ವ್ಯರ್ಥವಾಗಲಿದೆ ಶ್ರೀಮಂತ ರಾಷ್ಟ್ರಗಳ ಬಳಿ ದಾಸ್ತಾನಿರುವ 10 ಕೋ. ಡೋಸ್ ಕೋವಿಡ್ ಲಸಿಕೆ!

Update: 2021-09-22 10:59 GMT

ಹೊಸದಿಲ್ಲಿ,ಸೆ.22: ತಮ್ಮ ಪ್ರಜೆಗಳನ್ನು ಮಹಾಮಾರಿಯಿಂದ ರಕ್ಷಿಸಲು ಲಸಿಕೆಗಳನ್ನು ಪಡೆದುಕೊಳ್ಳಲು ಬಡರಾಷ್ಟ್ರಗಳು ಹರಸಾಹಸ ಪಡುತ್ತಿರುವಾಗ ಜಿ7 ಅಥವಾ ಶ್ರೀಮಂತ ರಾಷ್ಟ್ರಗಳ ಬಳಿ ದಾಸ್ತಾನಿರುವ ಸುಮಾರು 10 ಕೋಟಿ ಡೋಸ್ ಕೋವಿಡ್ ಲಸಿಕೆ ಈ ವರ್ಷಾಂತ್ಯದ ವೇಳೆಗೆ ಅವಧಿ ಮೀರಿ ನಿರರ್ಥಕಗೊಳ್ಳಲಿದೆ ಎಂದು newsclick.in ವರದಿ ಮಾಡಿದೆ.

ಬಡರಾಷ್ಟ್ರಗಳ ಶೇ.1.9 ಜನರು ಮಾತ್ರ ಈವರೆಗೆ ಕನಿಷ್ಠ ಒಂದು ಡೋಸ್ ಪಡೆದಿರುವುದರಿಂದ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಲಸಿಕೆ ವ್ಯರ್ಥವಾಗುತ್ತಿರುವುದನ್ನು ಸಾಮಾಜಿಕ ನ್ಯಾಯ ಹೋರಾಟಗಾರರು ‘ದೌರ್ಜನ್ಯ’ಎಂದು ಬಣ್ಣಿಸುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಅಮೆರಿಕಾದಲ್ಲಿ ಶೇ.63ರಷ್ಟು ಮತ್ತು ಬ್ರಿಟನ್ನಲ್ಲಿ ಶೇ.71ರಷ್ಟು ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ 

ವರ್ಷಾಂತ್ಯದ ವೇಳೆಗೆ ವ್ಯರ್ಥಗೊಳ್ಳಲಿರುವ 10 ಕೋ.ಡೋಸ್ಗಳ ಪೈಕಿ ಶೇ.41ರಷ್ಟು ಐರೋಪ್ಯ ಒಕ್ಕೂಟ ಮತ್ತು ಶೇ.32ರಷ್ಟು ಅಮೆರಿಕದ ಬಳಿಯಿವೆ ಎಂದು ಔಷಧಿ ತಯಾರಿಕೆ ಕಂಪನಿಗಳು, ಸರಕಾರಗಳು, ಹೂಡಿಕೆದಾರರು ಮತ್ತು ಮಾಧ್ಯಮಗಳೊಂದಿಗೆ ಕಾರ್ಯಾಚರಿಸುತ್ತಿರುವ ಮಾಹಿತಿ ಮತ್ತು ವಿಶ್ಲೇಷಣಾ ಸಂಸ್ಥೆ ಏರ್ಫಿನಿಟಿ ಬಿಡುಗಡೆಗೊಳಿಸಿರುವ ವರದಿಯು ಬೆಟ್ಟುಮಾಡಿದೆ.

ಲಸಿಕೆಯ ಮರುವಿತರಣೆಗೆ ಕರೆ ನೀಡಿರುವ ವರದಿಯು,2021ರ ಅಂತ್ಯದ ವೇಳೆಗೆ ಜಿ7 ಮತ್ತು ಐರೋಪ್ಯ ಒಕ್ಕೂಟ ತಮ್ಮ ಅಗತ್ಯಕ್ಕಿಂತ ಒಂದು ಶತಕೋಟಿ ಹೆಚ್ಚು ಲಸಿಕೆ ಡೋಸ್ಗಳನ್ನು ಹೊಂದಿರಲಿವೆ ಮತ್ತು ಈ ಪೈಕಿ ಶೇ.10ರಷ್ಟು ಅಥವಾ 10 ಕೋ.ಡೋಸ್ ಲಸಿಕೆ ಈ ವರ್ಷವೇ ಅವಧಿಯನ್ನು ಮೀರುವ ನಿರೀಕ್ಷೆಯಿದೆ ಎಂದು ಹೇಳಿದೆ.

ಕಡಿಮೆ ಆದಾಯದ ಮತ್ತು ಕೆಳ ಮಧ್ಯಮ ಆದಾಯದ ದೇಶಗಳಲ್ಲಿ ಲಸಿಕೆಯನ್ನು ನೀಡಲು ಅಗತ್ಯವಾಗಿರುವ ಸಮಯವನ್ನು ಗಣನೆಗೆ ತೆಗೆದುಕೊಂಡರೆ ವ್ಯರ್ಥಗೊಳ್ಳುವ ಡೋಸ್ಗಳ ಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ. ಈ ದೇಶಗಳು ಲಸಿಕೆಯನ್ನು ಬಳಸಲು ಅದು ಕನಿಷ್ಠ ಎರಡು ತಿಂಗಳುಗಳ ಅವಧಿಯನ್ನು ಹೊಂದಿರುವುದು ಅಗತ್ಯವಾಗಿದೆ.

ಏರ್ಫಿನಿಟಿಯ ಲೆಕ್ಕಾಚಾರಗಳಂತೆ ಜಿ7 ದೇಶಗಳು ತಕ್ಷಣ ಮರುವಿತರಣೆ ಮಾಡದೆ 2021ರ ಅಂತ್ಯದ ವೇಳೆಗೆ 24.10 ಕೋ.ಡೋಸ್ ಲಸಿಕೆಯನ್ನು ವ್ಯರ್ಥ ಮಾಡಬಹುದು. ಬೂಸ್ಟರ್ ಡೋಸ್ಗಳನ್ನು ನೀಡಿದ ಮತ್ತು ಲಸಿಕೆ ದೇಣಿಗೆಗಳ ವಾಗ್ದಾನವನ್ನು ಪೂರೈಸಿದ ಬಳಿಕವೂ ಇಷ್ಟೊಂದು ಪ್ರಮಾಣದಲ್ಲಿ ಡೋಸ್ಗಳು ವ್ಯರ್ಥವಾಗಲಿವೆ.

ಈಗಾಗಲೇ ಖರೀದಿಸಲಾಗಿರುವ ಮತ್ತು ಕೋವ್ಯಾಕ್ಸ್ನಿಂದ ಪೂರೈಕೆಯಾದ ಡೋಸ್ಗಳು ಸೇರಿದರೆ ಜಿ7 ಮತ್ತು ಐರೋಪ್ಯ ಒಕ್ಕೂಟದ ಬಳಿ ಲಭ್ಯವಿರುವ ಡೋಸ್ಗಳ ಪ್ರಮಾಣವು ಕಡಿಮೆ ಆದಾಯದ ಮತ್ತು ಕೆಳ ಮಧ್ಯಮ ಆದಾಯದ ದೇಶಗಳು ಮೇ 2022ರ ವೇಳೆಗೆ ತಮ್ಮ ಶೇ.70ರಷ್ಟು ಜನಸಂಖ್ಯೆಗೆ ಲಸಿಕೆ ನೀಡಲು ಸಾಕು ಎಂದು ವರದಿಯು ಮುನ್ನಂದಾಜಿಸಿದೆ.

ಲಸಿಕೆ ವಿತರಣೆಯಲ್ಲಿ ಜಾಗತಿಕ ಅಸಮಾನತೆಗಳು ಹೆಚ್ಚುತ್ತಿರುವ ಈ ನಿರ್ಣಾಯಕ ಸಮಯದಲ್ಲಿ ವರದಿಯು ಹೊರಬಿದ್ದಿದೆ. ಹೆಚ್ಚಿನ ಶ್ರೀಮಂತ ರಾಷ್ಟ್ರಗಳು ಯಾವುದೇ ತೊಂದರೆಯಿಲ್ಲದೆ ತಮ್ಮ ಶೇ.70ಕ್ಕೂ ಹೆಚ್ಚಿನ ಜನಸಂಖ್ಯೆಗೆ ಸಂಪೂರ್ಣವಾಗಿ ಲಸಿಕೆಗಳನ್ನು ಹಾಕಿದ್ದರೆ ಆಫ್ರಿಕನ್ ದೇಶಗಳಿಗೆ ತಮ್ಮ ಶೇ.4ರಷ್ಟು ಜನಸಂಖ್ಯೆಗೆ ಮಾತ್ರ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡಲು ಸಾಧ್ಯವಾಗಿದೆ. ನೈಜೀರಿಯಾ ಮತ್ತು ಇಥಿಯೋಪಿಯಾದಂತಹ ಇತರ ಕೆಲವು ದೇಶಗಳಲ್ಲಂತೂ ಈ ಪ್ರಮಾಣ ಶೇ.1ಕ್ಕೂ ಕಡಿಮೆಯಾಗಿದೆ.

ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಾಗತಿಕ ಲಸಿಕೆ ಶೃಂಗಸಭೆಗೆ ಮುನ್ನ ಬಿಡುಗಡೆಗೊಂಡಿರುವ ವರದಿಯು, ಜಾಗತಿಕವಾಗಿ ಸಾವುಗಳ ಅಂದಾಜನ್ನು ಕಡಿಮೆ ತೋರಿಸಿರುವುದನ್ನು ಬೆಟ್ಟು ಮಾಡಿದೆ ಮತ್ತು ಅದನ್ನು ದೃಢೀಕರಿಸಿದೆ. ಅಧಿಕೃತ ಸಾವುಗಳ ಅಂಕಿಅಂಶಗಳು ಮತ್ತು ವಾಸ್ತವದಲ್ಲಿ ಸಂಭವಿಸಿರುವ,ವಿಶೇಷವಾಗಿ ಕಡಿಮೆ ಆದಾಯದ ದೇಶಗಳಲ್ಲಿಯ ಸಾವುಗಳಿಗೂ ಬೃಹತ್ ಅಂತರವಿದೆ ಎಂದಿರುವ ವರದಿಯು, ಈ ದೇಶಗಳಲ್ಲಿ ವರದಿಗಾರಿಕೆ ವ್ಯವಸ್ಥೆಯು ತೀರ ಕೆಟ್ಟದಾಗಿದೆ ಮತ್ತು ವಾಸ್ತವದಲ್ಲಿ ಸಂಭವಿಸಿರುವ ಸಾವುಗಳ ಸಂಖ್ಯೆ ಮೂರು ಪಟ್ಟು ಅಧಿಕವಾಗಿರಬಹುದು ಎಂದು ಹೇಳಿದೆ.

ಈಗ ಲಭ್ಯವಿರುವ ಮತ್ತು ಭವಿಷ್ಯದಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿರುವ ಲಸಿಕೆ ಡೋಸ್ಗಳನ್ನು ತಕ್ಷಣದಿಂದಲೇ ದೇಣಿಗೆಯಾಗಿ ಒದಗಿಸುವುದನ್ನು ಆರಂಭಿಸಿದರೆ 2022ರ ಮಧ್ಯದ ವೇಳೆಗೆ ಸುಮಾರು 10 ಲ.ಸಾವುಗಳನ್ನು ತಪ್ಪಿಸಬಹುದು ಎಂದಿರುವ ವರದಿಯು, ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತು ಕೋವಿಡ್ನ ಹೆಚ್ಚು ಸಾಂಕ್ರಾಮಿಕ ಪ್ರಭೇದಗಳ ಹರಡುವಿಕೆ ಮುಂದುವರಿಯುವ ನಿರೀಕ್ಷೆಯಿರುವುದರಿಂದ ಹೆಚ್ಚು ಪ್ರಮಾಣದಲ್ಲಿ ಲಸಿಕೆಗಳನ್ನು ನೀಡಿದರೆ ಸಾವಿನ ಸೋಂಕಿನ ಬೆಳವಣಿಗೆ ದರವನ್ನು ನಿಧಾನಗೊಳಿಸಬಹುದು. ಪರಿಣಾಮಕಾರಿ ಲಸಿಕೆಗಳನ್ನು ತ್ವರಿತವಾಗಿ ಬಿಡುಗಡೆಗೊಳಿಸಿದರೆ ಮುಂಬರುವ ತಿಂಗಳುಗಳಲ್ಲಿ ಸಾವಿನ ದರವನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಬಹುದು ಎಂದು ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News