ಅಮೆರಿಕ-ಆಸ್ಟ್ರೇಲಿಯಾ ಸಬ್ಮೆರಿನ್ ಒಪ್ಪಂದ ಬಹುದೊಡ್ಡ ಪ್ರಮಾದ: ಫ್ರಾನ್ಸ್

Update: 2021-09-18 17:28 GMT

ಫ್ರಾನ್ಸ್‌ನೊಂದಿಗಿನ  ಗುತ್ತಿಗೆಯನ್ನು ಹಠಾತ್ತಾಗಿ ರದ್ದುಗೊಳಿಸಿ , ಅಮೆರಿಕದ ಜತೆ ಸಬ್ಮೆರಿನ್ ಪೂರೈಕೆ ಒಪ್ಪಂದ ಮಾಡಿಕೊಂಡಿರುವ ಆಸ್ಟ್ರೇಲಿಯಾದ ಉಪಕ್ರಮ ಬಹುದೊಡ್ಡ ಪ್ರಮಾದವಾಗಿದೆ ಎಂದು ಆಸ್ಟ್ರೇಲಿಯಾದಲ್ಲಿನ ಫ್ರಾನ್ಸ್ ರಾಯಭಾರಿ ಜೀನ್ ಪಿಯರೆ ಥೆಬಾಲ್ಟ್ ಪ್ರತಿಕ್ರಿಯಿಸಿದ್ದಾರೆ. ಫ್ರಾನ್ಸ್ನೊಂದಿಗಿನ ಶಸ್ತ್ರಾಸ್ತ್ರ ಕರಾರನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿದ ಆಸ್ಟ್ರೇಲಿಯಾದ ನಿರ್ಧಾರವನ್ನು ಪ್ರತಿಭಟಿಸಿ ಫ್ರಾನ್ಸ್ ತನ್ನ ರಾಯಭಾರಿಯನ್ನು ಆಸ್ಟ್ರೇಲಿಯಾದಿಂದ ವಾಪಾಸು ಕರೆಸಿಕೊಂಡಿದೆ.

ಶನಿವಾರ ಅವರು ಆಸ್ಟ್ರೇಲಿಯಾದಿಂದ ತಮ್ಮ ಸ್ವದೇಶಕ್ಕೆ ಮರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.
 
ಇದೊಂದು ಬಹುದೊಡ್ಡ ಪ್ರಮಾದ. ಸಹಭಾಗಿತ್ವವನ್ನು ಅತ್ಯಂತ ಕೆಟ್ಟದಾಗಿ ನಿರ್ವಹಿಸಿದ ನಿದರ್ಶನವಾಗಿದೆ. ಫ್ರಾನ್ಸ್- ಆಸ್ಟ್ರೇಲಿಯಾ ನಡುವಿನ ಶಸ್ತ್ರಾಸ್ತ್ರ ಒಪ್ಪಂದವು ವಿಶ್ವಾಸ, ಪರಸ್ಪರ ತಿಳುವಳಿಕೆ ಮತ್ತು ಪ್ರಾಮಾಣಿಕತೆಯ ಆಧಾರ ಹೊಂದಿರಬೇಕು ಎಂದು ಆಶಿಸಲಾಗಿತ್ತು. ಆದರೆ ಈಗ ಆಸ್ಟ್ರೇಲಿಯಾ ಅತ್ಯಂತ ವಿಸ್ಮಯಕಾರಿ ನಡೆಯನ್ನು ಮುನ್ನಡೆಸಿದೆ ಎಂದು ಥೆಬಾಲ್ಟ್ ಹೇಳಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮ್ಯಾರಿಸ್ ಪೇಯ್ನಾ, ಫ್ರಾನ್ಸ್ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಂಡಿರುವುದಕ್ಕೆ ವಿಷಾದವಿದೆ. ಫ್ರಾನ್ಸ್ಗೆ ಆಗಿರುವ ಅಸಮಾಧಾನವನ್ನು ನಾವು ಅರಿತುಕೊಂಡಿದ್ದೇವೆ. ಆದರೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ನಿಟ್ಟಿನಲ್ಲಿ ಈ ನಿರ್ಧಾರ ಅತ್ಯಂತ ಸ್ಪಷ್ಟ ಮತ್ತು ಸೂಕ್ತವಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News