ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ದಿಲ್ಲಿಯಲ್ಲಿ ಎಸ್ಎಡಿಯಿಂದ ರ‍್ಯಾಲಿ

Update: 2021-09-17 17:50 GMT

ದಿಲ್ಲಿ, ಸೆ. 17: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶುಕ್ರವಾರ ಸಂಸತ್ತಿಗೆ ರ‍್ಯಾಲಿ ನಡೆಸಿದ ಶಿರೋಮಣಿ ಅಕಾಲಿ ದಳ (ಎಸ್ಎಡಿ)ದ ವರಿಷ್ಠ ಸುಖ್ಬೀರ್ ಬಾದಲ್ ಹಾಗೂ ಕೇಂದ್ರದ ಮಾಜಿ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಸೇರಿದಂತೆ 15 ಮಂದಿ ನಾಯಕರನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆಗೊಳಿಸಿದರು. ಭದ್ರತಾ ಸಿಬ್ಬಂದಿ ಪಕ್ಷದ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ ಹಾಗೂ ಅವರ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಎಂದು ಬಂಧಿತರಾಗುವ ಮೊದಲು ಬಾದಲ್ ಅವರು ಸುದ್ದಿಗಾರರಲ್ಲಿ ತಿಳಿಸಿದ್ದರು. ‌

‘‘ಶಾಂತಿಯುತ ಪ್ರತಿಭಟನೆಯನ್ನು ತಡೆಯಲಾಗಿದೆ. ನಾವು ಪಂಜಾಬ್ ಮಾತ್ರವಲ್ಲ ಪೂರ್ಣ ದೇಶವೇ ಪ್ರಧಾನಿ ಅವರಿಗೆ ವಿರುದ್ಧವಾಗಿದೆ ಎಂದು ನರೇಂದ್ರ ಮೋದಿ ಅವರಿಗೆ ಸಂದೇಶ ರವಾನಿಸಲು ನಾವು ಇಲ್ಲಿಗೆ ಆಗಮಿಸಿದ್ದೇವೆ’’ ಎಂದು ಅವರು ಹೇಳಿದರು. 

ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳಿಗೆ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಎಸ್ಎಡಿ ಶುಕ್ರವಾರ ಗುರುದ್ವಾರ ರಾಕಬ್ ಗಂಜ್ ಸಾಹಿಬ್ನಿಂದ ಸಂಸತ್ತಿನ ವರೆಗೆ ಪ್ರತಿಭಟನಾ ರ್ಯಾಲಿ ಆಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ದಿಲ್ಲಿಯಾದ್ಯಂತ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ, ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಲಾಗಿದೆ ಎಂದು ದಿಲ್ಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ‘ಕಪ್ಪು ಶುಕ್ರವಾರ’ ಎಂದು ಕರೆಯಲಾದ ಈ ಪ್ರತಿಭಟನೆಯ ನೇತೃತ್ವವನ್ನು ಸುಖ್ಬೀರ್ ಸಿಂಗ್ ಬಾದಲ್ ಹಾಗೂ ಹರ್ಸಿಮ್ರತ್ ಕೌರ್ ಬಾದಲ್ ವಹಿಸಿದ್ದರು. ಪ್ರತಿಭಟನೆಗೆ ಮುನ್ನ ಎಸ್ಎಡಿಯ ಪ್ರಧಾನ ಕಾರ್ಯದರ್ಶಿ ಪ್ರೇಮ್ ಸಿಂಗ್ ಚಂಡುಮಾಜ್ರ ರ್ಯಾಲಿ ಶಾಂತಿಯುತವಾಗಿರಲಿದೆ ಎಂದು ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News