"ನನ್ನ ರಾಜೀನಾಮೆ ಕೊಟ್ಟವರು ಯಾರು ?": ವದಂತಿ ಹರಡಿದ ಜನಸತ್ತಾ ಗೆ ರವೀಶ್ ಕುಮಾರ್ ತಿರುಗೇಟು

Update: 2021-09-21 17:42 GMT

ಹೊಸದಿಲ್ಲಿ: ಎನ್ಡಿಟಿವಿ ಇಂಡಿಯಾದ ಹಿರಿಯ ಸಂಪಾದಕ ರವೀಶ್‌ ಕುಮಾರ್‌ ರವರು ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಯೊಂದನ್ನು ʼಜನಸತ್ತಾʼ ವೆಬ್‌ ಸೈಟ್ ಪ್ರಕಟಿಸಿದೆ ಎನ್ನಲಾಗಿದ್ದು, ಈ ಕುರಿತು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ರವೀಶ್‌ ಕುಮಾರ್‌ ವ್ಯಂಗ್ಯದೊಂದಿಗೆ ಕಟುವಾದ ಉತ್ತರವನ್ನು ನೀಡಿದ್ದಾರೆ. ನನ್ನ ರಾಜೀನಾಮೆ ಕೊಟ್ಟವರು ಯಾರು? ಎಂಬುವುದನ್ನು ನನಗೂ ತಿಳಿಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ "ರವೀಶ್‌ ಕುಮಾರ್‌ ರಾಜೀನಾಮೆ ಎಂಬ ವದಂತಿಯ ಕುರಿತ ಸತ್ಯಾಂಶ" ಎಂಬ ಶೀರ್ಷಿಕೆಯಲ್ಲಿ ಬರಹವನ್ನು ಪ್ರಾರಂಭಿಸಿದ್ದು, "ನನ್ನ ರಾಜೀನಾಮೆ ಕೊಟ್ಟವರು ಯಾರು? ಎಂದು ನಾನೂ ಹುಡುಕುತ್ತಿದ್ದೇನೆ. ನಾನೇ ಕೊಟ್ಟಿದ್ದೇನೆಯೇ? ಅಥವಾ ಅದನ್ನು ಕಥೆಯಾಗಿಸಿ ಹಿಟ್ಸ್‌ ಪಡೆದುಕೊಂಡವರೇ? ಹಾರಲು ಹಣವಿಲ್ಲದವರು ಇಂತಹ ವದಂತಿಗಳನ್ನು ಹಾರಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನನ್ನಲ್ಲಿ ಕೇಳಬೇಡಿ. ನೀವೇ ತಪ್ಪಾದ ಸುದ್ದಿಗಳನ್ನು ಹರಡಿ ಬಳಿಕ ಅದು ತಪ್ಪೇ? ಸರಿಯೇ? ಎಂದು ನನ್ನನ್ನು ಕೇಳುತ್ತೀರಿ."

"ಈ ವದಂತಿಯನ್ನು ʼಜನಸತ್ತಾʼ ಪ್ರಕಟಿಸಿದೆಯೇ? ಇಲ್ಲವೇ? ಎಂದು ನನಗೆ ತಿಳಿಯಬೇಕಾಗಿದೆ. ನನ್ನ ಕುರಿತು ವದಂತಿಗಳನ್ನು ಹರಡಿ ಹಿಟ್ಸ್‌ ಪಡೆದುಕೊಳ್ಳುತ್ತಾ ʼಜನಸತ್ತಾʼ ಮಾಡುತ್ತಿರುವುದಾದರೂ ಏನು?"

"ಉಳಿದವುಗಳನ್ನು ಪಕ್ಕಕ್ಕಿಡಿ. ಸ್ನೇಹಿತರೇ ನಿಮಗೆಲ್ಲರಿಗೂ ಸದ್ಯ ಉದ್ಯೋಗದ ಪರಿಸ್ಥಿತಿಯು ದೇಶದಲ್ಲಿ ತುಂಬಾ ಕಷ್ಟಕರವಾಗಿದೆ. ನಿಮ್ಮ ಪ್ರೀತಿಯ ನಾಯಕ ನರೇಂದ್ರ ಮೋದಿ ನಮ್ಮ ಪ್ರೀತಿಯ ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ. ಮೊದಲಿನಂತೆ ಈಗ ಉದ್ಯೋಗವೂ ಇಲ್ಲ, ಸಂಬಳವೂ ಇಲ್ಲ. ಇದರಿಂದ ನೀವು ಬೇಜಾರಾಗಬೇಕಾಗಿಲ್ಲ. ಭವಿಷ್ಯದಲ್ಲಿ ಯಾವುದೂ ಸರಿಯಾಗುವುದಿಲ್ಲ ಎಂಬ ಆಲೋಚನೆ ಬಂದಾಗ ನೀವು ಭೂತಕಾಲವನ್ನು ಸರಿಪಡಿಸಲು ಪ್ರಯತ್ನಿಸಿ. ಇತಿಹಾಸ ಪುರುಷರ ಸ್ಮಾರಕಗಳನ್ನು, ಪ್ರತಿಮೆಗಳನ್ನು ನಿರ್ಮಿಸುವ ಹೆಸರಿನಲ್ಲಿ ಗತಕಾಲದ ವೈಭವವನ್ನು ಮರು ಸೃಷ್ಟಿಸಲು ತೊಡಗಿ."

"ಇನ್ನು ಅದರಾಚೆಗೂ ನೀವು ಬೇಜಾರಾದರೆ, ನೆಹರೂ ಮುಸ್ಲಿಂ ಎಂಬ ಮೀಮ್ಸ್‌ ಗಳು ನಿಮ್ಮ ಕಣ್ಣ ಮುಂದೆಯೇ ಇದೆ. ಮುಸ್ಲಿಮರು ಏನು ಮಾಡಬೇಕು ಎಂಬುವುದರ ಬಗ್ಗೆ ಯೋಚಿಸಿ. ನಿಯಂತ್ರಣಕ್ಕೆ ಸಿಗದ ಈ ಕೆಲಸದಲ್ಲಿ ಖಂಡಿತಾ ನೀವು ಖುಷಿಪಡುತ್ತೀರಿ. ಗತ ಇತಿಹಾಸ ಪುರುಷರು ಮತ್ತು ಮುಸ್ಲಿಮರು ಎಂಬ ಈ ಎರಡು ವಿಚಾರಗಳು ಸಾಕು ನಿಮಗೆ ಸಂತೋಷವಾಗಿರಲು. ಕೇವಲ ಉದ್ಯೋಗ ಇಲ್ಲವೆಂದು ನೀವೇಕೆ ಬೇಜಾರಾಗುತ್ತೀರಿ?" ಎಂದು ರವೀಶ್‌ ಕುಮಾರ್‌ ವ್ಯಂಗ್ಯವಾಡಿದ್ದಾರೆ.

ಇಂದು ಬೆಳಗ್ಗಿನಿಂದ ಅದಾನಿ ಸಮೂಹ ಸಂಸ್ಥೆಯು ಎನ್ಡಿಟಿವಿಯನ್ನು ಖರೀದಿಸಲಿದೆ ಎಂಬ ವದಂತಿಯೊಂದು ಸಾಮಾಜಿಕ ತಾಣದಾದ್ಯಂತ ಹರಿದಾಡುತ್ತಿತ್ತು. ಈ ವದಂತಿಗೂ ಕಮೆಂಟ್‌ ನಲ್ಲಿ ಪ್ರತಿಕ್ರಿಯಿಸಿದ ರವೀಶ್‌ ಕುಮಾರ್‌, ಹಾಗಾಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಅದರ ಜೊತೆಗೆ ಜನಸತ್ತಾ, ರವೀಶ್‌ ಕುಮಾರ್‌ ಎನ್ಡಿಟಿವಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ವರದಿಯನ್ನೂ ಪ್ರಕಟಿಸಿತ್ತು.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News