ವಿಶ್ವಸಂಸ್ಥೆ ಮಹಾ ಅಧಿವೇಶನ ಅಮೆರಿಕದ ವಿರುದ್ಧ ಹರಿಹಾಯ್ದ ಇರಾನ್ ಅಧ್ಯಕ್ಷ

Update: 2021-09-22 17:20 GMT

ವಿಶ್ವಸಂಸ್ಥೆ, ಸೆ.22: ಇರಾನ್ ಕುರಿತ ಅಮೆರಿಕದ ಕಾರ್ಯನೀತಿ ಮತ್ತು ಇರಾನ್ ಮೇಲೆ ಅಮೆರಿಕ ವಿಧಿಸಿದ ನಿರ್ಬಂಧಗಳಿಂದಾಗಿ ಇರಾನ್‌ನ ಆರ್ಥಿಕತೆಗೆ ಘಾಸಿಯುಂಟು ಮಾಡಿದೆ ಎಂದು ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಹೇಳಿದ್ದಾರೆ.

ಅಮೆರಿಕದ ನಿರ್ಬಂಧವು ಯುದ್ಧದ ಕಾರ್ಯವಿಧಾನವಾಗಿದೆ . ನಿರ್ಬಂಧಗಳ ಮೂಲಕ ಅಮೆರಿಕವು ವಿಶ್ವದ ಇತರ ದೇಶಗಳೊಂದಿಗೆ ಹೊಸ ರೀತಿಯ ಯುದ್ಧ ನಡೆಸುತ್ತಿದೆ. ಕೊರೋನ ಸೋಂಕಿನ ಈ ಸಂದರ್ಭದಲ್ಲಿ ಇಂತಹ ಶಿಕ್ಷೆಯು ಮಾನವೀಯತೆಯ ವಿರುದ್ಧಧ ಅಪರಾಧಕ್ಕೆ ಸಮವಾಗಿದೆ ಎಂದರು.

ಕಳೆದ ತಿಂಗಳು ಅಧ್ಯಕ್ಷ ಹುದ್ದೆಗೇರಿದ್ದ ರೈಸಿ, ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಮಾಡಿದ ಪ್ರಥಮ ಭಾಷಣದಲ್ಲೇ ಅಮೆರಿಕದ ವಿದೇಶಾಂಗ ನೀತಿಯನ್ನು ಕಟುವಾಗಿ ಮತ್ತು ನೇರ ಮಾತುಗಳಲ್ಲಿ ಟೀಕಿಸುವ ಮೂಲಕ ಮಾಜಿ ಅಧ್ಯಕ್ಷ ಹಸನ್ ರೂಹಾನಿಗಿಂತ ಭಿನ್ನ ನಿಲುವು ಪ್ರದರ್ಶಿಸಿದರು. ಅವರ ಭಾಷಣ ಇರಾನ್‌ನ ಇಸ್ಲಾಮಿಕ್ ರಾಜಕೀಯ ಅಸ್ಮಿತೆಯನ್ನು ಸಮರ್ಥಿಸುವ ಜೊತೆಗೆ ಇರಾನ್‌ನ ಆರ್ಥಿಕತೆ ಹಾಗೂ ಜನಸಾಮಾನ್ಯರ ಮೇಲೆ ತೀವ್ರ ಘಾಸಿ ಎಸಗಿರುವ ಅಮೆರಿಕದ ನಿರ್ಬಂಧವನ್ನು ಕಟುವಾಗಿ ಖಂಡಿಸುವ ರೀತಿಯಲ್ಲಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಜನವರಿ 6ರಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದ ಕ್ಯಾಪಿಟಲ್ ಹಿಲ್‌ನಲ್ಲಿ ನಡೆಸಿದ ದಂಗೆ ಮತ್ತು ಕಳೆದ ತಿಂಗಳು ಅಫ್ಗಾನ್‌ನಿಂದ ಜನರನ್ನು ತೆರವುಗೊಳಿಸುತ್ತಿದ್ದ ಅಮೆರಿಕದ ವಿಮಾನಕ್ಕೆ ಜೋತುಬಿದ್ದು ಹಲವು ಜನಸಾಮಾನ್ಯರು ಮೃತಪಟ್ಟ ಘಟನೆಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ರೈಸಿ ‘ದೇಶದೊಳಗೆ ಅಥವಾ ಹೊರಗೆ , ಅಮೆರಿಕದ ಅಧಿಪತ್ಯ ವ್ಯವಸ್ಥೆಗೆ ಯಾವುದೇ ವಿಶ್ವಾಸಾರ್ಹತೆಯಿಲ್ಲ ಎಂಬ ಸ್ಪಷ್ಟ ಸಂದೇಶ ಕ್ಯಾಪಿಟಲ್‌ನಿಂದ ಕಾಬೂಲ್‌ನವರೆಗೆ ಜಗತ್ತಿಗೆ ರವಾನೆಯಾಗಿದೆ ’ ಎಂದರು.

 ಅಮೆರಿಕವು ಇರಾನ್ ಮೇಲೆ ವಿಧಿಸಿರುವ ನಿರ್ಬಂಧದಲ್ಲಿ ಮಾನವೀಯ ನೆರವಿಗೆ ವಿನಾಯಿತಿ ನೀಡಲಾಗಿದ್ದರೂ, ವಿದೇಶಗಳಿಂದ ಔಷಧ ಹಾಗೂ ಇತರ ಸಾಧನಗಳ ಖರೀದಿಗೆ ತೊಡಕು ಉಂಟು ಮಾಡಿದೆ. ಕೊರೋನ ಸೋಂಕಿನ ಹಲವು ಅಲೆಗಳು ಉಲ್ಬಣಿಸಿರುವ ಇರಾನ್‌ನಲ್ಲಿ ಸುಮಾರು 1,18,000ದಷ್ಟು ಮಂದಿ ಸೋಂಕಿನಿಂದ ಮೃತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News