ರಾಹುಲ್ ಗಾಂಧಿಯನ್ನು ಭೇಟಿಯಾದ ಕನ್ಹಯ್ಯ ಕುಮಾರ್, ಕಾಂಗ್ರೆಸ್ ಸೇರುವ ಸಾಧ್ಯತೆ

Update: 2021-09-16 05:44 GMT
ಕನ್ಹಯ್ಯ ಕುಮಾರ್ (Photo: PTI)

ಹೊಸದಿಲ್ಲಿ: ಸಿಪಿಐ ಯುವ ನಾಯಕ ಹಾಗೂ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್  ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ಮೂಲಗಳ ಪ್ರಕಾರ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕೂಡ ಕಾಂಗ್ರೆಸ್ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು indianexpress.com ವರದಿ ಮಾಡಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೇವಾನಿಗೆ ಉತ್ತರ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು ನಿಲ್ಲಿಸದೆ ಕಾಂಗ್ರೆಸ್ ಅವರ ಗೆಲುವಿಗೆ ಸಹಾಯ ಮಾಡಿತ್ತು.

ಕನ್ಹಯ್ಯ ಕುಮಾರ್ ಅವರಿಗೆ  ಸಿಪಿಐನಲ್ಲಿ ಉಸಿರುಗಟ್ಟಿದ ಭಾವನೆ ಇದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ ಎಂದು indianexpress.com ವರದಿ ಮಾಡಿದೆ.

ಕುಮಾರ್ ಅವರು ಮಂಗಳವಾರ ಗಾಂಧಿಯವರನ್ನು ಭೇಟಿಯಾದರು ಹಾಗೂ  ಅವರ ಕಾಂಗ್ರೆಸ್ ಪ್ರವೇಶದ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕುಮಾರ್ ಅವರ ನಿರ್ಗಮನದ ಬಗ್ಗೆ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರನ್ನು ಕೇಳಿದಾಗ, ಈ ವಿಷಯದಲ್ಲಿ ಊಹಾಪೋಹಗಳನ್ನು ಮಾತ್ರ ಕೇಳಿದ್ದೇನೆ ಎಂದು ಹೇಳಿದರು.

"ಅವರು ಈ ತಿಂಗಳ ಆರಂಭದಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹಾಜರಿದ್ದರು ಎಂದು ಮಾತ್ರ ನಾನು ಹೇಳಬಲ್ಲೆ. ಅವರು ಸಭೆಯಲ್ಲಿ ಮಾತನಾಡಿದ್ದರು ಹಾಗೂ ಚರ್ಚೆಗಳಲ್ಲಿ ಭಾಗವಹಿಸಿದ್ದರು" ಎಂದು ರಾಜಾ ಹೇಳಿದರು.

ಕುಮಾರ್ ಹಾಗೂ ಮೇವಾನಿ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರಲ್ಲಿ ಹೊಸ ಶಕ್ತಿ ಬಲ ಬರಲಿದೆ ಎಂದು ನಂಬಲಾಗಿದೆ.  ಕಳೆದ ಎರಡು ವರ್ಷಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಸುಶ್ಮಿತಾ ದೇವ್, ಜಿತಿನ್ ಪ್ರಸಾದ ಹಾಗೂ ಪ್ರಿಯಾಂಕ ಚತುರ್ವೇದಿಯವರಂತಹ ಯುವ ನಾಯಕ, ನಾಯಕಿಯರು ಪಕ್ಷವನ್ನು ತೊರೆದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News