ಅಫ್ಘಾನ್‌ನಿಂದ ಪಲಾಯನ ಮಾಡುವವರಿಗೆ ಸೂಕ್ತ ನೆರವು ಒದಗಿಸಲು ಇಯು ವಿಫಲ

Update: 2021-09-16 17:18 GMT

ಬ್ರಸೆಲ್ಸ್, ಸೆ.16: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳ ಆಡಳಿತದಲ್ಲಿ ಭೀತಿಯಿಂದ ಬದುಕುತ್ತಿರುವ ಜನತೆ ದೇಶ ಬಿಟ್ಟು ತೆರಳುವ ಕಾರ್ಯದಲ್ಲಿ ಸೂಕ್ತ ನೆರವು ನೀಡಲು ಯುರೋಪಿಯನ್ ಯೂನಿಯನ್(ಇಯು) ವಿಫಲವಾಗಿದೆ ಎಂದು ಮಾನವಹಕ್ಕುಗಳು ಹಾಗೂ ನಿರಾಶ್ರಿತರ ಸಂಘಟನೆ ಆರೋಪಿಸಿದೆ. ಜುಲೈ ತಿಂಗಳಿನಲ್ಲಿ (ಅಫ್ಘಾನ್‌ನಲ್ಲಿ ಸಂಘರ್ಷ ತೀವ್ರವಾಗಿದ್ದಾಗ ಮತ್ತು ಸರಕಾರ ಪತನಗೊಳ್ಳುವ ಮೊದಲು) ಯುರೋಪಿಯನ್ ಯೂನಿಯನ್ ದೇಶದಲ್ಲಿ ಆಶ್ರಯ ಕೋರಿ ಸಲ್ಲಿಸಿದ್ದ ಅರ್ಜಿಗಳ ಸಂಖ್ಯೆ ಜೂನ್‌ಗಿಂತ 21% ಹೆಚ್ಚಾಗಿದೆ. ಇವರಲ್ಲಿ ಸುಮಾರು 1,200 ಅರ್ಜಿಗಳು ಅಲ್ಪಸಂಖ್ಯಾತ ಸಮುದಾಯದವರದ್ದು. ಆದರೆ ಒಟ್ಟು ಅರ್ಜಿಗಳಲ್ಲಿ 50%ಕ್ಕೂ ಅಧಿಕ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು 24 ಸರಕಾರೇತರ ಸಂಘಟನೆಗಳ ಒಕ್ಕೂಟ ‘ಇಯು ಆಶ್ರಯ ಸಂಘಟನೆ’ಯ ಅಂಕಿಅಂಶಗಳನ್ನು ಉಲ್ಲೇಖಿಸಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ನಿರಾಶ್ರಿತರಿಗೆ ರಕ್ಷಣೆ ಒದಗಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಬದಲು ರಕ್ಷಣೆಯ ಹೊಣೆಯನ್ನು ಇಯು ಹಂಚಿಕೊಳ್ಳಬೇಕು ಎಂದು ಸಂಘಟನೆ ಹೇಳಿದೆ. ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್, ಕ್ಯಾರಿಟಾಸ್ ಯುರೋಪ, ದಿ ಇಂಟರ್‌ನ್ಯಾಷನಲ್ ರೆಸ್ಕ್ಯೂ ಕಮಿಟಿ, ಆಕ್ಸ್‌ಫಮ್, ರೆಡ್‌ಕ್ರಾಸ್ ಮುಂತಾದ ಪ್ರಮುಖ ಸಂಸ್ಥೆಗಳು ಈ ಒಕ್ಕೂಟದಲ್ಲಿವೆ.

ಅಫ್ಘಾನ್‌ನ ಜನಸಂಖ್ಯೆಯ ಸುಮಾರು ಅರ್ಧಾಂಶದಷ್ಟು, ಅಂದರೆ ಸುಮಾರು 18 ಮಿಲಿಯನ್ ಜನತೆಗೆ ಮಾನವೀಯ ನೆರವಿನ ತುರ್ತು ಅಗತ್ಯವಿದ್ದು ಸುಮಾರು 6,30,000 ಮಂದಿ ಹಿಂಸಾಚಾರ ಮತ್ತು ಬರಗಾಲದಿಂದ ಕಂಗೆಟ್ಟು ಮನೆಬಿಟ್ಟು ಬೇರೆಡೆಗೆ ಸ್ಥಳಾಂತರಗೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಸಂಘಟನೆ ಹೇಳಿದೆ. ಆಶ್ರಯ ಕೋರಿದ ಅರ್ಜಿಗಳ ಸಂಖ್ಯೆ ಹೆಚ್ಚಿದ್ದರೂ, ಯುರೋಪಿಯನ್ ಯೂನಿಯನ್‌ಗೆ ಅಫ್ಘಾನ್ ನಿರಾಶ್ರಿತರ ಆಗಮನದ ಸವಾಲು ತಕ್ಷಣ ಎದುರಾಗದು. ಯಾಕೆಂದರೆ ಹೆಚ್ಚಿನ ನಿರಾಶ್ರಿತರು ಇರಾನ್, ಪಾಕಿಸ್ತಾನ, ಉಜ್ಬೇಕಿಸ್ತಾನ ಮತ್ತು ತಜಿಕಿಸ್ತಾನದತ್ತ ಧಾವಿಸುತ್ತಿದ್ದಾರೆ ಎಂದು ಯುರೋಪಿಯನ್ ಯೂನಿಯನ್‌ನ ಅಧಿಕಾರಿಗಳು ಹೇಳಿದ್ದಾರೆ.

ಆದರೂ, 2015ರ ಉದಾಹರಣೆಯನ್ನು ಮುಂದಿರಿಸಿಕೊಂಡು ಇಯು ಸದಸ್ಯ ರಾಷ್ಟ್ರಗಳು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿವೆ. 2015ರಲ್ಲಿ ಸಿರಿಯಾ ಅಂತರ್ಯುದ್ಧ ತೀವ್ರಗೊಂಡ ಸಂದರ್ಭ 1 ಮಿಲಿಯನ್‌ಗೂ ಅಧಿಕ ಮಂದಿ ಯುರೋಪ್ ಪ್ರವೇಶಿಸಿದ್ದರು. ಈ ರೀತಿಯ ಮುನ್ನೆಚ್ಚರಿಕಾ ಕ್ರಮಗಳು ತಪ್ಪುಸಂದೇಶ ರವಾನಿಸುತ್ತವೆ ಮತ್ತು ಯುರೋಪ್‌ನ ಗಡಿಭಾಗದಲ್ಲಿ ಹೊಸ ಬಿಕ್ಕಟ್ಟನ್ನು ಸೃಷ್ಟಿಸಬಹುದು . ಜೊತೆಗೆ, ಯುರೋಪ್ ಸಮಾಜದಲ್ಲಿ ನಿರಾಶ್ರಿತರ ಸಂಯೋಜನೆ ಮತ್ತು ಒಳಗೊಳ್ಳುವಿಕೆಗೆ ತೊಡಕಾಗಬಹುದು ಎಂದು ‘ಇಯು ಆಶ್ರಯ ಸಂಘಟನೆ’ ಆಕ್ಷೇಪಿಸಿದೆ.

ಅಫ್ಘಾನ್‌ನಲ್ಲಿ ಭದ್ರತೆಯ ಅಗತ್ಯವಿರುವವರಿಗೆ ಯುರೋಪ್ ಪ್ರವೇಶಕ್ಕೆ ಸುರಕ್ಷಿತ ವ್ಯವಸ್ಥೆ ರೂಪಿಸುವ ಜತೆಗೆ, ಈಗಾಗಲೇ ಪಾಕಿಸ್ತಾನ ಮತ್ತು ಇರಾನ್‌ನಲ್ಲಿ ನೆಲೆ ಕಂಡುಕೊಂಡಿದ್ದು ಈಗ ಯುರೋಪ್‌ಗೆ ಸ್ಥಳಾಂತರಗೊಳ್ಳಬಯಸುವ ಜನರಿಗೆ ಮಹಾತ್ವಾಕಾಂಕ್ಷೆಯ ಪುನರ್ವಸತಿ ಯೋಜನೆ ರೂಪಿಸುವಂತೆ ಇಯು ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News