130 ದಿನಗಳ ಬಳಿಕ ಗುಣಮುಖರಾಗಿ ಮನೆಗೆ ಮರಳಿದ ಕೋವಿಡ್ ಸೋಂಕಿತ

Update: 2021-09-16 04:54 GMT
ವಿಶ್ವಾಸ್ ಸೈನಿ (Photo credit: Twitter@ANI)

ಮೀರತ್ (ಉತ್ತರ ಪ್ರದೇಶ), ಸೆ.16: ಕೋವಿಡ್-19 ಸೋಂಕಿಗೆ ತುತ್ತಾಗಿ 130 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಸಂಪೂರ್ಣ ಗುಣಮುಖರಾದ ರೋಗಿಯೊಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ನುತೇಮಾ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

"ವಿಶ್ವಾಸ್ ಸೈನಿ ಎಂಬ ರೋಗಿಗೆ ಕೊರೋನ ವೈರಸ್ ಸೊಂಕು ತಗುಲಿರುವುದು ಎಪ್ರಿಲ್ 28ರಂದು ಪತ್ತೆಯಾಗಿತ್ತು. ಆರಂಭದಲ್ಲಿ ಅವರಿಗೆ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಲು ಸೂಚಿಸಲಾಗಿತ್ತು. ಆದರೆ ಅವರ ದೇಹಸ್ಥಿತಿ ಕ್ಷೀಣಿಸಿದ್ದರಿಂದ ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ರೋಗಿಯ ಆಮ್ಲಜನಕ ಮಟ್ಟ 16ಕ್ಕೆ ಕುಸಿದ ಹಿನ್ನೆಲೆಯಲ್ಲಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು" ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯ ಡಾ.ಅನ್ವಿತ್ ರಾಣಾ ಹೇಳಿದರು.

ಆದಾಗ್ಯೂ ರೋಗಿಯ ಬದುಕಬೇಕೆಂಬ ಇಚ್ಛಾಶಕ್ತಿ ಪ್ರಬಲವಾಗಿತ್ತು. ಆದ್ದರಿಂದ 130 ದಿನಗಳ ಕಾಲ ಸುದೀರ್ಘ ಹೋರಾಟ ನಡೆಸಿ ಗುಣಮುಖರಾದರು ಎಂದು ಅವರು ವಿವರಿಸಿದರು.

"ಸುದೀರ್ಘ ಕಾಲದ ಬಳಿಕ ಮನೆಗೆ ಮರಳಿ ಕುಟುಂಬವನ್ನು ಸೇರಿಕೊಂಡ ಬಗ್ಗೆ ಅತೀವ ಸಂತಸವಾಗುತ್ತಿದೆ" ಎಂದು ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿ ಪ್ರತಿಕ್ರಿಯಿಸಿದರು. ಆಸ್ಪತ್ರೆಯಲ್ಲಿ ಸುತ್ತಮುತ್ತ ಇದ್ದ ಕೋವಿಡ್-19 ರೋಗಿಗಳು ಕೊನೆಯುಸಿರೆಳೆಯುತ್ತಿದ್ದುದನ್ನು ನೋಡಿದಾಗ ಭಯವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News