​ಪಂಜಾಬ್ ಸಿಎಂ ಗಾದಿ ರೇಸ್‌ನಲ್ಲಿ ಸಿಧು ಜತೆಗೆ ಯಾರ್ಯಾರು ?

Update: 2021-09-19 05:00 GMT
ಅಮರೀಂದರ್ ಸಿಂಗ್

ಅಮೃತಸರ : ರಾಜ್ಯ ವಿಧಾನಸಭಾ ಚುನಾವಣೆಗೆ ಐದು ತಿಂಗಳು ಬಾಕಿ ಇರುವಂತೆಯೇ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ, ನವಜೋತ್ ಸಿಂಗ್ ಸಿಧು ಸೇರಿದಂತೆ ಹಲವು ಮಂದಿ ಕಾಂಗ್ರೆಸ್ ಮುಖಂಡರು ಸಿಎಂ ಗಾದಿಯ ರೇಸ್‌ನಲ್ಲಿದ್ದಾರೆ.

ಶನಿವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕನನ್ನು ಆಯ್ಕೆ ಮಾಡುವ ಹೊಣೆಯನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ವಹಿಸಲಾಗಿದ್ದು, ಎಲ್ಲರ ದೃಷ್ಟಿ ಹೈಕಮಾಂಡ್‌ ನತ್ತ ನೆಟ್ಟಿದೆ. ಪಂಜಾಬ್ ರಾಜ್ಯ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷರಾದ ಸುನೀಲ್ ಜಾಖಡ್ ಹಾಗೂ ಪ್ರತಾಪ್ ಬಾಜ್ವಾ ರೇಸ್‌ನಲ್ಲಿರುವ ಪ್ರಮುಖರು.

ರಾಜ್ಯದ ಸಚಿವರಾದ ಸುಖಜಿಂದರ್ ರಾಂಡ್ವಾ, ಸುಖಬಿಂದರ್ ಸಿಂಗ್ ಸರ್ಕಾರಿಯಾ ಮತ್ತು ತೃಪ್ತ್ ರಾಜೀಂದರ್ ಸಿಂಗ್ ಬಾಜ್ವಾ ಅವರ ಹೆಸರು ಕೂಡಾ ಕೇಳಿ ಬರುತ್ತಿದೆ. ಹಿರಿಯ ಮುಖಂಡರಾದ ಅಂಬಿಕಾ ಸೋನಿ, ಬ್ರಹ್ಮ ಮೊಹಿಂದ್ರ, ವಿಜಯ್ ಇಂದೆರ್ ಸಿಂಗ್ಲಾ, ಪಂಜಾಬ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕುಲಜೀತ್ ಸಿಂಗ್ ನಗ್ರಾ ಮತ್ತು ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಕೂಡಾ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

2017ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಬಹುಮತದೊಂದಿಗೆ ರಾಜ್ಯವನ್ನು ಗೆದ್ದುಕೊಟ್ಟ ಅಮರೀಂದರ್ ಸಿಂಗ್ ರಾಜೀನಾಮೆಯ ಬಳಿಕ, "ಅವರಿಗೆ ವಿಶ್ವಾಸ ಇರುವ ಯಾರನ್ನಾದರೂ ಮುಂದಿನ ಸಿಎಂ ಮಾಡಲಿ" ಎಂದು ಪ್ರತಿಕ್ರಿಯಿಸಿದ್ದರು. ಆದರೆ ನವಜ್ಯೋತ್ ಸಿಂಗ್ ಸಿಧು ಅವರ ನಾಯಕತ್ವವನ್ನು ಮಾತ್ರ ತಾವು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News