ಹರಿಯಾಣದ ಚಿಲ್ಲಿ ಗ್ರಾಮದಲ್ಲಿ ಜ್ವರಕ್ಕೆ ಆರು ಮಕ್ಕಳು ಬಲಿ

Update: 2021-09-16 14:03 GMT

ಚಂಡೀಗಢ: ಹರ್ಯಾಣದ ಪಲ್ವಾಲ್ ಜಿಲ್ಲೆಯ ಚಿಲ್ಲಿ ಎಂಬ ಗ್ರಾಮದಲ್ಲಿ ಕಳೆದೆರಡು ವಾರಗಳ ಅವಧಿಯಲ್ಲಿ ಆರು ಮಕ್ಕಳು ಜ್ವರ ಮತ್ತಿತರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಈ ಆರು ಮಕ್ಕಳ ಕೋವಿಡ್ ಹಾಗೂ ಡೆಂಗ್ಯು ಪರೀಕ್ಷಾ ವರದಿಗಳು ನೆಗೆಟಿವ್ ಆಗಿದ್ದವು ಎಂದು ಪಲ್ವಾಲ್‍ನ ಮುಖ್ಯ ವೈದ್ಯಾಧಿಕಾರಿ ಬ್ರಹ್ಮ್ ದೀಪ್ ಹೇಳಿದ್ದಾರೆ.

ಈ ಮಕ್ಕಳು ವಿಪರೀತ ಜ್ವರ, ವಾಂತಿ ಮತ್ತು ಕಡಿಮೆ ಪ್ಲೇಟ್ಲೆಟ್ ಕೌಂಟ್ ಸಮಸ್ಯೆಯಿಂದ ಬಳಲುತ್ತಿದ್ದರು. ಗ್ರಾಮಕ್ಕೆ ಸರಕಾರವು ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ಕಳುಹಿಸಿದ್ದು ಅಲ್ಲಿ ಸಮೀಕ್ಷೆ ನಡೆಸಿದಾಗ ಕುಡಿಯುವ ನೀರಿನ ಕೊಳವೆಯಲ್ಲಿ ಸೋರಿಕೆ ಕಂಡು ಬಂದಿದೆ. ಗ್ರಾಮದಲ್ಲಿ ತಾತ್ಕಾಲಿಕ ವೈದ್ಯಕೀಯ ಶಿಬಿರವನ್ನೂ ನಡೆಸಲಾಗುತ್ತಿದ್ದು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಳಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮದಲ್ಲಿ ಈಗ ವೈರಲ್ ಜ್ವರ ಪ್ರಕರಣಗಳ ಸಂಖ್ಯೆ 64ರಿಂದ 12ಕ್ಕೆ ಇಳಿದಿದೆ. ಮಕ್ಕಳ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News