×
Ad

ಗುಜರಾತ್ ನೂತನ ಸಂಪುಟ ಪ್ರಮಾಣವಚನ ನಾಳೆಗೆ ಮುಂದೂಡಿಕೆ

Update: 2021-09-15 19:52 IST
photo: twitter

ಹೊಸದಿಲ್ಲಿ,ಸೆ.15: ಇಂದು ನಡೆಯಬೇಕಿದ್ದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಕೊನೇ ಕ್ಷಣದಲ್ಲಿ ಗುರುವಾರ ಅಪರಾಹ್ನ 1:30ಕ್ಕೆ ಮುಂದೂಡಲಾಗಿದೆ. ಪ್ರಮಾಣ ವಚನ ಸ್ವೀಕಾರಕ್ಕಾಗಿ ಗಾಂಧಿನಗರದಲ್ಲಿಯ ರಾಜಭವನದಲ್ಲಿ ವ್ಯಾಪಕ ವ್ಯವಸ್ಥೆಗಳನ್ನು ಮಾಡಲಾಗಿತ್ತು ಮತ್ತು ಬೃಹತ್ ಹೋರ್ಡಿಂಗ್ಗಳನ್ನು ಹಾಕಲಾಗಿತ್ತು. ‌

ನೂತನ ಸಚಿವರ ಹೆಸರುಗಳ ಕುರಿತು ಭಿನ್ನಾಭಿಪ್ರಾಯಗಳು ಪ್ರಮಾಣ ವಚನ ಸ್ವೀಕಾರದ ದಿಢೀರ್ ಮುಂದೂಡಿಕೆಗೆ ಕಾರಣವೆಂದು ಬಲ್ಲ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಜ್ಜಾಗುತ್ತಿದ್ದು,ಹಿಂದಿನ ಸಂಪುಟದಲ್ಲಿಯ ಎಲ್ಲ 22 ಸಚಿವರನ್ನು ಕೈಬಿಡಲಾಗುತ್ತದೆ ಎಂಬ ವರದಿಗಳಿದ್ದವು. ತಮ್ಮ ತವರು ರಾಜ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ವ್ಯವಸ್ಥಿತ ಯೋಜನೆಯಂತೆಯೇ ಎಲ್ಲವೂ ನಡೆಯುತ್ತಿದೆ ಎನ್ನಲಾಗಿತ್ತು. ಆದರೆ ತಮ್ಮ ಅಹವಾಲುಗಳಿಗೂ ಮಣೆ ಹಾಕಬೇಕು ಎಂದು ಸ್ಥಳೀಯ ನಾಯಕರು ಪಟ್ಟು ಹಿಡಿದಿರುವಂತೆ ಕಂಡುಬರುತ್ತಿದೆ.

ಬುಧವಾರವಿಡೀ ಬಿರುಸಿನ ರಾಜಕೀಯ ಚಟುವಟಿಕೆಗಳ ನಡುವೆ ವಿವಿಧೆಡೆಗಳಲ್ಲಿ ಸಭೆಗಳೂ ನಡೆದಿವೆ. ಎಲ್ಲ ಸಚಿವರನ್ನೂ ಕೈಬಿಡುವ ಸಾಧ್ಯತೆ ಕಡಿಮೆ,ಸಂಪುಟದಲ್ಲಿ ಯುವಮುಖಗಳು ಮತ್ತು ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳು ಲಭಿಸಲಿವೆ ಎಂದೂ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News