ಕೋವಿಡ್ ಲಸಿಕೆ ಪಡೆದ ಮಹಿಳೆಯರಲ್ಲಿ ಮುಟ್ಟಿನ ಅವಧಿ ಬದಲಾವಣೆಯ ಸಾಧ್ಯತೆ: ಬ್ರಿಟನ್ ತಜ್ಞವೈದ್ಯರ ವರದಿ

Update: 2021-09-16 18:06 GMT
ಸಾಂದರ್ಭಿಕ ಚಿತ್ರ

ಲಂಡನ್, ಸೆ.16: ಮುಟ್ಟಿನ (ಋತುಚಕ್ರದ) ಪ್ರಕ್ರಿಯೆಯಲ್ಲಿ ಬದಲಾವಣೆ ಮತ್ತು ಕೊರೋನ ಲಸಿಕೆಯ ಮಧ್ಯೆ ಸಂಬಂಧ ಇರುವ ಸಾಧ್ಯತೆಯಿದ್ದು ಈ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಗುರುವಾರ ಪ್ರಕಟವಾದ ಬ್ರಿಟಿಷ್ ಮೆಡಿಕಲ್ ಜರ್ನಲ್‌ನ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ. ಸ್ತ್ರೀಯರ ಜನನಾಂಗದ ಅನಿರೀಕ್ಷಿತ ರಕ್ತಸ್ರಾವ ಅಥವಾ ಋತುಚಕ್ರದ ಬದಲಾವಣೆಯನ್ನೂ ಕೋವಿಡ್-19 ಲಸಿಕೀಕರಣದ ಅಡ್ಡಪರಿಣಾಮಗಳಲ್ಲಿ ಒಂದು ಎಂದು ಪಟ್ಟಿ ಮಾಡಿಲ್ಲ . ಸೆ.2ರವರೆಗೆ ಇಂತಹ 30,000ಕ್ಕೂ ಅಧಿಕ ಪ್ರಕರಣ ವರದಿಯಾಗಿವೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ವೈದ್ಯಕೀಯ ವಿಭಾಗದಲ್ಲಿ ಸಂತಾನೋತ್ಪತ್ತಿ ತಜ್ಞೆಯಾಗಿರುವ ಡಾ. ವಿಕ್ಟೋರಿಯಾ ಸಂಪಾದಕೀಯ ಲೇಖನದಲ್ಲಿ ವಿವರಿಸಿದ್ದಾರೆ.

ಲಸಿಕೆ ಪಡೆದ ಬಳಿಕದ 2ನೇ ಮುಟ್ಟಿನ ಅವಧಿಯಲ್ಲಿ ಋತುಚಕ್ರ ಸಹಜ ಸ್ಥಿತಿಗೆ ಮರಳಿರುವುದಾಗಿ ಬಹುತೇಕ ಮಂದಿ ಹೇಳಿದ್ದಾರೆ. ಅಲ್ಲದೆ ಕೊರೋನ ಲಸಿಕೆಯು ಫಲವತ್ತತೆ(ಗರ್ಭಧರಿಸುವ ಪ್ರಕ್ರಿಯೆ)ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಕ್ಕೆ ಪುರಾವೆಗಳಿಲ್ಲ. ಆದರೆ ಇಲ್ಲಿ ಕಲಿಯುವ ಒಂದು ಮುಖ್ಯ ಪಾಠವೆಂದರೆ, ಭವಿಷ್ಯದ ಅಧ್ಯಯನದ ಸಂದರ್ಭ ಋತುಚಕ್ರದ ಮೇಲೆ ವೈದ್ಯಕೀಯ ಪ್ರಕ್ರಿಯೆಯ ಪರಿಣಾಮದ ಬಗ್ಗೆ ಮರುಚಿಂತನೆ ನಡೆಸುವ ಅಗತ್ಯವಿಲ್ಲ ಎಂದು ವಿಕ್ಟೋರಿಯಾ ಹೇಳಿದ್ದಾರೆ.

ಕೋವಿಡ್-19 ಲಸಿಕೀಕರಣ ಹಾಗೂ ಮುಟ್ಟಿನ ಅವಧಿಯಲ್ಲಿ ಬದಲಾವಣೆಯ ಮಧ್ಯೆ ಸಂಪರ್ಕ ಸಾಧಿಸುವುದಕ್ಕೆ ಪೂರಕವಾದ ಮಾಹಿತಿ ಲಭಿಸಿಲ್ಲ ಎಂದು ಬ್ರಿಟನ್‌ನ ಔಷಧ ಮತ್ತು ಆರೋಗ್ಯರಕ್ಷಣ ಉತ್ಪನ್ನಗಳ ನಿಯಂತ್ರಣ ಪ್ರಾಧಿಕಾರ(ಎಂಎಚ್‌ಆರ್‌ಎ) ಪ್ರತಿಪಾದಿಸಿದೆ.

ಆದರೆ ಎಂಎಚ್‌ಆರ್‌ಎ ಅಂಕಿಅಂಶ ಸಂಗ್ರಹಿಸಿದ ಪ್ರಕ್ರಿಯೆಯಿಂದಾಗಿ ಯಾವುದೇ ನಿರ್ಣಯಕ್ಕೆ ಬರುವುದು ಕಷ್ಟಕರ. ಯಾಕೆಂದರೆ ಮುಟ್ಟಾಗುವ ಮಹಿಳೆಯರು ಲಸಿಕೆ ಪಡೆದ ಬಳಿಕ ಆಗುವ ಬದಲಾವಣೆಯ ಪ್ರಮಾಣ ಮತ್ತು ಲಸಿಕೆ ಪಡೆಯದವರಲ್ಲಿ ಆಗುವ ಬದಲಾವಣೆಯ ಪ್ರಮಾಣವನ್ನು ಹೋಲಿಕೆ ಮಾಡಿದರೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು . ಸೋಂಕಿಗೆ ಮಾನವ ದೇಹ ತೋರುವ ಪ್ರತಿರಕ್ಷಣಾ ಪ್ರತಿಕ್ರಿಯೆ ಋತು ಚಕ್ರದ ಬದಲಾವಣೆಗೆ ಕಾರಣವಾಗಿರಬಹುದು. ಸಾರ್ಸ್ ಸಿಒವಿ-2 ಸೋಂಕಿನಿಂದ ಬಾಧಿತರಾಗಿದ್ದ ಮಹಿಳೆಯರಲ್ಲಿ ಸುಮಾರು 25% ಮಹಿಳೆಯರು ಋತುಚಕ್ರದ ಏರುಪೇರಿನ ಸಮಸ್ಯೆಗೆ ಸಿಲುಕಿದ್ದರು ಎಂದು ಅಧ್ಯಯನವೊಂದು ದೃಢಪಡಿಸಿತ್ತು ಎಂದು ವಿಕ್ಟೋರಿಯಾ ಹೇಳಿದ್ದಾರೆ.

ಲಸಿಕೆ ಪಡೆದ ಬಳಿಕ ಋತುಚಕ್ರದ ಅವಧಿಯಲ್ಲಿ ಅನಿರೀಕ್ಷಿತ ಬದಲಾವಣೆಯಾದರೆ ಈ ಬಗ್ಗೆ ಮಹಿಳೆಯರು ಯಾವುದೇ ಸಂಕೋಚವಿಲ್ಲದೆ ಹೇಳಿಕೊಳ್ಳುವಂತೆ ವೈದ್ಯರು ಪ್ರೋತ್ಸಾಹಿಸಬೇಕು ಎಂದು ವಿಕ್ಟೋರಿಯಾ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News