'ವ್ಯಕ್ತಿಯನ್ನು ಆರೋಪಿಯಾಗಿ ತಮ್ಮೆದುರು ಕರೆಸುವ ಅಧಿಕಾರವನ್ನು ನ್ಯಾಯಾಲಯಗಳು ಬೇಕಾಬಿಟ್ಟಿ ಬಳಸುವಂತಿಲ್ಲ'

Update: 2021-09-18 17:19 GMT

ಹೊಸದಿಲ್ಲಿ,ಸೆ.18: ಯಾವುದೇ ವ್ಯಕ್ತಿಯು ಆರೋಪಿಯೆಂದು ಹೆಸರಿಸಲ್ಪಟ್ಟಿರದಿದ್ದಾಗ,ಆದರೆ ಆತ ಅಪರಾಧವೆಸಗಿದ್ದಾನೆ ಎಂದು ಕಂಡು ಬರುತ್ತಿದ್ದರೆ ಆತನ ವಿರುದ್ಧ ಬಲವಾದ ಮತ್ತು ದೃಢವಾದ ಸಾಕ್ಷವಿದ್ದರೆ ಮಾತ್ರ ಆತನ ವಿರುದ್ಧ ಕ್ರಮವನ್ನು ಕೈಗೊಳ್ಳುವ ಅಧಿಕಾರವನ್ನು ನ್ಯಾಯಾಲಯಗಳು ಬಳಸಬಹುದೇ ಹೊರತು ಬೇಕಾಬಿಟ್ಟಿಯಾಗಿ ಆತನನ್ನು ತಮ್ಮೆದುರು ಕರೆಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಸಿಪಿಸಿಯ ಕಲಂ 319ರಡಿ ತನಿಖೆ ಅಥವಾ ವಿಚಾರಣೆಯ ಸಂದರ್ಭದಲ್ಲಿ ಆರೋಪಿಯಾಗಿ ಹೆಸರಿಸದಿದ್ದ ವ್ಯಕ್ತಿಯು ಅಪರಾಧವೆಸಗಿದ್ದಾನೆ ಎಂದು ಸಾಕ್ಷ್ಯಾಧಾರಗಳಿಂದ ಕಂಡು ಬಂದರೆ ಆತನ ವಿರುದ್ಧ ನ್ಯಾಯಾಲಯವು ಮುಂದುವರಿಯಬಹುದು ಎಂದು ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆ ಸಂದರ್ಭ ಹೇಳಿದ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಪಿ.ಎಸ್.ನರಸಿಂಹ ಅವರ ಪೀಠವು,ಕಲಂ 319ರಡಿಯ ಅಧಿಕಾರವನ್ನು ಬಳಸಲು ಮಾರ್ಗಸೂಚಿಯನ್ನು ಈ ನ್ಯಾಯಾಲಯದ ಸಂವಿಧಾನ ಪೀಠವು ರೂಪಿಸಿದೆ. 

ವ್ಯಕ್ತಿಯ ವಿರುದ್ಧ ಬಲವಾದ ಮತ್ತು ದೃಢವಾದ ಸಾಕ್ಷ್ಯವು ಲಭಿಸಿದ್ದರೆ ಮಾತ್ರ ಕಲಂ 319ರಡಿ ಅಧಿಕಾರವನ್ನು ಬಳಸಬೇಕು ಎಂಬ ತತ್ತ್ವವನ್ನು ಈ ಮಾರ್ಗಸೂಚಿಯು ಒಳಗೊಂಡಿದೆ ಎಂದು ಬೆಟ್ಟು ಮಾಡಿತು.

ರಮೇಶಚಂದ್ರ ಶ್ರೀವಾಸ್ತವ ಎಂಬವರು ಸಲ್ಲಿಸಿದ್ದ ಅರ್ಜಿಯ ಮೇಲಿನ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಮಾತುಗಳನ್ನು ಹೇಳಿದೆ. 2015ರಲ್ಲಿ ಶ್ರೀವಾಸ್ತವರ ಚಾಲಕನ ಮೃತದೇಹ ಪತ್ತೆಯಾಗಿತ್ತು.
ಪ್ರಾಸಿಕ್ಯೂಷನ್ ಆರೋಪಿಯಾಗಿ ಹೆಸರಿಸದಿದ್ದ ಶ್ರೀವಾಸ್ತವ ಸ್ನೇಹಿತರ ನೆರವಿನೊಂದಿಗೆ ತನ್ನ ಪತಿಯ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಚಾಲಕನ ಪತ್ನಿ ವಿಚಾರಣಾ ನ್ಯಾಯಾಲಯದಲ್ಲಿ ಹೇಳಿಕೆಯನ್ನು ನೀಡಿದ್ದಳು. ಇದನ್ನು ಆಧರಿಸಿ ವಿಚಾರಣಾ ನ್ಯಾಯಾಲಯವು ಶ್ರೀವಾಸ್ತವರನ್ನು ಆರೋಪಿಯನ್ನಾಗಿಸಿ ಸಮನ್ಸ್ ಹೊರಡಿಸಿತ್ತು.

ಶ್ರೀವಾಸ್ತವ ಇದನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಅದು ವಿಚಾರಣಾ ನ್ಯಾಯಾಲಯದ ಕ್ರಮವನ್ನು ಎತ್ತಿಹಿಡಿದ ಬಳಿಕ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.

‘ಈ ಪ್ರಕರಣದಲ್ಲಿಯ ವಾಸ್ತವಾಂಶಗಳಿಂದ ಸರ್ವೋಚ್ಚ ನ್ಯಾಯಾಲಯವು ತನ್ನ ಮಾರ್ಗಸೂಚಿಯಲ್ಲಿ ಹೇಳಿರುವ ತತ್ತ್ವಗಳಿಗೆ ಅನುಗುಣವಾಗಿ ವಿಚಾರಣೆಯನ್ನು ಹೊಸದಾಗಿ ನಡೆಸುವಂತೆ ಖಿರಿಯ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶ ನೀಡುವುದು ಅಗತ್ಯವಾಗಿದೆ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ ’ಎಂದು ಹೇಳಿದ ಪೀಠವು,ಶ್ರೀವಾಸ್ತವ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಅಂಗೀಕರಿಸಿತು ಮತ್ತು ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು ಹಾಗೂ ಅವರನ್ನು ಆರೋಪಿಯನ್ನಾಗಿಸಿ ಸಮನ್ಸ್ ಹೊರಡಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News