ಚೀನಾ: ಬಾಹ್ಯಾಕಾಶಕ್ಕೆ ಸರಕು ಸಾಗಿಸುವ ನೌಕೆಯ ಉಡ್ಡಯನ ಯಶಸ್ವಿ

Update: 2021-09-20 17:38 GMT

ಬೀಜಿಂಗ್, ಸೆ.20: ತಾನು ನಿರ್ಮಿಸುತ್ತಿರುವ ಬಾಹ್ಯಾಕಾಶ ನಿಲ್ದಾಣ ತಿಯಾಂಗ್ಯಾಂಗ್ನ ನಿರ್ಮಾಣ ಕಾರ್ಯಕ್ಕೆ ಅಗತ್ಯ ವಸ್ತುಗಳನ್ನು ಭೂಮಿಯಿಂದ ಸಾಗಿಸುವ, ಮಾನವ ರಹಿತ ಸರಕು ಬಾಹ್ಯಾಕಾಶ ನೌಕೆಯ ಉಡ್ಡಯನ ಪ್ರಕ್ರಿಯೆ ಸೋಮವಾರ ಯಶಸ್ವಿಯಾಗಿದೆ ಎಂದು ಚೀನಾ ಹೇಳಿದೆ.

ದಕ್ಷಿಣದ ದ್ವೀಪಪ್ರಾಂತ್ಯ ಹೈನಾನ್ನ ವೆನ್ಚಾಂಗ್ ಬಾಹ್ಯಾಕಾಶ ನೌಕೆ ಉಡಾವಣಾ ನೆಲೆಯಿಂದ ತಿಯಾನ್ರೊ-3 ಸರಕು ನೌಕೆಯನ್ನು ಹೊತ್ತ ಎಲ್ಎಂ-7 ವೈ4 ರಾಕೆಟ್ ಬಾಹ್ಯಾಕಾಶದತ್ತ ನೆಗೆದಿದೆ ಎಂದು ಚೀನಾದ ಬಾಹ್ಯಾಕಾಶ ಯೋಜನೆ ಸಂಸ್ಥೆ ಸಿಎಂಎಸ್ಎ ಹೇಳಿದೆ. ಮುಂದಿನ ವರ್ಷ ಸಿದ್ಧವಾಗಲಿರುವ ಚೀನಾದ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಸರಕನ್ನು ಸಾಗಿಸಲು ತಿಯಾನ್ರೊ ಸರಣಿ ಬಾಹ್ಯಾಕಾಶ ನೌಕೆಗಳನ್ನು ಉಡ್ಡಯ ನಡೆಸಲಾಗುತ್ತಿದೆ. ಬಾಹ್ಯಾಕಾಶ ಯಾನಿಗಳಿಗೆ ಹಾಗೂ ನಿವಾಸಿಗಳಿಗೆ ಜೀವನಾವಲಂಬನೆ ಹಾಗೂ ವಾಸಿಸಲು ನೆಲೆ, ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಚೀನಾವು ಎಪ್ರಿಲ್ 29ರಂದು ಉಡಾಯಿಸಿರುವ ತಿಯಾನೆ ಗಗನನೌಕೆ ಮತ್ತು ಸೆ.18ರಂದು ಉಡಾಯಿಸಿರುವ ತಿಯಾನ್ರೊ-2 ಸರಕು ನೌಕೆಯೊಂದಿಗೆ ನಿಕಟ ಸಂಪರ್ಕದಲ್ಲಿ ತಿಯಾನ್ರೊ-3 ಸರಕು ನೌಕೆ ಕಾರ್ಯ ನಿರ್ವಹಿಸಲಿದೆ ಎಂದು ಸರಕಾರಿ ಸ್ವಾಮ್ಯದ ಕ್ಸಿನ್ಹುವ ಸುದ್ಧಿಮಾಧ್ಯಮ ವರದಿ ಮಾಡಿದೆ.

ಬಾಹ್ಯಾಕಾಶ ನಿಲ್ದಾಣ ಪೂರ್ಣಗೊಂಡರೆ, ಸ್ವತಂತ್ರ ಬಾಹ್ಯಾಕಾಶ ನಿಲ್ದಾಣ ಹೊಂದಿರುವ ವಿಶ್ವದ ಏಕೈಕ ದೇಶವಾಗಲಿದೆ ಚೀನಾ. ಈಗಾಗಲೇ ಬಾಹ್ಯಾಕಾಶದಲ್ಲಿರುವ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್(ಐಎಸ್ಎಸ್) ನಿಲ್ದಾಣವು ಹಲವು ದೇಶಗಳ ಸಹಯೋಗದ ಯೋಜನೆಯಾಗಿದೆ. ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಐಎಸ್ಎಸ್ನ ಕಾರ್ಯ ಸ್ಥಗಿತಗೊಂಡರೆ ಆಗ ಬಾಹ್ಯಾಕಾಶದಲ್ಲಿರುವ ಏಕೈಕ ನಿಲ್ದಾಣವಾಗಲಿದೆ ಚೀನಾದ ತಿಯಾಂಗ್ಯಾಂಗ್. ಇದರ ನಿರ್ಮಾಣಕ್ಕೆ ಅಗತ್ಯವಿರುವ ಹಲವು ಸರಕುಗಳು, ಗಗನಯಾತ್ರಿಗಳನ್ನು ಸಾಗಿಸುವ ಇನ್ನೂ ಹಲವು ಬಾಹ್ಯಾಕಾಶ ಯೋಜನೆ ಮುಂದಿನ ದಿನದಲ್ಲಿ ನಡೆಯಲಿದೆ. ಭೂಮಿಯ ಮೇಲ್ಮೈಯಿಂದ ಸುಮಾರು 340-450 ಕಿ.ಮೀ ಎತ್ತರದಲ್ಲಿ ಕೆಳ ಭೂಮಿಯ ಕಕ್ಷೆಯಲ್ಲಿ ಈ ನಿಲ್ದಾಣ 10 ವರ್ಷಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸಲಿದೆ. ಇಂಗ್ಲಿಷ್ನ ‘ಟಿ’ ಆಕಾರದ ಈ ನಿಲ್ದಾಣದ ನಡುಭಾಗದಲ್ಲಿ ಕೇಂದ್ರ ವ್ಯವಸ್ಥೆ, ಎರಡೂ ಬದಿಗಳಲ್ಲಿ ಪ್ರಯೋಗಾಲಯಗಳಿರುತ್ತವೆ. ಬಾಹ್ಯಾಾಶ ಒಟ್ಟು 66 ಟನ್ ತೂಕವಿರುತ್ತದೆ.

ಬಾಹ್ಯಾಕಾಶ ನಿಲ್ದಾಣ ನಿರ್ಮಾಣವು ಚೀನಾದ ಬಾಹ್ಯಾಕಾಶ ಯೋಜನೆಯಲ್ಲಿನ ಒಂದು ಮಹತ್ವದ ಮೈಲುಗಲ್ಲು ಆಗಿದ್ದು ಇದು ಮಾನವರು ಬಾಹ್ಯಾಕಾಶದ ಶಾಂತಿಯುತ ಬಳಕೆಗೆ ಪ್ರಮುಖ ಕೊಡುಗೆ ನೀಡಲಿದೆ ಎಂದು ಚೀನಾದ ಅ್ಯಕ್ಷ ಕ್ಸಿ ಜಿಂಪಿಂಗ್ ಪ್ರತಿಕ್ರಿಯಿಸಿದ್ದಾರೆ.

ಯಂತ್ರಮಾನವನ ಭುಜ

ಚೀನಾ ನಿರ್ಮಿಸುತ್ತಿರುವ ಬಾಹ್ಯಾಕಾಶ ನಿಲ್ದಾಣದಲ್ಲಿ ಯಂತ್ರಮಾನವ(ರೊಬಟ್)ನ ತೋಳು ಇರಲಿದ್ದು ಈ ಬಗ್ಗೆ ಅಮೆರಿಕ ಆತಂಕ ವ್ಯಕ್ತಪಡಿಸಿದೆ. 15 ಮೀಟರ್ ಉದ್ದದ ಈ ಯಾಂತ್ರಿಕ ಭುಜದ ನೆರವಿನಿಂದ ಚೀನಾ ಅಂತರಿಕ್ಷದಿಂದಲೇ ಹಲವು ದೇಶಗಳ ರಕ್ಷಣಾ ನೆಲೆಗಳ ಮೇಲೆ ಗೂಢಚರ್ಯೆ ಮಾಡಬಹುದು ಎಂಬುದು ಅಮೆರಿಕದ ಆತಂಕವಾಗಿದೆ.

ಬಾಹ್ಯಾಕಾಶ ನಿಲ್ದಾಣದ ನಿರ್ಮಾಣದಲ್ಲಿ ಈ ರೊಬಟ್ ತೋಳು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಚೀನಾದ ಬಾಹ್ಯಾಕಾಶ ಯೋಜನೆಯ ಮುಖ್ಯ ವಿನ್ಯಾಸಾರ ಝುವೊ ಜಿನ್ಪಿಂಗ್ ಹೇಳಿದ್ದಾರೆ.

ಚೀನಾ ಈ ಹಿಂದೆ ಉಡಾಯಿಸಿದ ಹಲವು ಉಪಗ್ರಹಗಳಲ್ಲೂ ರೊಬಟ್ ತೋಳು ಇತ್ತು. ಬಾಹ್ಯಾಕಾಶದಲ್ಲಿ ಸಂಗ್ರಹವಾಗಿರುವ ತ್ಯಾಜ್ಯಗಳನ್ನು ಗುಡಿಸಿ ತೆಗೆದು ಭೂಮಿಯ ವಾತಾವರಣದಲ್ಲಿ ಸುಟ್ಟು ಹಾಕಲು ಇದನ್ನು ಬಳಸಲಾಗಿತ್ತು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News