ವಿಶಿಷ್ಟ ಗುರುತು ಪ್ರಾಧಿಕಾರ, ಟೈಮ್ಸ್ ಗ್ರೂಪ್ ಅನ್ನು ಟಾರ್ಗೆಟ್ ಮಾಡಿದ್ದ ಚೀನೀ ಹ್ಯಾಕರ್ ಗಳು: ವರದಿ

Update: 2021-09-22 07:10 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಚೀನಾ ಸರಕಾರದಿಂದ ಪ್ರವರ್ತಿತ ಹ್ಯಾಕರುಗಳು ಭಾರತದ ನಾಗರಿಕರ ಬಯೋಮೆಟ್ರಿಕ್ ಮಾಹಿತಿಯ ಡೇಟಾಬೇಸ್ ಹೊಂದಿರುವ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಹಾಗೂ ಪ್ರಮುಖ ಮಾದ್ಯಮ ಸಂಸ್ಥೆಯಾದ ಟೈಮ್ಸ್ ಗ್ರೂಪ್ ಮಾಹಿತಿಗಳನ್ನು ಹ್ಯಾಕ್ ಮಾಡಿದ್ದಾರೆಂದು ಸೈಬರ್ ಸೆಕ್ಯುರಿಟಿ ಸಂಸ್ಥೆ 'ರೆಕಾರ್ಡೆಡ್ ಫ್ಯೂಚರ್ ಇಂಕ್ ವರದಿ' ಮಾಡಿದೆ. ಆದರೆ ವಿಶಿಷ್ಟ ಗುರುತು ಪ್ರಾಧಿಕಾರ ಮತ್ತು  ಟೈಮ್ಸ್ ಗ್ರೂಪ್ ಈ ಹ್ಯಾಕಿಂಗ್ ಸುದ್ದಿಯನ್ನು ತಳ್ಳಿಹಾಕಿವೆ.

ಈ ವರ್ಷದ ಜೂನ್ ಮತ್ತು ಜುಲೈ ನಡುವೆ ವಿಶಿಷ್ಟ ಗುರುತು ಪ್ರಾಧಿಕಾರದ ಡೇಟಾಬೇಸ್ ಹ್ಯಾಕ್ ಆಗಿದೆ ಆದರೆ ಯಾವ ಡೇಟಾ ಟಾರ್ಗೆಟ್ ಮಾಡಲಾಗಿದೆ ಎಂಬ ಕುರಿತು ಸ್ಪಷ್ಟತೆಯಿಲ್ಲ ಎಂದು ವರದಿ ಹೇಳಿದೆ.

ಆದರೆ ಇಂತಹ ಹ್ಯಾಕಿಂಗ್ ಕುರಿತು ತನಗೆ ಅರಿವಿಲ್ಲ, ತನ್ನ ಡೇಟಾಬೇಸ್ ಎನ್‍ಕ್ರಿಪ್ಟ್ ಆಗಿದೆ ಹಾಗೂ ಹಲವಾರು ದೃಢೀಕರಣಗಳ ನಂತರವಷ್ಟೇ ಬಳಕೆದಾರರಿಗೆ ಲಭ್ಯವಿರುತ್ತದೆ ಎಂದು ಪ್ರಾಧಿಕಾರ ಹೇಳಿದೆ.

'ಟೈಮ್ಸ್ ಗ್ರೂಪ್' ಎಂದೂ ಕರೆಯಲ್ಪಡುವ ಬೆನ್ನೆಟ್ ಕೋಲ್‍ಮೆನ್ & ಕೋ ಮಾಹಿತಿಯನ್ನು ಈ ವರ್ಷದ ಫೆಬ್ರವರಿ ಮತ್ತು ಆಗಸ್ಟ್ ನಡುವೆ ಹ್ಯಾಕ್ ಮಾಡಲಾಗಿದೆ ಹಾಗೂ ಯಾವ ಡೇಟಾ ಕದಿಯಲಾಗಿದೆ ಎಂದು ತಿಳಿದಿಲ್ಲ ಎಂದು ವರದಿ ಹೇಳಿದೆ. ಆದರೆ ಟೈಮ್ಸ್ ಗ್ರೂಪ್ ಕೂಡ ಈ ಸುದ್ದಿಯನ್ನು ತಳ್ಳಿ ಹಾಕಿದೆಯಲ್ಲದೆ ಹ್ಯಾಕಿಂಗ್ ಯತ್ನವನ್ನು ತನ್ನ ಸೈಬರ್ ಸೆಕ್ಯುರಿಟಿ ತಂತ್ರಜ್ಞಾನವು ನಿರ್ಬಂಧಿಸಿದೆ ಎಂದು ಹೇಳಿದೆ.

ನಡೆದಿದೆಯೆನ್ನಲಾದ ಹ್ಯಾಕಿಂಗ್ ಯತ್ನ "ಗಂಭೀರವಲ್ಲದ ಎಚ್ಚರಿಕೆ ಹಾಗೂ ಸುಳ್ಳು ಎಚ್ಚರಿಕೆಗಳು.'' ಎಂದು  ಕಂಪೆನಿಯ ಆಂತರಿಕ ಭದ್ರತಾ ವರದಿ ಹೇಳಿದೆ ಎಂದು ಟೈಮ್ಸ್ ಗ್ರೂಪ್‍ನ ಮುಖ್ಯ ಮಾಹಿತಿ ಅಧಿಕಾರಿ ರಾಜೀವ್ ಬಾತ್ರಾ ಹೇಳಿದ್ದಾರೆ.

ಈ ವಿಚಾರ ಕುರಿತಂತೆ ಚೀನಾದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿಲ್ಲ. ವರದಿ ಮಾಡಿದ ರೆಕಾರ್ಡೆಡ್ ಫ್ಯೂಚರ್ ಸಂಸ್ಥೆ ಬಾಸ್ಟನ್ ಸಮೀಪದಲ್ಲಿ ಕಾರ್ಯಾಚರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News