ಟ್ರಂಪ್ ಅವಧಿಯಲ್ಲಿ ಎಚ್-1ಬಿ ವೀಸಾ ನಿಯಮಕ್ಕೆ ಮಾಡಿದ್ದ ಬದಲಾವಣೆ ರದ್ದು

Update: 2021-09-18 16:52 GMT

ವಾಷಿಂಗ್ಟನ್, ಸೆ.18: ಅಮೆರಿಕದ ಸಂಸ್ಥೆಗಳು ಅಲ್ಲಿನ ಉದ್ಯೋಗಿಗಳ ಬದಲು ಕಡಿಮೆ ವೇತನದ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ ಟ್ರಂಪ್ ಅವಧಿಯಲ್ಲಿ ಎಚ್-1ಬಿ ವೀಸಾ ನಿಯಮಕ್ಕೆ ಮಾಡಿದ್ದ ಬದಲಾವಣೆಯನ್ನು ಅಮೆರಿಕದ ಫೆಡರಲ್ ನ್ಯಾಯಾಲಯ ತಳ್ಳಿಹಾಕಿದೆ. ಈ ಆದೇಶ ತಂತ್ರಜ್ಞಾನ ಸಂಸ್ಥೆಗಳ ಉದ್ಯೋಗಿಗಳು, ವೈದ್ಯರು, ಅಕೌಂಟೆಂಟ್  ಗಳು, ಪ್ರೊಫೆಸರ್ ಗಳು, ವಿಜ್ಞಾನಿಗಳು ಹಾಗೂ ವಾಸ್ತುಶಿಲ್ಪಿಗಳಿಗೆ ಅನ್ವಯಿಸಲಿದೆ.

 ಎಚ್-1 ಬಿ ವೀಸಾ ಕಾಯ್ದೆಯನ್ನು ನಿರ್ಬಂಧಿಸುವ ಆದೇಶವನ್ನು ಅಮೆರಿಕದ ಆಂತರಿಕ ಭದ್ರತಾ ಇಲಾಖೆಗೆ ಕಾನೂನು ಬಾಹಿರವಾಗಿ ನೇಮಕಗೊಂಡಿದ್ದ ಪ್ರಭಾರೀ ಕಾರ್ಯದರ್ಶಿ ಹೊರಡಿಸಿರುವುದರಿಂದ ಈ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಹಿರಿಯ ಜಿಲ್ಲಾ ನ್ಯಾಯಾಧೀಶ ಜೆಫ್ರೀ ವೈಟ್ ಕಳೆದ ಡಿಸೆಂಬರ್ ನಲ್ಲಿ ಈ ನಿಯಮಕ್ಕೆ ತಾತ್ಕಾಲಿಕ ತಡೆ ನೀಡಿದ್ದರು. ಜತೆಗೆ, ಕೆಲವು ವಿಧದ ವಲಸೆರಹಿತ ಉದ್ಯೋಗ ವೀಸಾಗಳನ್ನೂ ರದ್ದುಗೊಳಿಸುವ ಟ್ರಂಪ್ ಪ್ರಯತ್ನಕ್ಕೆ ತಡೆಯಾಜ್ಞೆ ನೀಡಿದ್ದರು. ಈ ಬದಲಾವಣೆಗಳು ನಾಗರಿಕರಲ್ಲದವರು ಅರ್ಜಿ ಸಲ್ಲಿಸಿದ ಕ್ರಮಾನುಸಾರ ಎಚ್-1ಬಿ ವೀಸಾ ನೀಡಬೇಕು ಎಂದು ಹೇಳಿರುವ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಉಲ್ಲಂಘನೆಯಾಗಿದೆ . ವೇತನದ ಆಧಾರದಲ್ಲಿ (ಕಡಿಮೆ ವೇತನ ಬಯಸುವವರಿಗೆ ಆದ್ಯತೆ) ವೀಸಾ ಅರ್ಜಿಗಳನ್ನು ಆಯ್ಕೆ ಮಾಡುವುದು ಈ ಕಾನೂನಿಗೆ ವಿರುದ್ಧವಾಗಿದೆ ಎಂದು ಅಮೆರಿಕದ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ ಆಕ್ಷೇಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News