ಕೋವಿಡ್ ಸೋಂಕಿತ ಮಕ್ಕಳಲ್ಲಿ ಲಕ್ಷಣ ಇಲ್ಲದೇ ಇದ್ದರೆ ಆತಂಕಪಡಬೇಕಿಲ್ಲ: ತಜ್ಞರ ಅಭಿಪ್ರಾಯ

Update: 2021-09-16 17:47 GMT

ಹೊಸದಿಲ್ಲಿ, ಸೆ. 16: ಗಂಭೀರ ಸೋಂಕು, ಲಕ್ಷಣ ರಹಿತವಾಗಿದ್ದರೆ ಕೋವಿಡ್ ಸೋಂಕಿಗೆ ಒಳಗಾದ ಮಕ್ಕಳ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ತಜ್ಞರು ಗುರುವಾರ ಅಭಿಪ್ರಾಯಪಟ್ಟಿದ್ದಾರೆ. ಮಿಝೊರಾಂ, ಕೇರಳ ಹಾಗೂ ಇತರ ಕೆಲವು ರಾಜ್ಯಗಳಲ್ಲಿ 10 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆ ತಜ್ಞರು ಈ ಹೇಳಿಕೆ ನೀಡಿದ್ದಾರೆ.

ಆದರೆ, ಹೆಚ್ಚು ಮಕ್ಕಳಿಗೆ ದಾಖಲಾಗಲು ಆಸ್ಪತ್ರೆ ಸೌಲಭ್ಯ ಸೇರಿದಂತೆ ಸಂಭವನೀಯ ಸಮಸ್ಯೆ ಎದುರಿಸಲು ಎಲ್ಲ ರೀತಿಯ ಸಿದ್ಧತೆ ಹಾಗೂ ಅಗತ್ಯತೆಯ ಬಗ್ಗೆ ಅವರು ಒತ್ತಿ ಹೇಳಿದ್ದಾರೆ. ಕೋವಿಡ್ ಸೋಂಕಿಗೆ ಒಳಗಾಗುತ್ತಿರುವ 10 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳ ಸಂಖ್ಯೆಯಲ್ಲಿ ಕಳೆದ ವರ್ಷ ಮಾರ್ಚ್‌ನಿಂದ ತೀವ್ರ ಏರಿಕೆಯಾಗುತ್ತಿದೆ. ಮಿಝೊರಾಂ, ಮೇಘಾಲಯ, ಮಣಿಪುರ, ಕೇರಳ ಹಾಗೂ ಇತರ ಕೆಲವು ರಾಜ್ಯಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳು ಕೋವಿಡ್ ಸೋಂಕಿಗೆ ಒಳಗಾಗಿರುವುದು ದಾಖಲಾಗಿದೆ ಎಂದು ಅವರು ಹೇಳಿದ್ದಾರೆ. ಮಿಝೊರಾಂನಲ್ಲಿ ಮಂಗಳವಾರ ಒಂದೇ ದಿನ ಅತ್ಯಧಿಕ 1,500ಕ್ಕೂ ಅಧಿಕ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿವೆ.

ಇದರಲ್ಲಿ 300 ಮಕ್ಕಳು ಕೂಡ ಸೇರಿದ್ದಾರೆ. ಇದರೊಂದಿಗೆ ರಾಜ್ಯದ ಒಟ್ಟು ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ 72,883ಕ್ಕೆ ಏರಿಕೆಯಾಗಿದೆ. ಮಕ್ಕಳಲ್ಲಿ ಕೋವಿಡ್ ಸೋಂಕು ಕಂಡು ಬಂದರೆ; ಆದರೆ, ಅದು ಲಕ್ಷಣ ರಹಿತವಾಗಿದ್ದರೆ ಆತಂಕಪಡಬೇಕಾಗಿಲ್ಲ. ಯಾಕೆಂದರೆ, ದೇಶದಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ಕೋವಿಡ್ ಸೋಂಕು ವಯಸ್ಕರ ಮೇಲೆ ಬೀರಿದ ಪರಿಣಾಮವನ್ನೇ ಮಕ್ಕಳ ಮೇಲೂ ಬಿರುತ್ತದೆ ಎಂದು ನ್ಯಾಶನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯೂನೈಶೇಷನ್ (ಎನ್‌ಟಿಎಜಿಐ)ನ ಕೋವಿಡ್ ಕಾರ್ಯಕಾರಿ ಗುಂಪಿನ ಅಧ್ಯಕ್ಷ ಡಾ. ಎನ್.ಕೆ. ಅರೋರಾ  ಹೇಳಿದ್ದಾರೆ. ಮಕ್ಕಳಲ್ಲಿ ಲಕ್ಷಣರಹಿತ ಪ್ರಕರಣಗಳು ತುಂಬಾ ಕಡಿಮೆ. ತೀವ್ರ ಸೋಂಕಿನ ಅಪಾಯವು ಹೆಚ್ಚು ಸಾಮಾನ್ಯವಾಗಿದೆ ಎಂದು ಅರೋರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News