲ್ಲಿ ಜಾನುವಾರುಗಳಿಗೆ ಮೇವು ಸಂಗ್ರಹಿಸುತ್ತಿದ್ದ ಹದಿಹರೆಯದ ದಲಿತ ಬಾಲಕಿಯ ಮೇಲೆ ಅದೇ ಗ್ರಾಮದ ಮೇಲ್ಜಾತಿಗೆ ಸೇರಿದ್ದ ನಾಲ್ವರು ಠಾಕೂರ್ ಗಳು ಸಾಮೂಹಿಕ ಅತ್ಯಾಚಾರವೆಸಗಿ, ಕ್ರೂರವಾಗಿ ಹಿಂಸಿಸಿದ್ದರು. ಈ ಘಟನೆ ನಡೆದು ಇಂದಿಗೆ ಬರೋಬ್ಬರಿ ಒಂದು ವರ್ಷವಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಸೆ.29ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಒಂದು ವರ್ಷ ಕಳೆದಿದ್ದರೂ ಮೃತ ಯುವತಿಯ ಕುಟುಂಬವು ಈಗಲೂ ಬೆದರಿಕೆಗಳ ನಡುವೆ ನ್ಯಾಯಕ್ಕಾಗಿ ಕಾಯುತ್ತಲೇ ಇದೆ. ಸುದ್ದಿ ಜಾಲತಾಣ ‘ದಿ ವೈರ್ ’ಯುವತಿಯ ಕುಟುಂಬವನ್ನು ಭೇಟಿಯಾಗಿ ಅವರ ನೋವು,ಆತಂಕ,ಸಂಕಷ್ಟಗಳ ಬಗ್ಗೆ ವರದಿಯೊಂದನ್ನು ಪ್ರಕಟಿಸಿದೆ.
‘ಇದು ನಮಗೆ ಅತ್ಯಂತ ಕಠಿಣ ಸಮಯವಾಗಿದೆ. ನನ್ನ ಸೋದರಿಗೆ ಒದಗಿದ್ದ ಸ್ಥಿತಿ ಇನ್ಯಾರಿಗೂ ಬರಬಾರದು ಎಂದು ನಾನು ಆಶಿಸುತ್ತೇನೆ ’ ಎಂದು ಯುವತಿಯ ಸೋದರ ದಿ ವೈರ್ ತಂಡಕ್ಕೆ ತಿಳಿಸಿದರು.

ತಮ್ಮ ಮಗಳ ಸಾಮೂಹಿಕ ಅತ್ಯಾಚಾರ ಮಾತ್ರವಲ್ಲ,ಪೊಲೀಸರಿಂದ ಆಕೆಯ ಶವದ ಬಲವಂತದ ಅಂತ್ಯಸಂಸ್ಕಾರಕ್ಕೂ ಸಾಕ್ಷಿಯಾಗಿದ್ದ ಅಂದಿನ ಘಟನೆಯ ನೋವು ಕುಟುಂಬ ಸದಸ್ಯರನ್ನು ಈಗಲೂ ಕಾಡುತ್ತಿದೆ. ಘಟನೆ ನಡೆದಿದ್ದ ಸ್ಥಳದಿಂದ ಕೆಲವೇ ನೂರು ಮೀಟರ್ ಗಳ ಅಂತರದಲ್ಲಿರುವ ಬೂಲಗಡಿಯ ಅದೇ ಮನೆಯಲ್ಲಿ ಕುಟುಂಬ ಈಗಲೂ ವಾಸವಿದೆ.

ಯುವತಿಯ ಸಾವಿನ ಮೂರು ತಿಂಗಳುಗಳ ಬಳಿಕ ಡಿ.18ರಂದು ಸಿಬಿಐ ನ್ಯಾಯಾಲಯದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಉತ್ತರ ಪ್ರದೇಶ ಪೊಲೀಸರು ಮೇಲೆ ನಿರ್ಲಕ್ಷದ ಆರೋಪಗಳನ್ನು ಹೊರಿಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಈ ವರ್ಷದ ಜನವರಿಯಲ್ಲಿ ಹಥರಾಸ್ನ ವಿಶೇಷ ಎಸ್ಸಿ/ಎಸ್ಟಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭಗೊಂಡಿದ್ದು, ಈವರೆಗೆ ಸುಮಾರು 20 ವಿಚಾರಣೆಗಳು ನಡೆದಿವೆ. ಪ್ರಾಸಿಕ್ಯೂಷನ್ ಪರ ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಲಯವು ಈಗ ದಾಖಲಿಸಿಕೊಳ್ಳುತ್ತಿದೆ. ಕುಟುಂಬದ ‘ಗೌರವ’ವನ್ನು ರಕ್ಷಿಸಲು ಯುವತಿಯ ಸೋದರನೇ ಆಕೆಯನ್ನು ಕೊಲೆ ಮಾಡಿರುವುದಾಗಿ ವಾದಿಸುತ್ತಿರುವ ಪ್ರತಿವಾದಿ ಪರ ವಕೀಲರು ಅಕ್ಟೋಬರ್ನಲ್ಲಿ ತನ್ನ ಸಾಕ್ಷಿಗಳನ್ನಾಗಿ ನಾಲ್ವರು ಆರೋಪಿಗಳನ್ನು ಹಾಜರು ಪಡಿಸಲಿದ್ದಾರೆ.

ಹತ್ರಸ್ ಘಟನೆಯು ಭಾರತದ ಕಟು ವಾಸ್ತವಗಳಲ್ಲೊಂದಾದ ಜಾತಿಯಾಧಾರಿತ ಹಿಂಸೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ಪ್ರಚಲಿತವಿರುವ ಜಾತಿಯಾಧಾರಿತ ಹಿಂಸೆಗೆ ಮಹಿಳೆಯರೇ ಹೆಚ್ಚಾಗಿ ಗುರಿಯಾಗುತ್ತಿದ್ದಾರೆ.
ಆದರೆ ಯುವತಿಯ ಸೋದರ ಹೇಳುವಂತೆ ನ್ಯಾಯದಾನದಲ್ಲಿ ಆಗುತ್ತಿರುವ ವಿಳಂಬವು ಕುಟುಂಬವು ನ್ಯಾಯಾಂಗದಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ.
  
ʼದಿ ವೈರ್ʼ ಜೊತೆ ಮಾತನಾಡಿದ ಬಲಿಪಶು ಯುವತಿಯ ಅತ್ತಿಗೆ,‘ನ್ಯಾಯ ಸುಲಭವಾಗಿ ದೊರೆಯುವುದಿಲ್ಲ ಎನ್ನುವುದು ನಮಗೆ ಗೊತ್ತಿದೆ. ಭಾರೀ ಸಂಖ್ಯೆಯ ಸಿಆರ್ಪಿಎಫ್ ಸಿಬ್ಬಂದಿಗಳು ನಮ್ಮನ್ನು ಕಾಯುತ್ತಿರದ ಮತ್ತು ನಾವು ದುಡಿಯಲು ಮನೆಯಿಂದ ಹೊರಗೆ ಹೋಗಬಹುದಾದ ನಮ್ಮ ಸಹಜ ಬದುಕಿಗೆ ಮರಳಲು ನಾವು ಬಯಸುತ್ತಿದ್ದೇವೆ. ಆದರೆ ಮೊದಲು ನಮಗೆ ನ್ಯಾಯ ದೊರೆಯಬೇಕು ಮತ್ತು ಅದಕ್ಕಾಗಿ ನಾವು ಎಷ್ಟು ಸಮಯ ಬೇಕಾದರೂ ಕಾಯುತ್ತೇವೆ ’ಎಂದು ಹೇಳಿದರು.
ಎಫ್ಐಆರ್ ದಾಖಲಿಸುವಲ್ಲಿ ಆರಂಭಿಕ ತೊಂದರೆಗಳ ಬಳಿಕ ಕುಟುಂಬವು ಸ್ಥಳೀಯ ಆಡಳಿತದಲ್ಲಿ ವಿಶ್ವಾಸವನ್ನು ಕಳೆದುಕೊಂಡಿದೆ. ತಮ್ಮ ಪುತ್ರಿಯ ಶವದ ಬಲವಂತದ ಅಂತ್ಯಸಂಸ್ಕಾರದ ಬಳಿಕ ಪೊಲೀಸರಲ್ಲಿದ್ದ ನಂಬಿಕೆ ನುಚ್ಚುನೂರಾಗಿದೆ.
  
ಉ.ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಭರವಸೆ ನೀಡಿದ್ದ ಪರಿಹಾರದ ಹಣ ಪೂರ್ಣವಾಗಿ ಕುಟುಂಬದ ಕೈ ಸೇರದಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಪರಿಹಾರದ ಒಂದು ಭಾಗವನ್ನು ಇನ್ನೂ ಕುಟುಂಬಕ್ಕೆ ನೀಡಲಾಗಿಲ್ಲ ಹಾಗೂ ಹತ್ರಸ್ ನಗರದಲ್ಲಿ ಮನೆಯನ್ನು ಮತ್ತು ಕುಟುಂಬದ ಓರ್ವ ಸದಸ್ಯರಿಗೆ ಸರಕಾರಿ ಉದ್ಯೋಗವನ್ನು ನೀಡುವ ಭರವಸೆ ಇನ್ನೂ ಈಡೇರಿಲ್ಲ ಎಂದು ಕುಟುಂಬದ ಪರ ನ್ಯಾಯವಾದಿ ಸೀಮಾ ಕುಶ್ವಾಹ ತಿಳಿಸಿದರು.

ಎಲ್ಲ ಪ್ರತಿಕೂಲಗಳ ವಿರುದ್ಧ ಹೋರಾಟ

ಬ್ರಾಹ್ಮಣರು ಮತ್ತು ಠಾಕೂರ್ ಗಳ ಪ್ರಾಬಲ್ಯವಿರುವ ಬೂಲಗಡಿ ಗ್ರಾಮದ ಹಲವಾರು ನಿವಾಸಿಗಳು ಆರೋಪಿಗಳ ಬೆಂಬಲಕ್ಕೆ ನಿಂತಿದ್ದಾರೆ. ಈಗಲೂ ಗ್ರಾಮಸ್ಥರು ಆಗಾಗ್ಗೆ ತಮ್ಮನ್ನು ನಿಂದಿಸುತ್ತಿರುತ್ತಾರೆ. ತಮ್ಮನ್ನು ‘ದೇಶವಿರೋಧಿಗಳು ’ ಮತ್ತು ‘ದೇಶದ್ರೋಹಿಗಳು ’ ಎಂದು ಸಾಮಾಜಿಕ ಜಾಲತಾಣ ಪೋಸ್ಟ್ ಗಳಲ್ಲಿ ಬಣ್ಣಿಸುತ್ತಿದ್ದಾರೆ. ‘ನಿಮಗೆ ಭಾರತವು ಸಾಕಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಿ ’ಎಂದು ಒಂದು ಪೋಸ್ಟ್ನಲ್ಲಿ ಬರೆಯಲಾಗಿತ್ತು ಎಂದು ಯುವತಿಯ ಹಿರಿಯ ಸೋದರ ಹೇಳಿದರು.
  
2020,ಅ.27ರ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸುಮಾರು 30 ಸಿಆರ್ಪಿಎಫ್ ಸಿಬ್ಬಂದಿಗಳು ಈ ನತದೃಷ್ಟ ಕುಟುಂಬಕ್ಕೆ ಭದ್ರತೆಯನ್ನು ಒದಗಿಸುತ್ತಿದ್ದಾರೆ. 2021 ಮಾರ್ಚ್ ನಲ್ಲಿ ಕುಡುಕ ವಕೀಲನೋರ್ವ ನ್ಯಾಯಾಲಯದಲ್ಲಿ ಕುಶ್ವಾಹ ಅವರಿಗೆ ಬೆದರಿಕೆಯನ್ನೊಡ್ಡಿದ್ದ. ಹತ್ತು ನಿಮಿಷಗಳ ಕಾಲ ಸ್ಥಗಿತಗೊಂಡಿದ್ದ ವಿಚಾರಣೆ ಮತ್ತೆ ಆರಂಭವಾದಾಗ ನ್ಯಾಯಾಲಯದಲ್ಲಿ ನುಗ್ಗಿದ್ದ ಗುಂಪೊಂದು ಕುಶ್ವಾಹ ಮತ್ತು ಅಂದು ತನ್ನ ಹೇಳಿಕೆಯನ್ನು ದಾಖಲಿಸಿಲಿದ್ದ ಪ್ರಕರಣದಲ್ಲಿನ ಮೊದಲ ಸಾಕ್ಷಿಯಾದ ಮೃತ ಯುವತಿಯ ಸೋದರನಿಗೂ ಬೆದರಿಕೆಯೊಡ್ಡಿತ್ತು. ಭದ್ರತೆಯನ್ನು ಕೋರಿ ಸಂತ್ರಸ್ತ ಕುಟುಂಬವು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠಕ್ಕೆ ಮೊರೆ ಹೋಗಿತ್ತು. 

ವಿಚಾರಣೆಯ ಬಳಿಕ ಸಂತ್ರಸ್ತ ಕುಟುಂಬ ಮತ್ತು ತಾನು ಸುರಕ್ಷಿತವಾಗಿ ಮನೆಗೆ ಮರಳುವುದಕ್ಕೆ ತಾನು ಮೊದಲ ಆದ್ಯತೆ ನೀಡಿದ್ದರಿಂದ ಮಾ.5ರ ಬೆದರಿಕೆ ಘಟನೆಯ ಬಗ್ಗೆ ವಿಧ್ಯುಕ್ತ ದೂರನ್ನು ಸಲ್ಲಿಸಲು ತನಗೆ ಸಾಧ್ಯವಾಗಿರಲಿಲ್ಲ ಮತ್ತು ಇದರಿಂದಾಗಿ ಕಿರುಕುಳದ ಕಾರಣ ನೀಡಿ ಪ್ರಕರಣವನ್ನು ಹತ್ರಸ್ ನಿಂದ ಹೊರಗೆ ವರ್ಗಾಯಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯು ವಜಾಗೊಂಡಿತ್ತು ಎಂದು ಕುಶ್ವಾಹ್ ʼದಿ ವೈರ್ʼ ಗೆ ತಿಳಿಸಿದರು. 

ಕುಶ್ವಾಹ 2012ರ ದಿಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿಯೂ ಬಲಿಪಶುವಿನ ಕುಟುಂಬದ ಪರವಾಗಿ ಕಾನೂನು ಹೋರಾಟ ನಡೆಸಿದ್ದರು. ತನಗೆ ಬೆದರಿಕೆಯೊಡ್ಡಿದ್ದ ಬಗ್ಗೆ ಕುಶ್ವಾಹ ಹತ್ರಸ್ ಜಿಲ್ಲಾ ನ್ಯಾಯಾಧೀಶರಿಗೆ ದೂರು ಸಲ್ಲಿಸಿದ್ದಾರೆ,ಆದರೆ ಅವರಿಗೆ ಇನ್ನೂ ಸಾಕಷ್ಟು ಭದ್ರತೆಯನ್ನೊದಗಿಸಿಲ್ಲ.
  
‘ಕೊನೆಯ ವಿಚಾರಣೆ ನಡೆದಿದ್ದ ಸೆ.9ರಂದು ನಮ್ಮ ಎದುರಿಗೆ ಪೊಲೀಸ್ ವಾಹನವೊಂದು ಸಾಗುತ್ತಿದ್ದರೂ ಇನ್ನೋವಾ ಕಾರೊಂದು ನನ್ನನ್ನು ಮತ್ತು ಸಂತ್ರಸ್ತ ಕುಟುಂಬವನ್ನು ಹಿಂಬಾಲಿಸುತ್ತಿತ್ತು. ಅವರು ವೀಡಿಯೊವನ್ನೂ ಚಿತ್ರೀಕರಿಸುತ್ತಿದ್ದರು. ನಾವು ಈಗಲೂ ಸುರಕ್ಷಿತರಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ’ ಎಂದು ಕುಶ್ವಾಹ ʼದಿ ವೈರ್ʼ ತಂಡಕ್ಕೆ ತಿಳಿಸಿದರು.
ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News