ವಿಶ್ವಬ್ಯಾಂಕ್ ಉದ್ಯಮಸ್ನೇಹಿ ರಾಷ್ಟ್ರಗಳ ಶ್ರೇಯಾಂಕ ಪಟ್ಟಿಯ ನ್ಯೂನತೆ ಪರಿಹಾರಕ್ಕೆ ಸಲಹೆ ನೀಡಿದ ತಜ್ಞರ ಸಮಿತಿ

Update: 2021-09-21 16:48 GMT

ವಾಷಿಂಗ್ಟನ್, ಸೆ.21: ವಿಶ್ವಬ್ಯಾಂಕ್ ಬಿಡುಗಡೆಗೊಳಿಸುವ ಉದ್ಯಮಸ್ನೇಹಿ ರಾಷ್ಟ್ರಗಳ ಶ್ರೇಯಾಂಕ ಪಟ್ಟಿ ರಚನೆ ಪ್ರಕ್ರಿಯೆಯ ಸಮಗ್ರ ಕಾರ್ಯಪದ್ಧತಿಯಲ್ಲಿರುವ ಲೋಪದೋಷವನ್ನು ಗಮನಿಸಿ ಪರಿಹರಿಸುವ ನಿಟ್ಟಿನಲ್ಲಿ ಸರಣಿ ಪರಿಹಾರ ಕ್ರಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಸಲಹೆಗಾರರ ತಂಡವೊಂದು ಶಿಫಾರಸು ಮಾಡಿದೆ.

ದೇಶಗಳು ಕ್ರಮಾಂಕ ಪಟ್ಟಿಯಲ್ಲಿ ಕೈವಾಡ ತೋರಿಸುವುದನ್ನು ತಡೆಯಲು ಶ್ರೇಯಾಂಕ ಪಟ್ಟಿಯ ಕೂಲಂಕುಷ ಪರಿಶೀಲನೆ ನಡೆಸಬೇಕು ಎಂದು ಶಿಕ್ಷಣತಜ್ಞರು ಮತ್ತು ಆರ್ಥಿಕ ತಜ್ಞರನ್ನು ಒಳಗೊಂಡ ಸಲಹೆಗಾರರ ತಂಡ ಬಿಡುಗಡೆಗೊಳಿಸಿದ 84 ಪುಟಗಳ ವರದಿ ಹೇಳಿದೆ. ಈ ವರದಿಯನ್ನು ವಿಶ್ವಬ್ಯಾಂಕ್ನ ಪ್ರಧಾನ ಆರ್ಥಿಕ ತಜ್ಞ ಕಾರ್ಮೆನ್ ರೀನ್ಹಾರ್ಟ್ಗೆ ಹಸ್ತಾಂತರಿಸಿದ 3 ವಾರದ ಬಳಿಕ ಸೋಮವಾರ ವಿಶ್ವಬ್ಯಾಂಕ್ನ ವೆಬ್ಸೈಟ್ನಲ್ಲಿ ಪ್ರಸಾರ ಮಾಡಲಾಗಿದೆ.

ಉದ್ಯಮ ಸ್ನೇಹೀ ವಾತಾವರಣ ಇರುವ ದೇಶಗಳ ಶ್ರೇಯಾಂಕ ಪಟ್ಟಿಯನ್ನು ರದ್ದುಗೊಳಿಸುವುದಾಗಿ ವಿಶ್ವಬ್ಯಾಂಕ್ ಕಳೆದ ಗುರುವಾರ ಪ್ರಕಟಿಸಿತ್ತು. ಈಗ ಐಎಂಎಫ್ ಮುಖ್ಯಸ್ಥೆಯಾಗಿರುವ ಕ್ರಿಸ್ತಾಲಿನಾ ಜಾರ್ಜಿವಾ ವಿಶ್ವಬ್ಯಾಂಕ್ನ ಸಿಇಒ ಆಗಿದ್ದ ಸಂದರ್ಭ ಅವರ ಸಹಿತ ಹಲವು ಪ್ರಮುಖ ಅಧಿಕಾರಿಗಳು ಚೀನಾದ ಪರವಾಗಿರುವಂತೆ ಅಂಕಿಅಂಶವನ್ನು ತಿರುಚಿರುವುದು ಆಂತರಿಕ ದಾಖಲೆಪತ್ರ ಪರಿಶೀಲನೆಯ ಸಂದರ್ಭ ಬೆಳಕಿಗೆ ಬಂದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿತ್ತು. ಆದರೆ ಈ ಆರೋವನ್ನು ಕ್ರಿಸ್ತಾಲಿನಾ ನಿರಾಕರಿಸಿದ್ದರು.

ಆಂತರಿಕ ದಾಖಲೆಪತ್ರ ಪರಿಶೀಲನೆ ನಡೆಸಿದ್ದ ವಿಲ್ಮರ್ಹೇಲ್ ಸಂಸ್ಥೆಯ ವರದಿಯಲ್ಲಿ ಎಲ್ಲಾ ಅಂಶಗಳನ್ನು ಉಲ್ಲೇಖಿಸಿರುವುದರಿಂದ ಉದ್ಯಮಸ್ನೇಹಿ ದೇಶಗಳ ಶ್ರೇಯಾಂಕ ಪಟ್ಟಿಯನ್ನು ರದ್ದುಗೊಳಿಸಿ, ಅದರ ಬದಲು ದೇಶಗಳು ಉದ್ಯಮಕ್ಕೆ ಪೂರಕವಾದ ವಾತಾವರಣ ಕಲ್ಪಿಸುವುದನ್ನು ಪ್ರೋತ್ಸಾಹಿಸುವ ಹೊಸ ಕಾರ್ಯಕ್ರಮ ರೂಪಿಸುವುದಾಗಿ ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಸ್ ಹೇಳಿದ್ದರು.
 
 ವಿಶ್ವಬ್ಯಾಂಕ್ ಆತ್ಮಶೋಧನೆ ಮಾಡಿಕೊಳ್ಳುವ ಅಗತ್ಯವಿದೆ. ಉತ್ತಮ ಆಡಳಿತ, ಪಾರದರ್ಶಕತೆ ಮತ್ತು ಪದ್ಧತಿಯನ್ನು ಸುಧಾರಣೆ ಮಾಡಿಕೊಳ್ಳುವ ಬಗ್ಗೆ ದೇಶಗಳಿಗೆ ಸಲಹೆ ನೀಡುತ್ತಿದ್ದ ವಿಶ್ವಬ್ಯಾಂಕ್ ಈಗ ಈ ನಿರ್ದೇಶವನ್ನು ತನ್ನ ಕಾರ್ಯವಿಧಾನದ ಸುಧಾರಣೆಯ ಬಗ್ಗೆ ಬಳಸಿಕೊಳ್ಳಬೇಕು ಎಂದು ತಜ್ಞರ ಸಮಿತಿಯ ಅಧ್ಯಕ್ಷ , ಕೊಲಂಬಿಯಾ ವಿವಿ ಪ್ರೊಫೆಸರ್ ಮಾರಿಸಿಯೊ ಕಾರ್ಡೆನಸ್ ಹೇಳಿದ್ದಾರೆ.

ತಿರುಚುವ ಪ್ರಯತ್ನ

ಉದ್ಯಮಸ್ನೇಹೀ ರಾಷ್ಟ್ರಗಳ ಶ್ರೇಯಾಂಕ ಪಟ್ಟಿಗೆ ಆಧಾರವಾಗಿರುವ ಅಂಕಿಅಂಶವನ್ನೇ ತಮಗೆ ಬೇಕಾದ ದೇಶಗಳ ಪರವಾಗಿರುವಂತೆ ತಿರುಚುವ ಬಗ್ಗೆ ವಕೀಲರು, ಅಕೌಂಟೆಂಟ್ಗಳು ಹಾಗೂ ಇತರ ವೃತ್ತಿನಿರತರು ಆರೋಪಿಸಿದ್ದರು. ಅಂಕಿಅಂಶ ನೀಡುವ ವ್ಯಕ್ತಿಗಳ ಮೇಲೆ ಒತ್ತಡ ಹೇರುವ ಮೂಲಕ ದೇಶಗಳು ತಮ್ಮ ಪರವಾದ ವರದಿ ಸೃಷ್ಟಿಸುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿದ್ದವು . ಕೆಲವೊಮ್ಮೆ ಬೆದರಿಕೆಯ ಅಸ್ತ್ರವನ್ನು ಪ್ರಯೋಗಿಸಿಯೂ ತಮ್ಮ ಪರವಾದ ಪಟ್ಟಿ ರೂಪಿಸಲಾ ಗಿದೆ ಎಂದು ತಜ್ಞರ ಸಮಿತಿ ಹೇಳಿದೆ.

ಉದ್ಯಮಸ್ನೇಹೀ ಶ್ರೇಯಾಂಕ ಪಟ್ಟಿ ರಚನೆಗೆ ಸಂಬಂಧಿಸಿದ ಪ್ರಶ್ನಾವಳಿ ಮತ್ತು ಅಂಕಿಅಂಶ ಸಂಗ್ರಹಣೆಯಲ್ಲಿ ಪಾರದರ್ಶಕತೆಯ ಕೊರತೆಯಿದೆ. ಆದ್ದರಿಂದ ಉದ್ಯಮಸ್ನೇಹಿ ಶ್ರೇಯಾಂಕ ಪಟ್ಟಿ ರಚಿಸುವ ತಂಡ ಹಾಗೂ ವಿಶ್ವಬ್ಯಾಂಕ್ನ ಇತರ ವಿಭಾಗಗಳ ಮಧ್ಯೆ ಅಂತರ ಇರಬೇಕು ಮತ್ತು ಈ ಪಟ್ಟಿಯ ಪರಿಶೀಲನೆಗೆ ಕಾಯಂ ಬಾಹ್ಯ ಪರಿಶೀಲನಾ ಮಂಡಳಿಯನ್ನು ರಚಿಸಬೇಕು ಎಂದು ತಜ್ಞರ ಸಮಿತಿ ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News