ಮುಂಬೈ ಕನ್ನಡಕ್ಕೆ ಮುಸ್ಲಿಮರ ಕೊಡುಗೆ

Update: 2021-09-23 19:30 GMT

ತಾನು ಗಳಿಸಿದ ಒಂದು ಭಾಗವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ಎಂ.ಐ. ಕುಳವೂರು ತನ್ನ ಊರು ಕುಪ್ಪೆಪದವಿನಲ್ಲಿ 'ಕಾವೇರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ' ತೆರೆದು ಗ್ರಾಮಾಂತರದ ಮಕ್ಕಳಿಗೂ ಆಂಗ್ಲ ಶಿಕ್ಷಣ ಇಂದಿನ ಜರೂರು ಎಂದು ಅರ್ಥೈಸಿ ಕಾರ್ಯರೂಪಕ್ಕೆ ತಂದಿದ್ದಾರೆ. ಬಡ ಹೆಣ್ಣುಮಕ್ಕಳ ಮದುವೆ ವೆಚ್ಚವನ್ನೂ ಭರಿಸುವ ಎಂ.ಐ. ಕುಳವೂರು, ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಪ್ರತಿ ವರ್ಷ 125ರಿಂದ 130 ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಹೃದಯವೈಶಾಲ್ಯ ಹೊಂದಿದ್ದಾರೆ.


ಭಾಗ-2

ಅದು ಸುಮಾರು 1981-82ರ ಕಾಲಾವಧಿ. ಅಂತರ್‌ಶಾಲಾ ಪ್ರತಿಭಾ ಸ್ಪರ್ಧೆಗಳಲ್ಲಿ ಭಾವಗೀತೆಯಲ್ಲಿ ಬಹುಮಾನ ಪಡೆಯುತ್ತಿದ್ದ 'ಮದರ್ ಇಂಡಿಯಾ ರಾತ್ರಿ ಶಾಲೆ'ಯ ಪ್ರತಿಭಾನ್ವಿತ ಎಂಟನೇ ತರಗತಿ ವಿದ್ಯಾರ್ಥಿ ವಾಸು ಮೊಯ್ಲಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಪುಟ್ಟ ಪೋರ. ಆ ಬಾಲಕನ ಪ್ರತಿಭೆಯನ್ನು ಗಮನಿಸಿ ಪ್ರಥಮ ಬಾರಿಗೆ ಆಕಾಶವಾಣಿಗೆ ಆಹ್ವಾನಿಸಿ ಸಂದರ್ಶನ ಸಹಿತ ದಿನಕರ ದೇಸಾಯಿ ಅವರ 'ನನ್ನ ದೇಹದ ಬೂದಿ' ಭಾವಗೀತೆಯನ್ನು ಬಿತ್ತರಿಸಿದವರು ಬಿ.ಎ. ಸನದಿ. ಕರ್ನಾಟಕ ಸಂಘದ 60ರ ಸಂಭ್ರಮಾಚರಣೆ ಸಂದರ್ಭ (1994)ವಿವಿಧ ಯೋಜನೆಗಳು ಪ್ರಸ್ತಾಪಕ್ಕೆ ಬಂದಾಗ ಬಿ.ಎಸ್. ಕುರ್ಕಾಲರು ಈವರೆಗೆ ಒಂದು ಕೃತಿಯೂ ಬಾರದ ಕವಿಗಳ ಕವಿತೆಗಳನ್ನು ಸೇರಿಸಿ ಸಂಕಲನ ತರುವ ಪ್ರಸ್ತಾಪ ಇಟ್ಟಿದ್ದರು. ಆಗ ಹಿರಿಯ ಸಾಹಿತಿಯೋರ್ವರು ''ಏನು ಬರೆಯುತ್ತಾರೆ ಅವರು? ಬಿಡಿ'' ಎಂದು ಖಡಾಖಂಡಿತವಾಗಿ ನಿರಾಕರಿಸಿದಾಗ ಕುರ್ಕಾಲರ ಪ್ರಸ್ತಾಪವನ್ನು ಎತ್ತಿ ಹಿಡಿದು ಅದಕ್ಕೆ ಪೂರ್ಣ ಬೆಂಬಲವಿತ್ತು, ಅದನ್ನು ಕಾರ್ಯರೂಪಕ್ಕೆ ಬರಲು ಕಾರಣರಾದವರು ಬಿ.ಎ. ಸನದಿ. ಕವಿತೆಗಳ ಆಯ್ಕೆಯಿಂದ ತೊಡಗಿ 'ಅರವತ್ತು ಕವಿತೆಗಳು' ಸಂಕಲನಕ್ಕೆ 'ಪ್ರಸ್ತಾವನೆ' ರೂಪದಲ್ಲಿ ಬರೆಯುತ್ತಾ ''ಇಂದಿನ ಯುವ ಪ್ರತಿಭೆಗಳಿಗೆ ಅವಕಾಶ ಪ್ರೋತ್ಸಾಹ ಹಾಗೂ ಬೆಂಬಲ ನೀಡಿದರೆ ನಾಳಿನ ಸಾಹಿತ್ಯ -ಕಲಾ ಸಾಧನೆ ಸಮರ್ಥವಾಗಿ ನಡೆಯಲು ಅನುಕೂಲವಾದೀತು'' ಎಂದು ಕವಿಗಳ ಪರವಾಗಿ ನಿಂತಿದ್ದರು. ಆ ಸಂಕಲನದಲ್ಲಿ ತುಳಸಿ ವೇಣುಗೋಪಾಲ್, ಗಿರಿಜಾಶಾಸ್ತ್ರಿ, ಎ. ಎನ್. ಹೆಬ್ಬಾರ್, ಜೀವಿ ಶೆಟ್ಟಿಗಾರ್, ವಿಶ್ವೇಶ್ವರ ಮೇಟಿ, ವಿದ್ಯಾಧರ ಮುತಾಲಿಕ್ ದೇಸಾಯಿ, ಗೋಪಾಲ್ ತ್ರಾಸಿ, ಗಂಗಾಧರ ಪಣಿಯೂರು, ಶಿಮಂತೂರು ಚಂದ್ರಹಾಸ ಸುವರ್ಣ, ಜಿ.ಪಿ. ಕುಸುಮಾ, ಎಚ್ಕೆ ಕರ್ಕೇರ, ಜಿ.ವಿ. ಕಂಚುಗಾರ ಮೊದಲಾದ, ಮುಂದೆ ಸಾಹಿತ್ಯಲೋಕದಲ್ಲಿ ಗುರುತಿಸಲ್ಪಟ್ಟ ಕವಿಗಳ ಕವಿತೆಗಳು ಈ ಪ್ರಾತಿನಿಧಿಕ ಸಂಕಲನದಲ್ಲಿ ಸೇರಿಕೊಂಡಿವೆ. ಯುವಕಲಾವಿದರಿಗೆ, ಬರಹಗಾರರಿಗೆ ಸನದಿಯವರು ಸದಾ ನೀಡುತ್ತಿದ್ದ ಪ್ರೋತ್ಸಾಹಗಳಿಗೆ ಈ ಮೇಲಿನದ್ದು ಕೇವಲ ಉದಾಹರಣೆಯಷ್ಟೆ. ಅವರಿಗೆ ಸಾಹಿತ್ಯ ಮತ್ತು ಬದುಕು ಎಂದೂ ಬೇರೆ ಬೇರೆಯಾಗಿರಲಿಲ್ಲ. ಅದಕ್ಕಾಗಿಯೇ ಏನೋ ನಾಡುಕಂಡ ಶ್ರೇಷ್ಠ ಚಿಂತಕ ಗೌರೀಶ್ ಕಾಯ್ಕಿಣಿ ಅವರಿಂದ 'ಮಾನವೀಯ ಕವಿ'ಯೆಂದು ಕರೆಸಿಕೊಂಡಿರಬೇಕು.

ಬೆಳಗಾವಿ ಜಿಲ್ಲೆಯ ಸಿಂಧೋಳಿಯಲ್ಲಿ ಹುಟ್ಟಿ (1933 ಆಗಸ್ಟ್ 18) ಬಾಲ್ಯದ ಬದುಕನ್ನು ಅಲ್ಲಿಯೇ ಕಳೆದ ಬಾಬಾ ಸಾಹೇಬ ಅಹ್ಮದ್ ಸಾಹೇಬ ಸನದಿ, ಶಿಕ್ಷಣ ಇಲಾಖೆ, ವಾರ್ತಾ ಇಲಾಖೆ, ಆಕಾಶವಾಣಿಯೆಂದು ತಿರುಗಾಡಿದ ಊರುಗಳು ರಾಯಬಾಗ, ಕಲಬುರಗಿ, ಬೆಂಗಳೂರು, ಗುಜರಾತ್ ಕೊನೆಗೆ ಮುಂಬೈ. ಸನದಿಯವರು ಮಾತ್ರ ಬರೆಯಲು ಸಾಧ್ಯ ಅನಿಸುವ 'ಹಿಮಗಿರಿಯ ಮುಡಿಯಲ್ಲಿ', 'ಮಣ್ಣು', 'ಮನೆಮನೆಗೆ ಬೇಲಿ', 'ತಿರೆಯು ಬಂಜೆಯಲ್ಲ' ಎಂಬಿತ್ಯಾದಿ ಕವಿತೆಗಳನ್ನೊಳಗೊಂಡ ಹನ್ನೆರಡಕ್ಕೂ ಮೀರಿ ಕವಿತಾ ಸಂಕಲನ (ಸೂರ್ಯಪಾನ-ಸಮಗ್ರ), ನಾಟಕ, ಕಥಾಸಂಕಲನ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಮೊದಲಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ. ಸೈ ಎನಿಸಿಕೊಂಡಿದ್ದಾರೆ. ಸುಮಾರು ಇಪ್ಪತ್ತೇಳು ವರ್ಷಗಳ ಹಿಂದೆ 'ಗೋಕುಲವಾಣಿ'ಯಲ್ಲಿ ಡಾ.ವ್ಯಾಸರಾವ್ ನಿಂಜೂರು ಉಲ್ಲೇಖಿಸಿದ್ದ ಈ ಸಾಲುಗಳನ್ನು ಗಮನಿಸಿ: ''ಸನದಿಯವರ ಬಹುತೇಕ ಕವನಗಳಲ್ಲಿ ಮನುಷ್ಯನಿರ್ಮಿತ ಸಂಕುಚಿತ ಸೀಮೆಗಳನ್ನು ಮೀರಿ ನಿಲ್ಲುವ ವಿಶ್ವಮಾನವತೆಯ ಮಿಡಿತವಿರುವುದನ್ನು ಯಾರಾದರೂ ಗಮನಿಸಬಹುದು. ಅಂತೆಯೇ ಅವರ ಕವನಗಳಿಗೆ ಭಾರತೀಯ ಜ್ಞಾನಪೀಠ ಸಮಿತಿಯ 'ಕವಿತಾಯೆಂ' (1986) ಪ್ರಾತಿನಿಧಿಕ ಸಂಕಲನದಲ್ಲೂ, ಅಮೆರಿಕದ ಪೋಯೆಟ್ಸ್ ಗಿಲ್ಡರ್‌ನವರು ಪ್ರಕಟಿಸಿದ 'ಬೆಸ್ಟ್ ನ್ಯೂ ಪೋಯಮ್ಸ್' (1996) ಆಂಥಾಲಜಿಯಲ್ಲಿ ಪ್ರಾತಿನಿಧ್ಯ ದೊರೆತದ್ದು ಮುಂಬೈ ಕನ್ನಡಿಗರಿಗೆ ಅಭಿಮಾನದ ಸಂಗತಿಯಾಗಿದೆ'' ಈ ಮಾತುಗಳಿಂದ ಸನದಿ ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯದಲ್ಲಿ ಅವರು ಏರಿರುವ ಎತ್ತರವನ್ನು ನಾವು ಗುರುತಿಸಬಹುದು.

ಮುಂಬೈಯ ಹೆಚ್ಚಿನ ಸಂಘ-ಸಂಸ್ಥೆಗಳ ಜೊತೆ ನಿಕಟ ಸಂಬಂಧ ಇರಿಸಿಕೊಂಡಿದ್ದ ಬಿ.ಎ. ಸನದಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿಕಟವರ್ತಿಯಾಗಿದ್ದು ಸೂಕ್ತ ಸಲಹೆ ಮಾರ್ಗದರ್ಶನ ನೀಡುತ್ತಿದ್ದರು. ಕರ್ನಾಟಕ ಸಂಘದ ಪದಾಧಿಕಾರಿ, ಕಾರ್ಯಾಧ್ಯಕ್ಷರಾಗಿದ್ದು ಸಂಘ ಜನರ ಹತ್ತಿರಕ್ಕೆ ಹೋಗಬೇಕೆಂದು ಬಹಳಷ್ಟು ಶ್ರಮಪಟ್ಟಿದ್ದಾರೆ. ರಾಜ್ಯೋತ್ಸವ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಪಂಪ ಪ್ರಶಸ್ತಿ, ಗುರುನಾರಾಯಣ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪಡೆದಿರುವ ಬಿ.ಎ. ಸನದಿಯವರು ನಿವೃತ್ತಿ ಬದುಕನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಕಳೆದಿದ್ದರು. ಸುದೀರ್ಘ ಕಾಲ ಮುಂಬೈ ನೆಲದ ನಂಟನ್ನು ಹೊಂದಿದ್ದು ಕನ್ನಡದ ತೇರನ್ನು ಎಳೆದ ಸನದಿ ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ ಹೊಂದಿದ್ದವರು.

ಹದಿನಾರರ ಹರೆಯದಲ್ಲೇ ಮುಂಬಾಪುರಿಗೆ ಆಗಮಿಸಿ ಇಲ್ಲಿ ಹೊಟೇಲ್‌ನಲ್ಲಿ ಗ್ಲಾಸ್ ತೊಳೆಯುತ್ತಾ ಪ್ರಾಮಾಣಿಕತೆಯಿಂದ, ಪರಿಶ್ರಮದಿಂದ ಮೇಲೆ ಬಂದು ಹೊಟೇಲ್ ಉದ್ಯಮ, ಕಟ್ಟಡ ನಿರ್ಮಾಣ ಇತ್ಯಾದಿಗಳಲ್ಲಿ ತೊಡಗಿಸಿಕೊಂಡ ಎಂ.ಐ. ಕುಳವೂರು (ಮುಹಮ್ಮದ್ ಇಬ್ರಾಹೀಂ ಕುಳವೂರು) ಓರ್ವ ಅಪರೂಪದ ಸಾಧಕ. ತಾನು ಗಳಿಸಿದ ಒಂದು ಭಾಗವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ಕುಳವೂರು ತನ್ನ ಊರು ಕುಪ್ಪೆಪದವಿನಲ್ಲಿ 'ಕಾವೇರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ' ತೆರೆದು ಗ್ರಾಮಾಂತರದ ಮಕ್ಕಳಿಗೂ ಆಂಗ್ಲ ಶಿಕ್ಷಣ ಇಂದಿನ ಜರೂರು ಎಂದು ಅರ್ಥೈಸಿ ಕಾರ್ಯರೂಪಕ್ಕೆ ತಂದಿದ್ದಾರೆ. ಬಡ ಹೆಣ್ಣುಮಕ್ಕಳ ಮದುವೆ ವೆಚ್ಚವನ್ನೂ ಭರಿಸುವ ಎಂ.ಐ. ಕುಳವೂರು, ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಪ್ರತಿ ವರ್ಷ 125ರಿಂದ 130 ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಹೃದಯವೈಶಾಲ್ಯ ಹೊಂದಿದ್ದಾರೆ. ಊರಿನ ಸಂಘ ಸಂಸ್ಥೆಗಳನ್ನು ಆಹ್ವಾನಿಸಿ ಶಾಲೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳುವಲ್ಲಿ ನೆರವಾಗುವ ಎಂ.ಐ. ಕುಳವೂರು ಶಾಲೆಯ ಕಾರ್ಯಾಧ್ಯಕ್ಷರಾಗಿದ್ದಾರೆ. ಮಾನವೀಯ ಅಂತಃಕರಣವುಳ್ಳ ಕುಳವೂರು ಕೊರೋನ ಸಂದರ್ಭ ವಿದ್ಯಾರ್ಥಿ ಹಾಗೂ ಶಿಕ್ಷಕ ವರ್ಗದವರಿಗೆ ಸಹಾಯಹಸ್ತ ನೀಡಿದ ಬಗ್ಗೆ ಅಭಿಮಾನದಿಂದ ಶಾಲೆಯ ಪ್ರಾಂಶುಪಾಲರಾದ ಶಾಲೆಟ್‌ವಾಸ್ ಕೃತಜ್ಞತಾಪೂರ್ವಕವಾಗಿ ನೆನೆಯುತ್ತಾರೆ.

ಕಾನೂನು ಪಾಲನೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಪೊಲೀಸ್ ಇಲಾಖೆ ಅಂದರೆ ಕುಳವೂರು ಅವರಿಗೆ ಆದರ, ಅಭಿಮಾನ. ಊರಿನಿಂದ ಯಾರಾದರೂ ಆಗಮಿಸಿದರೆ ತಮ್ಮಲ್ಲಿ ಉಳಿದುಕೊಳ್ಳುವ ವ್ಯವಸ್ಥೆ, ಜತೆಗೆ ಇಲ್ಲಿ ಅತ್ತಿತ್ತ ಸಂಚರಿಸಲು ತಮ್ಮದೇ ವಾಹನವನ್ನು ನೀಡುತ್ತಿರುವ ಇವರದ್ದು ಆದರ್ಶದ ಬದುಕು. ಕೃಷಿ ಪ್ರಿಯರಾದ ಇವರು ತಮ್ಮ ಊರಿನಲ್ಲಿ ಇಂದಿಗೂ ನಿರಂತರ ಕೃಷಿಗೆ ಪ್ರೋತ್ಸಾಹ ನೀಡುತ್ತಾ ಹಿರಿಯರ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ.

ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ವಿಜಯಪುರದಿಂದ ಮುಂಬೈಗಾಗಮಿಸಿದ್ದ ಅಸ್ಮತ್ ಹಿಪ್ಪರಗಿ ಅವರದ್ದು ಸಂಘರ್ಷಪೂರ್ಣ ಬದುಕು. ಬಾಗಲಕೋಟೆ ಬಸವೇಶ್ವರ ಕಾಲೇಜಿನಲ್ಲಿ ಬಿಕಾಂ, ವಿಜಯಪುರದ ಅಂಜುಮಾನ್ ಇಸ್ಲಾಮಿಕ್ ಎಲ್‌ಎಲ್‌ಬಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಮುಂಬೈಗೆ ಆಗಮಿಸಿ ಕಳೆದ ಇಪ್ಪತ್ತೈದು ವರ್ಷಗಳಿಂದ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

1986ರಲ್ಲಿ ಕುಪ್ಪೆಪದವಿನಲ್ಲಿ ಕುಳವೂರಿನಿಂದ ಮುಂಬೈಗೆ ಆಗಮಿಸಿ ಹೊಟೇಲ್, ಪಾನ್‌ಶಾಪ್ ಎಂದು ಬದುಕನ್ನು ಕಟ್ಟಿಕೊಂಡ ಸುಲೈಮಾನ್, ಕುಳವೂರು ಸಾಂಘಿಕ ಚಟುವಟಿಕೆಗಳಲ್ಲಿ ಎತ್ತಿದ ಕೈ. ಕನ್ನಡ ಸೇವಾ ಸಂಘ, ಪೊವಾಯಿ ಇದರ ಅಧ್ಯಕ್ಷರೂ ಆಗಿದ್ದ ಕುಳವೂರು ಇಲ್ಲಿನ ರಾಜಕೀಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಸದ್ದಿಲ್ಲದೆ ಜನಸೇವೆ ಮಾಡುತ್ತಿದ್ದಾರೆ. ಚಾಂದ್‌ವಿಲಿ ವಿಧಾನಸಭಾ ಕ್ಷೇತ್ರದ (ಬ್ಲಾಕ್ ನಂ. 156) ಅಧ್ಯಕ್ಷರಾಗಿರುವ ಇವರು ಕಾಂಗ್ರೆಸ್ ಪಕ್ಷದಲ್ಲಿ ಕ್ರಿಯಾಶೀಲರಾಗಿದ್ದಾರೆ. ತಮ್ಮದೇ ಆದ 'ಗುರುಕುಲ ಪ್ರಕಾಶನ'ವನ್ನು ಹುಟ್ಟು ಹಾಕಿರುವ ಸುಲೈಮಾನ್ ಎಂ. ಕುಳವೂರು ಅದರ ಮೂಲಕ ಹತ್ತು ಹಲವು ಕೃತಿಗಳು ಬೆಳಕಿಗೆ ಬರುವಂತೆ ಮಾಡಿದ್ದಾರೆ. ಓರ್ವ ರಂಗನಟನಾಗಿಯೂ ಗುರುತಿಸಿಕೊಂಡಿರುವ ಇವರು ನಾಗರಾಜ್ ಗುರುಪುರ ಅವರ ಹಲವಾರು ನಾಟಕಗಳಲ್ಲಿ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಯಂಗ್ ಮೆನ್ಸ್ ರಾತ್ರಿ ಶಾಲೆಯಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಲೆಕ್ಕದ ಮೇಷ್ಟ್ರು ಆಗಿದ್ದ ಎಂ. ಬ್ಯಾರಿಯವರನ್ನು ಅಂದಿನ (70-80ರ ದಶಕದ) ವಿದ್ಯಾರ್ಥಿಗಳು ಇಂದಿಗೂ ನೆನೆಯುತ್ತಾರೆ. ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಎಂ. ಬ್ಯಾರಿ ಬ್ಯಾಂಕ್ ಒಂದರಲ್ಲಿ ಉನ್ನತ ಅಧಿಕಾರಿಯಾಗಿದ್ದರು. ಉಪನಗರ ಡೊಂಬಿವಿಲಿ ನಿವಾಸಿ ಆಗಿದ್ದ ಇವರ ಶಿಸ್ತುಬದ್ಧ ಜೀವನ ಕ್ರಮವನ್ನು ಹಾಗೂ ಅವರೋರ್ವ ಆದರ್ಶ ಶಿಕ್ಷಕರಾಗಿದ್ದುದನ್ನು ಸನತ್ ಕುಮಾರ್ ಜೈನ್‌ರಂತಹ ಆದರ್ಶ ಶಿಕ್ಷಕರು ಇಂದೂ ನೆನೆಯುತ್ತಾರೆ.

''ಬೊಂಬಾಯಿ ಊಟ ಕೊಡುವ ತಾಯಿ. ಇಲ್ಲಿ ಒಂದು ದಿನ ಅಸೌಖ್ಯ ಬಿದ್ದರೆ ಅದನ್ನು ಕೇಳಿ ಜಾತಿ, ಮತ ಮರೆತು ಕಷ್ಟಸುಖ ವಿಚಾರಿಸಲು ಮನೆಗೆ ಬರುತ್ತಾರೆ. ನಾನು ಕಿರಾಣಿ ಅಂಗಡಿಯಲ್ಲಿ ಒಬ್ಬನೇ ಇದ್ದಾಗ ಗಿರಾಕಿಗಳು ಹೆಚ್ಚಿದ್ದರೆ ನನ್ನ ನೆರವಿಗೆ ಇದೇ ಗಿರಾಕಿಗಳು ಸಹಾಯ ಮಾಡುತ್ತಾರೆ'' ಎಂದು 1984ರಲ್ಲಿ ಮುಂಬೈಗೆ ಬಂದು ಚೆಂಬೂರ್‌ನಲ್ಲಿ ನೆಲೆ ಕಂಡಿರುವ ಉಮರ್ ಅಹ್ಮದ್ (ಉಮರ್ ಅಬೂಬಕರ್ ಶಾಫಿ) ತುಂಬು ಮನಸ್ಸಿನಿಂದ ಪ್ರತಿಕ್ರಿಯಿಸುವ ರೀತಿ ಆಪ್ಯಾಯಮಾನ. ಕೆ.ಜಿ.ಎನ್. ಹಾಗೂ ಬದ್ರಿಯಾ ಸ್ಟೋರ್‌ಗಳನ್ನು ಅವರು ನಡೆಸುತ್ತಿದ್ದಾರೆ. ''ಎಳೆಯ ಪ್ರಾಯದಲ್ಲೇ ತಂದೆ ತೀರಿಕೊಂಡು ನಮ್ಮ ಸಂಸಾರ ದಿಕ್ಕು ಕಾಣದ ಸಂದರ್ಭ ನನ್ನನ್ನು ಮುಂಬೈಗೆ ಬರುವಂತೆ ಮಾಡಿದವರು ಐಡಿಯಲ್ ಬಸ್ಸಿನಲ್ಲಿದ್ದ ಓರ್ವ ಶೆಟ್ಟಿ ಡ್ರೈವರ್. ನನ್ನಿಂದ ಒಂದು ನಯಾಪೈಸೆ ಕೇಳದೆ ಪುಣೆಯ ಹೊಟೇಲೊಂದರಲ್ಲಿ ಕೆಲಸಕ್ಕೆ ಸೇರಿಸಿದರು. 'ಇಲ್ಲಿ ಚೆನ್ನಾಗಿ ಹಿಂದಿ ಕಲಿತು ಮತ್ತೆ ಮುಂಬೈಗೆ ಹೋಗು' ಎಂದರು'' ಎಂದು ತನ್ನ ಅಂದಿನ ದಿನಗಳನ್ನು ಬಿಚ್ಚಿಡುವ ಮೊಂಟಪದವು ಮಂಜನಾಡಿಯ ಉಮರ್ ಅಹ್ಮದ್ ಅಂದಿನ ಸೌಹಾರ್ದ ಸಮಾಜದ ಚಿತ್ರಣ ನಮಗೆ ಕಟ್ಟಿಕೊಡುತ್ತಾರೆ.

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News