ಜೂಜಾಟ ಮುಕ್ತ ಕರ್ನಾಟಕದ ಕನಸು ಶೀಘ್ರ ನನಸಾಗಲಿ

Update: 2021-09-23 08:17 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕರ್ನಾಟಕವನ್ನು ಜೂಜು ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಶುಭ ಸುದ್ದಿಯೊಂದನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈಗಾಗಲೇ ಎಲ್ಲಾ ರೀತಿಯ ಆನ್‌ಲೈನ್ ಜೂಜು ಹಾಗೂ ಬೆಟ್ಟಿಂಗ್ ನಿಷೇಧಿಸುವ ಮಹತ್ವದ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ್ಕೆ ಅನುಮೋದನೆಯನ್ನು ನೀಡಲಾಗಿದೆ. ಆನ್‌ಲೈನ್ ಜೊತೆಗೆ ಆಫ್‌ಲೈನ್ ಜೂಜಿನ ಮೇಲೂ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಆರಗ ಭರವಸೆ ನೀಡಿದ್ದಾರೆ. ಸಚಿವರ ಮಾತುಗಳು ನಿಜವಾದರೆ ಅದು ಕರ್ನಾಟಕದ ಯುವ ಜನತೆಯ ಬದುಕಿನ ಮೇಲೆ ಬಹಳಷ್ಟು ಸದ್‌ಪರಿಣಾಮಗಳನ್ನು ಬೀರಬಹುದು. ಆದರೆ ಕರ್ನಾಟಕವನ್ನು ಜೂಜು ಮುಕ್ತವನ್ನಾಗಿಸುವುದು ಅಷ್ಟು ಸುಲಭವಿಲ್ಲ ಎನ್ನುವುದು ಸಚಿವರಿಗೆ ತಿಳಿಯದ ವಿಷಯವೇನೂ ಅಲ್ಲ. ಯಾಕೆಂದರೆ, ಜೂಜು ಎನ್ನುವುದು ರಾಜಕೀಯದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ.

ಕರ್ನಾಟಕದಲ್ಲಿ ಸರಕಾರ ರಚನೆಯೇ ಜೂಜಿನ ರೂಪ ಪಡೆದಿರುವಾಗ, ಅಧಿಕೃತ ಜೂಜನ್ನು ನಿಯಂತ್ರಿಸುವುದು ಸಾಧ್ಯವೆ? ಸಂಪೂರ್ಣ ತನ್ನ ನಿಯಂತ್ರಣದಲ್ಲಿರುವ ಮದ್ಯವನ್ನಾದರೂ ಸಂಪೂರ್ಣವಾಗಿ ನಿಷೇಧಿಸಿದ್ದಿದ್ದರೆ, ಸರಕಾರ ದ ಜೂಜು ಮುಕ್ತ ಕರ್ನಾಟಕದ ಕನಸನ್ನು ನಂಬಬಹುದಿತ್ತು. ಹಿಂದೆ ಬಿಜೆಪಿಯ ನೇತಾರರೊಬ್ಬರು ‘ಮಟ್ಕಾ ದಂಧೆ’ಯನ್ನು ಕಾನೂನು ಬದ್ಧಗೊಳಿಸುವ ಮಾತನ್ನಾಡಿದ್ದರು. ಹೀಗೆ ಮಾಡುವುದರಿಂದ ಸರಕಾರಕ್ಕೆ ಆದಾಯ ಬರುತ್ತದೆ ಎನ್ನುವುದು ಅವರ ತರ್ಕ. ಸಂಪೂರ್ಣ ಮದ್ಯ ನಿಷೇಧದ ಹಿಂದೆಯಿರುವುದೂ ಇದೇ ತರ್ಕ. ಜನಸಾಮಾನ್ಯರ ಬದುಕನ್ನು ಹಸನು ಮಾಡಬೇಕಾದ ಹೊಣೆ ಹೊತ್ತುಕೊಳ್ಳಬೇಕಾದ ಸರಕಾರ, ಜನಸಾಮಾನ್ಯರ ತಲೆ ಒಡೆದು ಬೊಕ್ಕಸ ತುಂಬಿಕೊಳ್ಳ ಬೇಕಾದ ಸ್ಥಿತಿಯಲ್ಲಿದೆ. ವಿಲಕ್ಷಣ ಅಭಿವೃದ್ಧಿಯ ಮಾದರಿಯಿದು. ಈ ಅಭಿವೃದ್ಧಿಗೂ ಜನಸಾಮಾನ್ಯರಿಗೂ ಯಾವ ಸಂಬಂಧವೂ ಇಲ್ಲ ಎನ್ನುವುದನ್ನು ಇದು ಹೇಳುತ್ತದೆ. ಒಂದೆಡೆ ಮದ್ಯದ ವಿರುದ್ಧ ಆಂದೋಲನಕ್ಕಾಗಿಯೇ ಸಾಕಷ್ಟು ಹಣವನ್ನು ಸರಕಾರ ವ್ಯಯ ಮಾಡುತ್ತದೆ. ಮದ್ಯದಿಂದ ಆರೋಗ್ಯ ಮಾತ್ರವಲ್ಲದೆ ಮನೆ, ಬದುಕು ಕಳೆದುಕೊಂಡ ಸಾವಿರಾರು ಜನರ ಹೊರೆ ನಮ್ಮ ಸರಕಾರದ ಮೇಲೆಯೇ ಬೀಳುತ್ತದೆ. ಆದರೂ ಮತ್ತೊಂದೆಡೆ, ಇಷ್ಟು ಪ್ರಮಾಣದಲ್ಲಿ ಮದ್ಯ ಮಾರಾಟವಾಗಲೇ ಬೇಕು ಎಂದು ಅಬಕಾರಿ ಇಲಾಖೆ ಗುರಿಯನ್ನು ವಿಧಿಸುತ್ತದೆ. ‘ಅಭಿವೃದ್ಧಿ ಕೆಲಸ’ ನಡೆಯಬೇಕಾದರೆ ಖಜಾನೆಯಲ್ಲಿ ಹಣವಿರಬೇಕು. ಸುಲಭವಾಗಿ ಖಜಾನೆ ತುಂಬಿಸುವ ಒಂದೇ ಒಂದು ದಾರಿಯೆಂದರೆ, ಮದ್ಯ ಮಾರಾಟ. ಜೂಜಿನ ವಿಷಯದಲ್ಲೂ ಸರಕಾರದ ನಿಲುವು ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಆನ್‌ಲೈನ್ ಜೂಜಿನ ವಿರುದ್ಧ ಮಾತನಾಡುತ್ತಿರುವ ಸರಕಾರ, ಆಫ್‌ಲೈನ್ ಜೂಜಿನ ವಿರುದ್ಧ ನೇರವಾಗಿ ಮಾತನಾಡುವುದು ಅಷ್ಟು ಸುಲಭವಿಲ್ಲ. ಯಾಕೆಂದರೆ ಜೂಜಾಟ, ಮದ್ಯ ಇವುಗಳು ಪರಸ್ಪರ ಒಂದನ್ನು ಬಿಟ್ಟು ಒಂದಿಲ್ಲ ಎನ್ನುವಂತಹ ಸಂಬಂಧವನ್ನು ಹೊಂದಿವೆ. ಇಂದಿನ ರಾಜಕಾರಣ ನಿಂತಿರುವುದೇ ಜೂಜು ಮತ್ತು ಮದ್ಯ ಮಾರಾಟದ ಹಣದಿಂದ.

ಹೀಗಿರುವಾಗ, ಸರಕಾರ ಸಂಪೂರ್ಣ ‘ಜೂಜು ಮುಕ್ತ ಕರ್ನಾಟಕ’ದ ಮಾತನಾಡುತ್ತಿದೆ ಎನ್ನುವುದು ಅನುಮಾನಕ್ಕೆ ಕಾರಣವಾಗುತ್ತದೆ. ಇಂತಹ ಘೋಷಣೆಗಳು ಮಟ್ಕಾ ದಂಧೆಯ ಮುಂಚೂಣಿಯಲ್ಲಿರುವವರಿಗೆ ನೀಡುವ ಸಂದೇಶವೂ ಆಗಿರುತ್ತದೆ. ಸರಕಾರ ಇಂತಹ ಘೋಷಣೆ ಮಾಡಿದಾಕ್ಷಣ, ಜೂಜನ್ನೇ ಉದ್ಯಮವಾಗಿಸಿಕೊಂಡವರು ಎಚ್ಚರಗೊಂಡು, ರಾಜಕಾರಣಿಗಳ ಹಿಂದೆ ಸೂಟ್‌ಕೇಸ್ ಹಿಡಿದುಕೊಂಡು ಅಲೆಯತೊಡಗುತ್ತಾರೆ. ತಮ್ಮ ತಮ್ಮ ಆರ್ಥಿಕ ಕೊರತೆಯನ್ನು ಸರಿದೂಗಿಸುವುದಕ್ಕಾಗಿ ಮಟ್ಕಾದಂಧೆಯ ಜನರಿಗೆ ಹೀಗೊಂದು ಬೆದರಿಕೆ ನೀಡಲಾಗಿದೆಯೇ? ಎಂಬ ಪ್ರಶ್ನೆ ತಕ್ಷಣ ಹುಟ್ಟುವುದು ಇದೇ ಕಾರಣಕ್ಕೆ. ಆನ್‌ಲೈನ್ ಜೂಜನ್ನು ಅದೆಷ್ಟು ತಡೆಗಟ್ಟಿದರೂ ಅದು ಬೇರೆ ಬೇರೆ ರೂಪದಲ್ಲಿ ಮತ್ತೆ ಜನರನ್ನು ಸುತ್ತಿಕೊಳ್ಳುತ್ತದೆ. ಆದರೆ ಪ್ರತ್ಯಕ್ಷವಾಗಿ ಈ ನಾಡಿನಲ್ಲೇ ಮೂರ್ತ ರೂಪದಲ್ಲಿರುವ ವಿವಿಧ ಜೂಜುಗಳನ್ನು ತಡೆಯುವುದು ಸರಕಾರಕ್ಕೆ ಕಷ್ಟವಾಗದು. ಈಗಾಗಲೇ ಇರುವ ಕಾನೂನನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೂ ಮಟ್ಕಾ ಮತ್ತು ಇನ್ನಿತರ ಜೂಜುಗಳನ್ನು ಭಾಗಶಃ ತಡೆಯಬಹುದು. ಆದರೆ ಸರಕಾರದ ಪರೋಕ್ಷ ಕುಮ್ಮಕ್ಕಿನ ಕಾರಣದಿಂದಲೇ ಈ ದಂಧೆ ಇನ್ನೂ ಅಸ್ತಿತ್ವದಲ್ಲಿದೆ.

ಈ ಹಿಂದೆ, ಒಂದಂಕಿ ಲಾಟರಿ ಸಾವಿರಾರು ಜನರ ಬದುಕನ್ನು ಬೀದಿಪಾಲಾಗಿಸಿತ್ತು.ಇಂತಹ ಲಾಟರಿಯನ್ನು ನಿಷೇಧ ಮಾಡುವ ಸಂದರ್ಭದಲ್ಲಿ ‘ಲಾಟರಿ ವ್ಯಾಪಾರಿಗಳು ಬೀದಿ ಪಾಲಾಗುತ್ತಾರೆ’ ಎಂಬ ನೆಪವನ್ನು ಕೆಲವರು ಮುಂದೊಡ್ಡಿದ್ದರು. ಜನರ ಬದುಕನ್ನು ಸರ್ವನಾಶ ಮಾಡುವ ಲಾಟರಿಯನ್ನು ‘ವ್ಯಾಪಾರ’ ಎಂದು ಕರೆಯುವುದೇ ತಪ್ಪು. ಲಾಟರಿ ಎನ್ನುವುದು ಅಪರಾಧವಾಗಿರುವುದರಿಂದ, ಅದನ್ನು ಅವಲಂಬಿಸಿದವರು ಅಪರಾಧಿಗಳೇ ಹೊರತು, ವ್ಯಾಪಾರಿಗಳಲ್ಲ. ಈ ನಿಟ್ಟಿನಲ್ಲಿ ಮದ್ಯ ಮಾರಾಟಗಾರರನ್ನು ಇದೇ ವರ್ಗಕ್ಕೆ ಸೇರಿಸಬಹುದು. ಮದ್ಯ ಎನ್ನುವುದು ಆಹಾರ ಪದಾರ್ಥವಲ್ಲ. ಅದು ಮನುಷ್ಯನ ವಿವೇಕವನ್ನು ಮಾತ್ರವಲ್ಲ ಆರೋಗ್ಯವನ್ನೂ ನಾಶ ಮಾಡುತ್ತದೆ. ದೇಶದಲ್ಲಿ ನಡೆಯುವ ಬಹುತೇಕ ಅಪರಾಧಗಳು ಮದ್ಯ ಸೇವನೆಯ ಪರಿಣಾಮದಿಂದಲೇ ನಡೆಯುತ್ತವೆ. ಮದ್ಯ ಸೇವಿಸಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಿಲ್ಲ, ವಿಧಾನಸಭೆಯ ಚರ್ಚೆಯಲ್ಲಿ ಭಾಗವಹಿಸುವಂತಿಲ್ಲ, ದೇವಸ್ಥಾನ, ಮಸೀದಿಯೊಳಗೆ ಪ್ರವೇಶವಿಲ್ಲ. ಹಾಗಾದರೆ ಮದ್ಯ ಸೇವಿಸಿ ಮಕ್ಕಳು, ಮಹಿಳೆಯರಿರುವ ಮನೆಯೊಳಗೆ ಪ್ರವೇಶಿಸುವುದು ಎಷ್ಟು ಸರಿ? ಹೀಗಿರುವಾಗ, ಮದ್ಯವನ್ನು ಸಾರ್ವಜನಿಕ ರಂಗದ ವ್ಯಾಪಾರದೊಳಗೆ ಸೇರಿಸುವುದರಲ್ಲಿ ಏನು ಅರ್ಥವಿದೆ? ಮದ್ಯ ಮಾರಾಟಗಾರರನ್ನು ಉದ್ಯಮಿಗಳು, ವ್ಯಾಪಾರಿಗಳು ಎಂದು ಕರೆಯುವುದು ಎಷ್ಟು ಸರಿ ಎನ್ನುವ ಪ್ರಶ್ನೆ ತಲೆಯೆತ್ತುತ್ತದೆ. ಎಲ್ಲ ಅಡೆತಡೆಗಳನ್ನು ಮೀರಿ ಕಟ್ಟಕಡೆಗೆ ಜನರ ಆಗ್ರಹದಂತೆ ಒಂದಂಕಿ ಲಾಟರಿಯನ್ನು ವ್ಯಾಪಾರದಿಂದ ಹೊರಗಿಡಲಾಯಿತು. ಇದೀಗ ಮದ್ಯವನ್ನು ಆಹಾರವರ್ಗದಿಂದ ಹಾಗೆಯೇ, ವ್ಯಾಪಾರದಿಂದ ಹೊರಗಿಡುವ ಸಮಯ ಬಂದಿದೆ. ಇದರ ಜೊತೆಗೇ ಉದ್ಯಮದ ಸೋಗಿನಲ್ಲಿ ಹಲವು ಜೂಜುಗಳು ಅಸ್ತಿತ್ವದಲ್ಲಿವೆ. ಜೂಜನ್ನು ಶ್ರೀಮಂತ ವರ್ಗ ಜೀವನ ಶೈಲಿಯಾಗಿ ರೂಪಿಸಿಕೊಂಡಿದೆ. ನಿಯಮಗಳು ಕೇವಲ ಬಡವರ್ಗಕ್ಕೆ ಮಾತ್ರ ಸೀಮಿತವಾಗದೆ, ಎಲ್ಲ ವರ್ಗದ ಜನರು ಆಡುವ ಜೂಜನ್ನು ತಡೆಯುವುದಕ್ಕೆ ಸರಕಾರ ಪ್ರಯತ್ನಿಸಬೇಕಾಗಿದೆ.

ಕೃಷಿಯೆನ್ನುವುದು ‘ಮಳೆಯ ಜೊತೆಗೆ ರೈತರು ಆಡುವ ಜೂಜಾಟ’ ಎಂದು ಕರೆಯುವ ಕಾಲವಿತ್ತು. ಅಂದರೆ ಮಳೆ ಬಂದರೆ ಮಾತ್ರ ಕೃಷಿ ಲಾಭದಾಯಕ. ಇಲ್ಲವಾದರೆ ನಷ್ಟ. ಈ ಜೂಜಾಟದಲ್ಲಿ ಬದುಕು ಕಳೆದುಕೊಂಡ ಲಕ್ಷಾಂತರ ರೈತರು ನಮ್ಮ ನಡುವೆ ಇದ್ದಾರೆ. ಮಾರುಕಟ್ಟೆಯ ಜೊತೆಗೂ ರೈತರು ಜೂಜಾಟ ಆಡುತ್ತಾರೆ. ಕೆಲವೊಮ್ಮೆ ಭಾರೀ ಪ್ರಮಾಣದಲ್ಲಿ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ದರ ಸಿಗದೇ ಇರುವುದರಿಂದ ಅವುಗಳನ್ನು ರಸ್ತೆಯಲ್ಲಿ ಚೆಲ್ಲಿ ಕಣ್ಣೀರು ಹಾಕಬೇಕಾದ ಸ್ಥಿತಿ ನಮ್ಮ ರೈತರದು. ಆದರೆ ಕಳೆದ ಎರಡು ವರ್ಷಗಳಿಂದ ರೈತರು ಮಾತ್ರವಲ್ಲ, ಈ ನಾಡಿನ ಲಕ್ಷಾಂತರ ಉದ್ಯಮಿಗಳು, ಯುವಕರು, ವಿದ್ಯಾರ್ಥಿಗಳು ‘ಲಾಕ್‌ಡೌನ್’ ಎಂಬ ಜೂಜಾಟಕ್ಕೆ ಬಲಿಯಾಗಿದ್ದಾರೆ. ಸರಕಾರ ಯಾವಾಗ ಲಾಕ್‌ಡೌನ್ ಘೋಷಣೆ ಮಾಡುತ್ತದೆ ಎನ್ನುವುದರ ಅರಿವಿಲ್ಲದೆ, ನಷ್ಟ ಅನುಭವಿಸುತ್ತಿದ್ದಾರೆ. ಮೊತ್ತ ಮೊದಲು ಸರಕಾರಿ ಪ್ರಾಯೋಜಿತ ಲಾಕ್‌ಡೌನ್ ಜೂಜಾಟದಿಂದ ಜನರಿಗೆ ಮುಕ್ತಿ ನೀಡಿ, ಅವರು ನಿಯತ್ತಾಗಿ ಸಾರ್ವಜನಿಕವಾಗಿ ತಮ್ಮ ವ್ಯಾಪಾರ, ಕೃಷಿಯನ್ನು ಮುನ್ನಡೆಸುವುದಕ್ಕೆ ಅವಕಾಶ ನೀಡಬೇಕು. ಇಲ್ಲದೇ ಇದ್ದರೆ ಅವರೆಲ್ಲರು ಮನೆಯೊಳಗೆ ಕುಳಿತು ಆನ್‌ಲೈನ್ ಜೂಜಾಟವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳುವ ಅಪಾಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News