ಅಫ್ಘಾನ್ ನ 10 ಮಿಲಿಯನ್ ಮಕ್ಕಳಿಗೆ ಮಾನವೀಯ ನೆರವಿನ ಅಗತ್ಯವಿದೆ: ಯುನಿಸೆಫ್ ವರದಿ

Update: 2021-09-18 16:51 GMT

ಕಾಬೂಲ್, ಸೆ.18: ಅಫ್ಘಾನಿಸ್ತಾನದ 10 ಮಿಲಿಯನ್ ಮಕ್ಕಳು ಸಾಕಷ್ಟು ಆಹಾರ, ಔಷಧ ಮತ್ತು ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದು ಇವರಿಗೆ ತಕ್ಷಣ ಮಾನವೀಯ ನೆರವಿನ ಅಗತ್ಯವಿದೆ . ಮೂಲಭೂತ ಅಗತ್ಯಗಳ ಅಲಭ್ಯತೆಯಿಂದಾಗಿ ಹಲವು ಮಕ್ಕಳು ಅಪೌಷ್ಟಿಕತೆಯಿಂದಾಗಿ ಆಸ್ಪತ್ರೆಯ ಹಾಸಿಗೆಗಳಲ್ಲಿ ಮಲಗುವಂತಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ವರದಿ ಮಾಡಿದೆ.

  
ಪ್ರಸಕ್ತ ಅಫ್ಘಾನ್ ನಲ್ಲಿ ತುರ್ತು ಮಾನವೀಯ ನೆರವಿನ ಅಗತ್ಯವಿರುವ ಸುಮಾರು 10 ಮಿಲಿಯನ್ ಮಕ್ಕಳಿವೆ. ಈ ಪರಿಸ್ಥಿತಿಗೆ ಕನಿಷ್ಟ ಜಬಾಬ್ದಾರರಾಗಿರುವವರು ಗರಿಷ್ಟ ಬೆಲೆ ತೆರಬೇಕಾಗಿದೆ. ಭೀಕರ ಬರಗಾಲದಿಂದ ಕುಡಿಯುವ ನೀರು ದೊರಕದ ಮಕ್ಕಳಿದ್ದಾರೆ, ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅತ್ಯಗತ್ಯವಾಗಿರುವ ಲಸಿಕೆ ಲಭಿಸದ ಮಕ್ಕಳಿದ್ದಾರೆ. ತಮ್ಮ ಮಕ್ಕಳಿಗೆ ಉಣಿಸಲು ಹಣಕಾಸಿನ ಕೊರತೆಯಿರುವುದಾಗಿ ಸ್ಥಳಾಂತರಗೊಂಡ ಜನರು ಹೇಳುತ್ತಿದ್ದಾರೆ ಎಂದು ಅಫ್ಘಾನ್ ನಲ್ಲಿ ಯುನಿಸೆಫ್ ಮುಖ್ಯ ಸಂವಹನಾಧಿಕಾರಿ ಸ್ಯಾಮ್ ಮೋರ್ಟ್ ಹೇಳಿದ್ದಾರೆ. 

ಮಕ್ಕಳಿಗೆ ಬಟ್ಟೆಬರೆ, ಆಹಾರದ ಅಗತ್ಯವಿದ್ದು ನಮಗೆ ಇವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಿಶ್ವಸಂಸ್ಥೆ ನಮಗೆ ನೆರವಾಗಬೇಕು ಎಂದು ಸ್ಥಳಾಂತರಗೊಂಡಿರುವ ಮಹಿಳೆ ಶಾಹ್ಲಾ ಹೇಳಿರುವುದಾಗಿ ಟೋಲೋ ನ್ಯೂಸ್ ವರದಿ ಮಾಡಿದೆ.

ದೇಶದಲ್ಲಿ ಕಳೆದ ತಿಂಗಳಿಂದ ಅಪೌಷ್ಟಿಕತೆಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ವೈದ್ಯರು ಹೇಳಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ, ಅಫ್ಘಾನಿಸ್ತಾನದಲ್ಲಿ 5 ವರ್ಷದೊಳಗಿನ 1 ಮಿಲಿಯನ್ ಜನತೆ ತೀವ್ರ ಅಪೌಷ್ಟಿಕತೆಯಿಂದ ಬಳಲಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. 
ಇತ್ತೀಚಿನ ಬದಲಾವಣೆಗಳ ಬಳಿಕ ನಮ್ಮ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಕಾಬೂಲ್ನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ಮುಖ್ಯಸ್ಥ ಮುಹಮ್ಮದ್ ಲತೀಫ್ ಬಶೀರ್ ಹೇಳಿದ್ದಾರೆ.

 ಅಂತರ್ ರಾಷ್ಟ್ರೀಯ ಸಮುದಾಯವು ಅಫ್ಘಾನ್ ಜನತೆ, ವಿಶೇಷವಾಗಿ ಮಕ್ಕಳ ಬಗ್ಗೆ ಗಮನ ಹರಿಸದಿದ್ದರೆ ಅಫ್ಘಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟು ತಲೆದೋರಬಹುದು ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಝಾರ್ಖಾ ಯಫ್ತಾಲಿ ಆತಂಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News