'ಬ್ಯಾಡ್‌ ಬ್ಯಾಂಕ್‌'ಗೆ ಕೇಂದ್ರದ 30,600 ಕೋಟಿ ರೂ. ಗ್ಯಾರಂಟಿ

Update: 2021-09-16 17:09 GMT

ಹೊಸದಿಲ್ಲಿ,ಸೆ.16: ಸಾರ್ವಜನಿಕ ರಂಗದ ಬ್ಯಾಂಕುಗಳಿಂದ ಕೆಟ್ಟ ಸಾಲವನ್ನು ಖರೀದಿಸಲು ಬ್ಯಾಡ್‌ಬ್ಯಾಂಕ್ ಅಥವಾ ನ್ಯಾಶನಲ್ ಅಸೆಟ್ಸ್ ರಿಕನಸ್ಟ್ರಕ್ಷನ್ ಕಂಪೆನಿ (ಎನ್‌ಎಆರ್‌ಸಿಎಲ್)ಗೆ 30,600 ಕೋಟಿ ರೂ.ನೀಡುವ ಪ್ರಸ್ತಾವನೆಗೆ ಕೇಂದ್ರ ಸರಕಾರವು ಅನುಮೋದನೆ ನೀಡಿದೆಯೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ತಿಳಿಸಿದ್ದಾರೆ.

ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಇದರಿಂದ ಬ್ಯಾಂಕ್‌ಗಳ ಲೆಕ್ಕಪತ್ರವನ್ನು ಸ್ವಚ್ಛಗೊಳಿಸಲು ಸಾಧ್ಯವಾಗಲಿದೆ ಎಂವರು ಭರವಸೆ ವ್ಯಕ್ತಪಡಿಸಿದ್ದಾರೆ.

 ಹೊಸದಿಲ್ಲಿಯಲ್ಲಿ ಗುರುವಾರ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತಾವಿತ ಬ್ಯಾಡ್‌ಬ್ಯಾಂಕ್ ಅಥವಾ ಎನ್‌ಎಆರ್‌ಸಿಎಲ್, ಬ್ಯಾಂಕುಗಳ ಬ್ಯಾಲೆನ್ಸ್‌ಶೀಟ್‌ಗಳಲ್ಲಿರುವ ಕೆಟ್ಟ ಸಾಲ ಅಥವಾ ಅನುತ್ಪಾದಕ ಸಾಲಗಳನ್ನು ಏಕತ್ವಗೊಳಿಸಲಿದೆ ಮತ್ತು ಅವುಗಳನ್ನು ವೃತ್ತಿಪರ ರೀತಿಯಲ್ಲಿ ಸರಿಹೊಂದಿಸಲಿದೆ ಎಂದು ನಿರ್ಮಲಾ ತಿಳಿಸಿದರು. ಬ್ಯಾಂಕುಗಳಿಗೆ ಎನ್‌ಎಆರ್‌ಸಿಎಲ್ ಸಮ್ಮತಿಸಿದ ಸಾಲದ ವೌಲ್ಯದ ಶೇ.15ರಷ್ಟನ್ನು ನಗದು ರೂಪದಲ್ಲಿ ಹಾಗೂ ಶೇ.85ರಷ್ಟನ್ನು ಸರಕಾರದ ಖಾತರಿಯ ಭದ್ರತಾ ರಶೀದಿ (ಸೆಕ್ಯುರಿಟಿ ರಿಸಿಪ್ಟ್)ಗಳ ಮೂಲಕ ನೀಡಲಿದೆ ಎಂದವರು ಹೇಳಿದರು.

  ಕಳೆದ ಆರು ವರ್ಷಗಳಲ್ಲಿ ಬ್ಯಾಂಕುಗಳು ಮರುಪಾವತಿಯಾಗದಂತಹ 5.01 ಲಕ್ಷ ಕೋಟಿ ಸಾಲಗಳನ್ನು ವಸೂಲಿ ಮಾಡಿವೆ. ಈ ಪೈಕಿ 3.1 ಲಕ್ಷ ಕೋಟಿ ರೂ. 2018ರ ಮಾರ್ಚ್‌ನಿಂದ ವಸೂಲಾಗಿದೆಯೆಂದು ಅವರು ಹೇಳಿದರು.

ಏನಿದು ಬ್ಯಾಡ್‌ಬ್ಯಾಂಕ್

ಬ್ಯಾಂಕುಗಳಲ್ಲಿ ದೀರ್ಘಕಾಲದಿಂದ ವಸೂಲಾಗದ ಸಾಲಗಳನ್ನು ಖರೀದಿಸಿ, ಅವುಗಳ ಮರುವಸೂಲಿಗೆ ಅಥವಾ ಅರ್ಹರಿಗೆ ಮಾರಾಟ ಮಾಡಲು ಬ್ಯಾಡ್‌ಬ್ಯಾಂಕ್ ಅಥವಾ ನ್ಯಾಶನಲ್ ಅಸೆಟ್ಸ್ ರಿಕನಸ್ಟ್ರಕ್ಷನ್ ಕಂಪೆನಿ ಸ್ಥಾಪನೆಯಾಗಿದೆ. ಬ್ಯಾಂಕುಗಳಲ್ಲಿ ಸಾಲಗಾರರಿಗೆ ವಿತರಿಸಿದ ಸಾಲದ ಮರುಪಾವತಿಯ ಅವಧಿಯು ಮುಕ್ತಾಯಗೊಂಡು ಅದು 90 ದಿನವನನು ಮೀರಿದ್ದರೆ ಅದನ್ನು ನಾನ್‌ಫರ್‌ಫಾರ್ಮಿಂಗ್ ಅಸೆಟ್ಸ್ ಅಥವಾ ಅನುತ್ಪಾದಕ ಸಾಲ ಎಂದು ಕರೆಯಲಾಗುತ್ತದೆ.

ಪಾವತಿಯಾದ ಸಾಲದಿಂದ ಅನುತ್ಪಾದಕ ಸಾಲವನ್ನು ಪ್ರತ್ಯೇಕಗೊಳಿಸುವ ಉದ್ದೇಶದಿಂದ ಬ್ಯಾಡ್ ಬ್ಯಾಂಕ್ ಸ್ಥಾಪನೆಯಾಗಿದೆ. ಈ ರೀತಿಯಾಗಿ ಪ್ರತ್ಯೇಕಿಸಲಾದ ಅನುತ್ಪಾದಕ ಸಾಲಗಳನ್ನು ಬ್ಯಾಂಕಿನ ಬ್ಯಾಲೆನ್ಸ್‌ಶೀಟ್‌ನಿಂದ ತೆಗೆದುಹಾಕಲಾಗುತ್ತದೆ. ಇದೇ ವೇಳೆ ಬ್ಯಾಡ್‌ಬ್ಯಾಂಕ್, ಅನುತ್ಪಾದಕ ಸಾಲಗಳನ್ನು ತನಗೆ ವರ್ಗಾಯಿಸಿಕೊಳ್ಳುತ್ತದೆ ಹಾಗೂ ನಿರ್ದಿಷ್ಟ ಅವಧಿಯೊಳಗೆ ಅದನ್ನು ಲಿಕ್ವಿಡೇಟ್ ಮಾಡುತ್ತದೆ.

ಸರಳವಾಗಿ ಹೇಳುವುದಾದರೆ ಬ್ಯಾಡ್ ಬ್ಯಾಂಕ್ ಮರುಪಾವತಿಯಾಗದ ಸಾಲದ ಹೊರೆಯನ್ನು ದರಕಡಿತದೊಂದಿಗೆ ಖರೀದಿಸುತ್ತದೆ. ಉದಾಹರಣೆಗೆ 100 ಮರುಪಾವತಿಯಾಗದ ಸಾಲವಿದ್ದರೆ, ಬ್ಯಾಡ್‌ಬ್ಯಾಂಕ್ ಆ ಸಾಲವನ್ನು 70 ರೂ.ಗೆ ಖರೀದಿಸುತ್ತದೆ. ಈ ಸಾಲವನ್ನು ಬ್ಯಾಡ್ ಬ್ಯಾಂಕ್ ಇತರ ಕಂಪೆನಿಗಳಿಗೆ ನೀಡುತ್ತದೆ. ಹೀಗೆ 100 ರೂ. ವೌಲ್ಯದ ಆಸ್ತಿಯು , 75 ರೂ.ಗೆ ಖರೀದಿಸಲ್ಪಡುತ್ತದೆ.

ಕೇಂದ್ರ ಸರಕಾರದ ಬ್ಯಾಡ್‌ಬ್ಯಾಂಕ್ ಯೋಜನೆಯಿಂದಾಗಿ ಕುಂಠಿತವಾಗಿ ಸಾಗುತ್ತಿರುವ ಆರ್ಥಿಕತೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ವಸೂಲಾಗದ ಸಾಲವು ಬ್ಯಾಂಕ್‌ಗಳ ನಿರ್ವಹಣೆಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News