ಪಂಜಾಬ್ ಬಿಕ್ಕಟ್ಟು ಕುರಿತ ಟ್ವೀಟ್ ಗಾಗಿ ರಾಜೀನಾಮೆ ಸಲ್ಲಿಸಿದ ರಾಜಸ್ಥಾನ ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿ

Update: 2021-09-19 17:20 GMT

ಜೈಪುರ,ಸೆ.19: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರ ವಿಶೇಷ ಕರ್ತವ್ಯಾಧಿಕಾರಿ (ಒಎಸ್ ಡಿ) ಲೋಕೇಶ ಶರ್ಮಾ ಅವರು ಶನಿವಾರ ರಾತ್ರಿ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ತನ್ನ ಟ್ವೀಟ್ ಗಾಗಿ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ಸರಕಾರದ ಕ್ಷಮೆಯನ್ನೂ ಅವರು ಯಾಚಿಸಿದ್ದಾರೆ. ಇದಕ್ಕೂ ಮುನ್ನ ಅವರು ಪೋಸ್ಟ್ ಮಾಡಿದ್ದ ಟ್ವೀಟ್ ಅನ್ನು ಪಂಜಾಬಿನಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಕಾಂಗ್ರೆಸ್ ವಿರುದ್ಧ ಪರೋಕ್ಷ ಟೀಕೆ ಎಂದು ಪರಿಗಣಿಸಲಾಗಿತ್ತು.

ಬಲಿಷ್ಠ ವ್ಯಕ್ತಿಯನ್ನು ಅಸಹಾಯಕನನ್ನಾಗಿ ಮಾಡಲಾಗುತ್ತಿದೆ ಮತ್ತು ಸಾಧಾರಣ ವ್ಯಕ್ತಿಗೆ ಪದೋನ್ನತಿ ನೀಡಲಾಗುತ್ತಿದೆ ಎಂಬ ಅರ್ಥವನ್ನು ಅವರ ಟ್ವೀಟ್ ನೀಡಿತ್ತು.

ಗೆಹ್ಲೋಟ್ ಅವರೊಂದಿಗೆ ದಶಕಕ್ಕೂ ಹೆಚ್ಚು ಕಾಲದಿಂದ ಗುರುತಿಸಿಕೊಂಡಿರುವ ಶರ್ಮಾ ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ನೋಡಿಕೊಳ್ಳುತ್ತಿದ್ದರು. 2018ರಲ್ಲಿ ಗೆಹ್ಲೋಟ್ ಅಧಿಕಾರಕ್ಕೆ ಬಂದ ಬಳಿಕ ಶರ್ಮಾರನ್ನು ಒಎಸ್ಡಿಯನ್ನಾಗಿ ನೇಮಕಗೊಳಿಸಲಾಗಿತ್ತು.
ಶನಿವಾರ ಪಂಜಾಬ ಮುಖ್ಯಮಂತ್ರಿ ಸ್ಥಾನಕ್ಕೆ ಅಮರಿಂದರ್ ಸಿಂಗ್ ರಾಜೀನಾಮೆ ಸಲ್ಲಿಸಿದ ಬಳಿಕ ಶರ್ಮಾ ‘ಅವರು (ಕಾಂಗ್ರೆಸ್) ಬಲಿಷ್ಠರನ್ನು ದುರ್ಬಲಗೊಳಿಸುತ್ತಿದ್ದಾರೆ,ಸಾಧಾರಣ ವ್ಯಕ್ತಿಗಳನ್ನು ಅಧಿಕಾರಕ್ಕೇರಿಸುತ್ತಿದ್ದಾರೆ. ಬೇಲಿಯೇ ಹೊಲವನ್ನು ಮೇಯ್ದರೆ ಅಂತಹ ಪೈರನ್ನು ರಕ್ಷಿಸಲು ಯಾರಿಗೆ ಸಾಧ್ಯ’ಎಂದು ಪ್ರಶ್ನಿಸಿ ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News