​ಅಕ್ಷರ ಭಯೋತ್ಪಾದಕರಿಗೇಕಿಲ್ಲ ಶಿಕ್ಷೆ?

Update: 2021-09-24 05:47 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಈ ದೇಶದಲ್ಲಿ ನಿಜವಾದ ‘ಭಯೋತ್ಪಾದಕ’ರಿಗಿಂತ, ಪೊಲೀಸರು ಮತ್ತು ಮಾಧ್ಯಮಗಳು ಸೃಷ್ಟಿಸಿದ ಭಯೋತ್ಪಾದಕರ ಸಂಖ್ಯೆಯೇ ದೊಡ್ಡ ಪ್ರಮಾಣದಲ್ಲಿದೆ. ಪೊಲೀಸರಿಂದ ಸೃಷ್ಟಿಸಲ್ಪಟ್ಟ ಭಯೋತ್ಪಾದಕರಿಗೆ ಕನಿಷ್ಠ ನ್ಯಾಯಾಲಯದ ಮೂಲಕ ನಿರಪರಾಧಿಗಳೆಂದು ಘೋಷಿಸಲ್ಪಡುವ ಅವಕಾಶವಿದೆ. ಆದರೆ ಮಾಧ್ಯಮಗಳಿಂದ ಸೃಷ್ಟಿಸಲ್ಪಟ್ಟ ಭಯೋತ್ಪಾದಕರಿಗೆ ಆ ಭಾಗ್ಯವೂ ಇಲ್ಲ. ಮಾಧ್ಯಮಗಳು ಕರುಣಿಸಿದ ಭಯೋತ್ಪಾದಕ ಪಟ್ಟವನ್ನು ಬದುಕಿನುದ್ದಕ್ಕೂ ಹೊತ್ತುಕೊಂಡು ಅವರು ಸಮಾಜದಲ್ಲಿ ಬಾಳಬೇಕು. ಅಮಾಯಕರನ್ನು ಭಯೋತ್ಪಾದಕರೆಂದು ಬಂಧಿಸಿ ಜೈಲಿಗೆ ತಳ್ಳುವ ಪೊಲೀಸರ ವಿರುದ್ಧ ಕಾನೂನು ಹೋರಾಟವನ್ನಾದರೂ ಮಾಡಬಹುದು. ಆದರೆ ‘ಅಭಿವ್ಯಕ್ತಿ ಸ್ವಾತಂತ್ರ’ದ ಮರೆಯಲ್ಲಿ ಅಕ್ಷರ ಭಯೋತ್ಪಾದನೆಗಿಳಿಯುವ ಪತ್ರಕರ್ತರ ವಿರುದ್ಧ ಈ ಹೋರಾಟವೂ ಅಸಾಧ್ಯವೆನ್ನುವಂತಹ ಸ್ಥಿತಿಯಿದೆ.

ಒಂದು ಪ್ರಶ್ನಾರ್ಥಕ ಚಿಹ್ನೆಯ ಮರೆಯಲ್ಲಿ ಅಥವಾ ಯಾವುದೋ ‘ಮೂಲ’ವ್ಯಾಧಿ ರೋಗವನ್ನು ಮುಂದಿಟ್ಟುಕೊಂಡು ತಾನು ಬಚಾವಾಗಬಲ್ಲೆ ಎನ್ನುವಂತಹ ಅತಿ ಆತ್ಮವಿಶ್ವಾಸ ಕೆಲವು ವರದಿಗಾರರಲ್ಲಿದೆ. ಈ ವರದಿಗಾರರ ಅಕ್ಷರ ಭಯೋತ್ಪಾದನೆಯ ಬಗೆಗಿನ ಮಾಹಿತಿ ಪ್ರಧಾನ ಸಂಪಾದಕರು ಅಥವಾ ಪತ್ರಿಕೆಯ ಮಾಲಕರ ಗಮನಕ್ಕೂ ಬರದೇ ಇರುವ ಕಾರಣದಿಂದಲೂ ಪತ್ರಿಕೆಯಲ್ಲಿ ತನ್ನ ಮೂಗಿನ ನೇರಕ್ಕೆ ಏನನ್ನೂ ಬರೆದು ಬಚಾವಾಗಬಲ್ಲೆ ಎನ್ನುವ ದುರಹಂಕಾರ ಕೆಲವೊಮ್ಮೆ ಹಲವು ಅಮಾಯಕರನ್ನು ‘ಉಗ್ರಗಾಮಿ’ಗಳಾಗಿ ಕಟಕಟೆಯಲ್ಲಿ ನಿಲ್ಲಿಸುತ್ತದೆ. ಮಂಗಳೂರಿನ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಎಂಬಲ್ಲಿ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ರಫೀಕ್ ಖಾನ್ ಎಂಬ ಉತ್ತರ ಭಾರತದ ಕಾರ್ಮಿಕನೊಬ್ಬ ಪತ್ರಕರ್ತರ ಬೇಜವಾಬ್ದಾರಿ, ಪೂರ್ವಾಗ್ರಹ ಪೀಡಿತ ಮನಸ್ಥಿತಿಯ ಕಾರಣದಿಂದ ಉಗ್ರನ ಪಟ್ಟವನ್ನು ಪಡೆದುಕೊಂಡ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಕೆಲವು ದಿನಗಳಿಂದ ನಾಪತ್ತೆಯಾಗಿದ್ದಾನೆ ಎನ್ನುವ ಅಂಶವನ್ನೇ ಮುಂದಿಟ್ಟುಕೊಂಡು, ‘ಈತನನ್ನು ಉಗ್ರಗಾಮಿ ಚಟುವಟಿಕೆಗಳಿಗಾಗಿ ಉತ್ತರಭಾರತದಲ್ಲಿ ಬಂಧಿಸಲಾಗಿದೆ.

ಹಲವು ಸಮಯಗಳಿಂದ ಈತ ಉಪ್ಪಿನಂಗಡಿಯಲ್ಲಿ ತಲೆಮರೆಸಿಕೊಂಡಿದ್ದ’ ಎಂಬಿತ್ಯಾದಿ ಸುಳ್ಳುಗಳನ್ನು ‘ಸುದ್ದಿ’ಯ ರೂಪದಲ್ಲಿ ಪತ್ರಿಕೆಗಳು ಪ್ರಕಟಿಸಿದ್ದವು. ದಸರಾ ಸಂದರ್ಭದಲ್ಲಿ ಸ್ಫೋಟ ನಡೆಸಲೂ ಈತ ಸಂಚು ನಡೆಸಿದ್ದ ಎಂದು ಬರೆದು ಸ್ಥಳೀಯರಲ್ಲಿ ಈ ಪತ್ರಿಕೆಗಳು ಆತಂಕವನ್ನು ಸೃಷ್ಟಿಸಿದ್ದವು. ಈ ವರದಿಯ ಹಿಂದೆ ಹತ್ತು ಹಲವು ಅಜೆಂಡಾಗಳನ್ನು ನಾವು ಶಂಕಿಸಬಹುದು. ಕಾರ್ಮಿಕ ನಿರ್ದಿಷ್ಟ ಸಮುದಾಯಕ್ಕೆ ಸೇರಿದವನಾಗಿರುವುದರಿಂದ, ಆ ಸಮುದಾಯದ ಕುರಿತಂತೆ ಸ್ಥಳೀಯರಲ್ಲಿ ಶಂಕೆಗಳನ್ನು ಬಿತ್ತುವುದು ಮೊದಲ ಉದ್ದೇಶ. ಎರಡನೆಯದಾಗಿ, ಉತ್ತರ ಭಾರತದ ನಿರ್ದಿಷ್ಟ ಸಮುದಾಯದ ಕಾರ್ಮಿಕರ ಕುರಿತಂತೆ ಅಪನಂಬಿಕೆಗಳನ್ನು ಬಿತ್ತುವುದು ಪತ್ರಿಕೆಗಳ ಒಳಗಿರುವವರ ಗುರಿಯಾಗಿತ್ತು. ಹಾಗೆಯೇ ಸ್ಥಳೀಯ ಜನರಲ್ಲಿ ಪರಸ್ಪರ ಅಪನಂಬಿಕೆಗಳನ್ನು ಬಿತ್ತಿ ಸೌಹಾರ್ದವನ್ನು ಕೆಡಿಸುವುದು ಅವರ ಉದ್ದೇಶಗಳಲ್ಲಿ ಒಂದಾಗಿತ್ತು. ಆದರೆ ಪೊಲೀಸ್ ಇಲಾಖೆ ಸೂಕ್ತ ಸಮಯದಲ್ಲಿ ಮಧ್ಯ ಪ್ರವೇಶಿಸಿದ ಕಾರಣದಿಂದಾಗಿ ಪತ್ರಕರ್ತರ ಸೋಗಿನ ಅಕ್ಷರ ಭಯೋತ್ಪಾದಕರ ಸಂಚು ವಿಫಲವಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ‘ಉಗ್ರ ವರದಿ’ಯ ಬಗ್ಗೆ ಸ್ಪಷ್ಟನೆ ನೀಡಿದ್ದು ‘‘ಉಪ್ಪಿನಂಗಡಿಯ ಗ್ಯಾರೇಜ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಫೀಕ್ ಖಾನ್‌ನನ್ನು ಯಾರೂ ಬಂಧಿಸಿಲ್ಲ. ಆತ ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ’ ಎಂದು ತಿಳಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯ ಸ್ಪಷ್ಟೀಕರಣದ ಜೊತೆಗೆ ಎಲ್ಲವೂ ಮುಗಿದು ಬಿಡುತ್ತದೆ. ಆದರೆ ಒಬ್ಬ ಅಮಾಯಕನ ತಲೆಗೆ ಉಗ್ರಗಾಮಿ ಪಟ್ಟ ಕಟ್ಟುವ ಅಧಿಕಾರ ಮಾಧ್ಯಮಗಳಲ್ಲಿ ಕೆಲಸ ಮಾಡುವ ಒಬ್ಬ ಯಕಶ್ಚಿತ್ ವರದಿಗಾರ ಅಥವಾ ಉಪಸಂಪಾದಕ ಅಥವಾ ಸಂಪಾದಕನಿಗಿದೆಯೇ? ಮಾಧ್ಯಮಗಳಲ್ಲಿ ಮುಖಪುಟದಲ್ಲಿ ಪ್ರಕಟವಾಗುವ ‘ಉಗ್ರ ವರದಿ’ಗೆ ಸಿಕ್ಕಿದ ಆದ್ಯತೆ, ಪೊಲೀಸ್ ವರಿಷ್ಠಾಧಿಕಾರಿಯ ಸ್ಪಷ್ಟೀಕರಣಕ್ಕೆ ಸಿಗದೇ ಇರುವುದರಿಂದ, ಆ ಅಮಾಯಕ ಜೀವಮಾನ ಪೂರ್ತಿ ಸಮಾಜದಲ್ಲಿ ಉಗ್ರಗಾಮಿಯಾಗಿಯೇ ಬದುಕಬೇಕಾಗುತ್ತದೆ. ಮತ್ತೆ ಆತ ಊರಿಗೆ ಮರಳಿ, ತನ್ನ ಕೆಲಸವನ್ನು ಎಂದಿನಂತೆ ನಿರ್ವಹಿಸುವುದು ಕಷ್ಟವಾಗಬಹುದು. ಯಾವುದೇ ಸರಕಾರಿ ಕಚೇರಿ ಅಥವಾ ಸಾರ್ವಜನಿಕ ಕಚೇರಿಗಳ ಸಿಬ್ಬಂದಿ ತಮ್ಮ ಕೆಲಸದಲ್ಲಿ ತಪ್ಪು ಮಾಡಿದರೆ ಅವರಿಗೆ ಶಿಕ್ಷೆಯನ್ನು ವಿಧಿಸಲಾಗುತ,್ತದೆ. ಒಬ್ಬ ಪೊಲೀಸ್ ಅಧಿಕಾರಿ ಅಮಾಯಕನ ಮೇಲೆ ದೌರ್ಜನ್ಯವೆಸಗಿರುವುದು ಮೇಲಧಿಕಾರಿಗಳ ಗಮನಕ್ಕೆ ಬಂದರೆ ಆತನನ್ನು ಅಮಾನತುಗೊಳಿಸಲಾಗುತ್ತದೆ. ಅಷ್ಟೇ ಅಲ್ಲ, ಅವನನ್ನು ಕಟಕಟೆಗೂ ಎಳೆಯಬಹುದು. ಇದೇ ಸಂದರ್ಭದಲ್ಲಿ ಒಬ್ಬ ಅಮಾಯಕನ ತಲೆಗೆ ಉಗ್ರಗಾಮಿಯ ಪಟ್ಟ ಕಟ್ಟಿದ್ದ ಸಿಬ್ಬಂದಿಗೆ ಅಥವಾ ಪತ್ರಿಕೆಗೆ ಯಾಕೆ ಶಿಕ್ಷೆಯಿಲ್ಲ? ಮಕ್ಕಾ ಮಸೀದಿ, ಅಜ್ಮೀರ್ ಸ್ಫೋಟದಲ್ಲಿ ಬಂಧಿತರಾಗಿದ್ದ ಅಮಾಯಕರನ್ನು ನ್ಯಾಯಾಲಯ ಬಿಡುಗಡೆ ಮಾಡುವ ಸಂದರ್ಭದಲ್ಲಿ ‘ಅಮಾಯಕರಿಗೆ ಪರಿಹಾರವನ್ನು ನೀಡಲು’ ನ್ಯಾಯಾಲಯ ಸರಕಾರಕ್ಕೆ ಸೂಚನೆ ನೀಡಿತ್ತು. ಆದರೆ ಪತ್ರಿಕೆಗಳಿಂದ ಉಗ್ರನೆಂಬ ಕಳಂಕಹೊತ್ತ ಅಮಾಯಕನಿಗೆ ನ್ಯಾಯವನ್ನು ನೀಡುವವರು ಯಾರು?

 ಪತ್ರಿಕೆಗಳಿಗೆ ನೀತಿ ಸಂಹಿತೆಯನ್ನು ವಿಧಿಸಲು ಈಗಾಗಲೇ ಸರಕಾರ ತುದಿಗಾಲಲ್ಲಿ ನಿಂತಿದೆ. ‘ಪತ್ರಿಕಾ ಸ್ವಾತಂತ್ರದ ದುರುಪಯೋಗ’ದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿಲ್ಲ. ತನ್ನ ವಿರುದ್ಧ ಮಾತನಾಡುವ ಪತ್ರಿಕೆಗಳಿಗೆ ಮೂಗುದಾರ ಹಾಕಲು ‘ದುರುಪಯೋಗ’ವನ್ನು ನೆಪವಾಗಿ ಬಳಸಿಕೊಳ್ಳುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರವೆಂದರೆ ಅಕ್ಷರಗಳ ಮೂಲಕ ಯಾರ ಮೇಲೂ ದೌರ್ಜನ್ಯವೆಸಗುವ ಅಧಿಕಾರ ಎಂದು ಭಾವಿಸಿದರೆ, ಅದು ತಪ್ಪು. ಯಾವುದೇ ಅಧಿಕೃತ ಮಾಹಿತಿಗಳಿಲ್ಲದೆ, ಮೂಲಗಳಿಲ್ಲದೆ, ಸಾಕ್ಷಗಳಿಲ್ಲದೆ ಒಬ್ಬನನ್ನು ಉಗ್ರನೆಂದು ಕರೆದೂ ತಾನು ಬಚಾವಾಗಬಹುದು ಎಂಬ ಧೈರ್ಯದಿಂದಲೇ ವರದಿಗಾರ ಇಂದು ತನ್ನ ಸ್ವಾತಂತ್ರವನ್ನು ಬೇಕಾಬಿಟ್ಟಿಯಾಗಿ ಬಳಸುತ್ತಿದ್ದಾನೆ. ಇಂಥವರಿಗೆ ಮೂಗುದಾರ ಹಾಕುವ ಕೆಲಸ ಪತ್ರಿಕೆಯೊಳಗಿಂದಲೇ ನಡೆಯಬೇಕು. ಪತ್ರಿಕೆ ಎಲ್ಲಿಯವರೆಗೆ ತನಗೆ ತಾನೇ ನೀತಿ ಸಂಹಿತೆಯನ್ನು ವಿಧಿಸಿಕೊಳ್ಳುವುದಿಲ್ಲವೋ, ಆಗ ಸಹಜವಾಗಿಯೇ ಇನ್ನೊಬ್ಬರ ಕೈಯಿಂದ ಮೂಗುದಾರವನ್ನು ಹಾಕಿಸಿಕೊಳ್ಳುತ್ತದೆ.

ಈ ಹಿನ್ನೆಲೆಯಲ್ಲಿ, ಬರೇ ವದಂತಿಗಳ ಆಧಾರದ ಮೇಲೆ ವರದಿಗಳನ್ನು ಮಾಡುವ ಪತ್ರಿಕರ್ತನ ವಿರುದ್ಧ ಆಯಾ ಪತ್ರಿಕೆಯ ಮುಖ್ಯಸ್ಥರು ಕಠಿಣವಾಗಿ ಕ್ರಮ ತೆಗೆದುಕೊಳ್ಳುವ ಮತ್ತು ಅಂತಹ ವರದಿಗಳನ್ನು ಪ್ರಕಟಿಸಿದ ಕಾರಣಕ್ಕಾಗಿ ಬಹಿರಂಗವಾಗಿ ಕ್ಷಮೆಯಾಚಿಸುವ ಪ್ರವೃತ್ತಿಯೊಂದು ಪತ್ರಿಕಾರಂಗದಲ್ಲಿ ಆರಂಭವಾಗಬೇಕು. ಹಾಗೆಯೇ, ಇಂತಹ ಪ್ರಮಾದಗಳು ಸಂಭವಿಸಿದಾಗ, ಪತ್ರಿಕಾ ಮಂಡಳಿಯು ಸ್ವಯಂ ನೋಟಿಸ್ ಜಾರಿ ಮಾಡುವ ಹಾಗೆಯೇ, ಈ ಬಗ್ಗೆ ದೂರುಗಳು ಬಂದರೆ ಅದನ್ನು ಕೂಲಂಕಷವಾಗಿ ತನಿಖೆ ನಡೆಯುವ ಪರಂಪರೆಯೊಂದು ಆರಂಭವಾಗಬೇಕು. ಹೇಗೆ ಸಮಾಜದಲ್ಲಿ ಗಲಭೆಗಳು, ಹಿಂಸಾಚಾರಗಳು ನಡೆದಾಗ ಸರಕಾರ ತನಿಖಾ ತಂಡವನ್ನು ನೇಮಿಸುತ್ತದೆಯೋ, ಹಾಗೆಯೇ ಸಮಾಜದಲ್ಲಿ ಗಲಭೆ, ಅಪನಂಬಿಕೆಗಳನ್ನು ಬಿತ್ತುವ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರಕಟವಾದರೆ, ಆ ಸುದ್ದಿ ಪ್ರಕಟವಾದುದರ ಹಿಂದಿರುವ ಕಾಣದ ಶಕ್ತಿ ಯಾವುದು ಎನ್ನುವುದನ್ನು ಬಯಲಿಗೆಳೆಯಲು ಪತ್ರಿಕಾ ಮಂಡಳಿಯೇ ತನಿಖಾ ತಂಡವನ್ನು ನೇಮಕ ಮಾಡಿ ವರದಿಯನ್ನು ತರಿಸಿಕೊಳ್ಳಬೇಕು. ಆ ವರದಿಯ ಆಧಾರದಲ್ಲಿ ಪತ್ರಿಕೆಯ ಮೇಲೆ, ವರದಿಗಾರನ ಮೇಲೆ ಕಾನೂನಿನಡಿ ಕ್ರಮ ತೆಗೆದುಕೊಳ್ಳುವುದಕ್ಕೆ ಸೂಚನೆ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲ ಮಾಧ್ಯಮ ಒಂದಾಗಿ ನಿಂತರೆ ಮಾತ್ರ, ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಪತ್ರಕರ್ತ ಉಳಿಸಿಕೊಳ್ಳುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News