ದಾಖಲೆ ಲಸಿಕೀಕರಣ ಮಾಡಿ ಮೋದಿ ಬರ್ತ್‌ ಡೇಗೆ ಅಪ್ಲೋಡ್‌ ಮಾಡಲು ಅಗಾಧ ಒತ್ತಡವಿತ್ತು !

Update: 2021-09-24 12:49 GMT

ಹೊಸದಿಲ್ಲಿ,ಸೆ.24: ಭಾರತದಲ್ಲಿ ಸೆ.17 ಬೃಹತ್ ಲಸಿಕೀಕರಣದ ದಿನವಾಗಿತ್ತು. ಅದೊಂದೇ ದಿನ 2.5 ಕೋ.ಡೋಸ್ ಲಸಿಕೆ ವಿತರಣೆಯನ್ನು ದೇಶವು ದಾಖಲಿಸಿದೆ. ಬೃಹತ್ ಪ್ರಮಾಣದಲ್ಲಿ ಲಸಿಕೆ ನೀಡಿರುವುದನ್ನು ಸಿಕ್ಕಾಪಟ್ಟೆ ಹೊಗಳಿರುವ ಬಿಜೆಪಿ ನಾಯಕರು,ಇದು ಅಂದು ಹುಟ್ಟುಹಬ್ಬವನ್ನು ಆಚರಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿತ್ತು ಎಂದು ಬಣ್ಣಿಸಿದ್ದಾರೆ.

ಈ ‘ಬೃಹತ್ ಸಾಧನೆ’ಯಲ್ಲಿ ರಾಜ್ಯಗಳ ಪೈಕಿ ಬಿಹಾರವು ಅಗ್ರಸ್ಥಾನದಲ್ಲಿದೆ. ಸೆ.17ರ ಮಧ್ಯರಾತ್ರಿಯವರೆಗೆ 33,98,685 ಡೋಸ್ ಕೋವಿಡ್ ಲಸಿಕೆ ನೀಡಿಕೆಯನ್ನು ದಾಖಲಿಸುವ ಮೂಲಕ ಅದು ಬಿಜೆಪಿಯ ಆಡಳಿತವಿರುವ ಕರ್ನಾಟಕ,ಉತ್ತರ ಪ್ರದೇಶ,ಮಧ್ಯಪ್ರದೇಶ ಮತ್ತು ಗುಜರಾತ್ ಗಳನ್ನು ಹಿಂದಿಕ್ಕಿದೆ. ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಸಮ್ಮಿಶ್ರ ಸರಕಾರವಿದೆ.

ಬಿಹಾರದಲ್ಲಿ ಯಾವುದೇ ದಿನ ಸರಾಸರಿ 2,000 ಲಸಿಕೆ ಕೇಂದ್ರಗಳು ಕಾರ್ಯಾಚರಿಸುತ್ತವೆ. ಆದರೆ ಸೆ.17ರಂದು ಇಂತಹ ಕೇಂದ್ರಗಳ ಸಂಖ್ಯೆ 14,483ಕ್ಕೆ ಏರಿಕೆಯಾಗಿತ್ತು. ಫಲಾನುಭವಿಗಳಿಗೆ ಲಸಿಕೆ ನೀಡಲು ಮತ್ತು ಡಾಟಾವನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲು 50,000ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು.

ಬಿಹಾರದ ಈ ಬೃಹತ್ ಯಶಸ್ಸಿನ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ರಂಗಕ್ಕಿಳಿದಿದ್ದ ಸುದ್ದಿ ಜಾಲತಾಣ ‘Scroll.in’ ಗೆ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ಸಿ)ಗಳ ಅಧಿಕಾರಿಗಳು ಮತ್ತು ಡಾಟಾ ಎಂಟ್ರಿ ಆಪರೇಟರ್ಗಳು ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಈ ಸಾಧನೆಗಾಗಿ ತಮ್ಮ ಮೇಲೆ ಭಯಂಕರ ಒತ್ತಡವಿತ್ತು ಎಂದು ಅವರು ಹೇಳಿದ್ದಾರೆ. 

ಸೆ.17ರಂದು ದೊಡ್ಡ ಪ್ರಮಾಣದಲ್ಲಿ ಲಸಿಕೀಕರಣವನ್ನು ಅವರು ನಡೆಸಿದ್ದರೂ,ಅಂದು ಅಪ್ಲೋಡ್ ಆಗಿದ್ದ ಡಾಟಾದ ಗಣನೀಯ ಭಾಗವು ವಾಸ್ತವದಲ್ಲಿ ಹಿಂದಿನೆರಡು ದಿನಗಳಲ್ಲಿ ‘ಆಫ್ಲೈನ್’ನಲ್ಲಿ ಲಸಿಕೆ ಪಡೆದುಕೊಂಡಿದ್ದ ಜನರದ್ದಾಗಿತ್ತು ಎಂದು ಹೆಸರು ಹೇಳಿಕೊಳ್ಳಲು ಬಯಸದ ಅಧಿಕಾರಿಗಳು ತಿಳಿಸಿದ್ದಾರೆ.


 
ಲಸಿಕೆ ಕೇಂದ್ರದಲ್ಲಿ ಅಥವಾ ಶಿಬಿರದಲ್ಲಿ ಫಲಾನುಭವಿಗಳ ವಿವರಗಳನ್ನು ಸರಕಾರದ ಕೋವಿನ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡದೆ ಭೌತಿಕವಾಗಿ ಬರೆದುಕೊಂಡು ಅವರಿಗೆ ಲಸಿಕೆ ನೀಡುವುದನ್ನು ‘ಆಫ್ಲೈನ್ ’ಲಸಿಕೀಕರಣ ಎಂದು ಕರೆಯಲಾಗುತ್ತದೆ. ಲಸಿಕೆಗಳನ್ನು ನೀಡುವ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ಡಾಟಾವನ್ನು ಪೋರ್ಟಲ್ ಗೆ ಅಪಲೋಡ್ ಮಾಡುವುದು ‘ಆನ್ಲೈನ್’ ಲಸಿಕೀಕರಣ ಎಂದು ಕರೆಯಲ್ಪಡುತ್ತದೆ. ಹಿಂದಿನ ಡಾಟಾವನ್ನು ಸೆ.17ರಂದು ಕೋವಿನ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಿದಾಗ ಅದು ಲಸಿಕೆಯನ್ನು ಅಂದೇ ನೀಡಲಾಗಿದೆ ಎಂದು ತೋರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಸೆ.16ರಂದು ಮಾಮೂಲು ಲಸಿಕೆ ನೀಡಿಕೆ ಪ್ರಕ್ರಿಯೆ ನಡೆಯುತ್ತಿದ್ದರೂ ಬಿಹಾರದಲ್ಲಿ ನಗಣ್ಯ ಸಂಖ್ಯೆಯಲ್ಲಿ ಲಸಿಕೆಯ ವಯಲ್ ಗಳು ಬಳಕೆಯಾಗಿದ್ದನ್ನು ಪೋರ್ಟಲ್ ತೋರಿಸುತ್ತಿದ್ದನ್ನು ಕಂಡು ತನಗೆ ಅಚ್ಚರಿಯಾಗಿತ್ತು ಎಂದು ಲಸಿಕೆ ಡೋಸ್ ಗಳ ಬಳಕೆ ಮತ್ತು ಪೂರೈಕೆ ಸರಪಳಿಯ ಸ್ಥಿತಿಗತಿಯನ್ನು ದಾಖಲಿಸುವ ‘ಇಲೆಕ್ಟ್ರಾನಿಕ್ ವ್ಯಾಕ್ಸಿನ್ ಇಂಟೆಲಿಜನ್ಸ್ ನೆಟ್ವರ್ಕ್’ನ ಮೇಲೆ ನಿಗಾಯಿಡುವ ಜವಾಬ್ದಾರಿಯನ್ನು ಹೊತ್ತಿರುವ ಅಧಿಕಾರಿಯೋರ್ವರು ತಿಳಿಸಿದರು. ತಾನು ಈ ಬಗ್ಗೆ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಿಸಿದಾಗ, ಲಸಿಕೆ ನೀಡಿಕೆ ಪ್ರಕ್ರಿಯೆ ಆಫ್ಲೈನ್ ನಲ್ಲಿ ನಡೆಯುತ್ತಿದೆ ಮತ್ತು ಡಾಟಾವನ್ನು ಸೆ.17ರಂದು ಅಪ್ಲೋಡ್ ಮಾಡುವಂತೆ ತಮಗೆ ನಿರ್ದೇಶವಿದೆ ಎಂದು ಅವರು ತಿಳಿಸಿದ್ದರು ಎಂದರು.


 
ಬಿಹಾರದಲ್ಲಿ ಸೆ.16ರಂದು 1,333 ಲಸಿಕೆ ಕೇಂದ್ರಗಳು ಕಾರ್ಯಾಚರಿಸಿದ್ದರೂ,ಕೇವಲ 86,253 ಡೋಸ್ಗಳ ನೀಡಿಕೆ ಕೋವಿನ್ನಲ್ಲಿ ದಾಖಲಾಗಿತ್ತು. ಸೆ.15ರಂದು ಕೇವಲ 1,45,583 ಡೋಸ್ ಗಳ ನೀಡಿಕೆಯು ಕೋವಿನ್ ನಲ್ಲಿ ಅಪ್ಲೋಡ್ ಆಗಿತ್ತು. ಇದಕ್ಕೂ ಹಿಂದಿನ ವಾರ ಬಿಹಾರದಲ್ಲಿ ಪ್ರತಿದಿನ ಸರಾಸರಿ 5.5 ಲ.ಡೋಸ್ ಲಸಿಕೆಯನ್ನು ನೀಡಲಾಗಿತ್ತು.
 
ಎಷ್ಟೊಂದು ವ್ಯವಸ್ಥಿತವಾಗಿ ಈ ಕಣ್ಕಟ್ಟನ್ನು ನಡೆಸಲಾಗಿತ್ತು ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ; ದರ್ಭಾಂಗಾ ಮತ್ತು ಸಹರ್ಸಾ ಜಿಲ್ಲೆಗಳ ಸ್ಥಳೀಯ ಆರೋಗ್ಯಾಧಿಕಾರಿಗಳು ತಿಳಿಸಿರುವಂತೆ ಸೆ.16ರಂದು ಲಸಿಕೆ ನೀಡಿಕೆಯ ಸಗಟು ಡಾಟಾವನ್ನು ಕೋವಿನ್ ಪೋರ್ಟಲ್ ಗೆ ಅಪ್ಲೋಡ್ ಮಾಡುವುದನ್ನು ತಡೆಹಿಡಿಯುವಂತೆ ಅವರಿಗೆ ಜಿಲ್ಲಾಧಿಕಾರಿಗಳ ನಿರ್ದೇಶವಿತ್ತು. ದರ್ಭಾಂಗಾ ಜಿಲ್ಲೆಯು ಸೆ.16ರಂದು ಕೇವಲ 752 ಡೋಸ್ ಲಸಿಕೆ ನೀಡಿಕೆಯನ್ನು ಅಧಿಕೃತವಾಗಿ ಅಪ್ಲೋಡ್ ಮಾಡಿತ್ತು. ಲಸಿಕೆ ಅಭಿಯಾನದ ಉಸ್ತುವಾರಿ ಹೊಂದಿರುವ ಜಿಲ್ಲಾ ಸಿವಿಲ್ ಸರ್ಜನ್ ಡಾ.ಅನಿಲ್ ಕುಮಾರ್ ಅವರು ಸೆ.16ರಂದು ತಮ್ಮ ಬಳಿ ಕಡಿಮೆ ಲಸಿಕೆ ದಾಸ್ತಾನಿತ್ತು. ‌

ಅಂದು ಒಂದೇ ಕೇಂದ್ರದಲ್ಲಿ 752 ಜನರಿಗೆ ಲಸಿಕೆ ನೀಡಲಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ, ಆದರೆ ದರ್ಭಾಂಗಾ ಜಿಲ್ಲೆಯಲ್ಲಿನ 13 ಪಿಎಚ್ಸಿಗಳಲ್ಲೊಂದಾಗಿರುವ ಸದರ್ ಪಿಎಚ್ಸಿಯೊಂದರಲ್ಲೇ ಅಂದು ಸುಮಾರು 3,000 ಡೋಸ್ ಲಸಿಕೆಯನ್ನು ನೀಡಲಾಗಿತ್ತು. ಇದಿಷ್ಟೂ ಡಾಟಾವನ್ನು ಸೆ.17ರಂದು ಅಪ್ಲೋಡ್ ಮಾಡಲಾಗಿತ್ತು ಎಂದು ಸ್ಥಳೀಯ ಅಧಿಕಾರಿಯೋರ್ವರು ತಿಳಿಸಿದರು. ಸೆ.17ರಂದು ಅಂದು ನೀಡಲಾಗಿದ್ದ 8,000 ಡೋಸ್ ಗಳು ಸೇರಿದಂತೆ ಒಟ್ಟು ಸುಮಾರು 11,000 ಡೋಸ್ ಲಸಿಕೆ ನೀಡಿಕೆಯ ಡಾಟಾವನ್ನು ಕೋವಿನ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು! ಡಾ.ಕುಮಾರ್ ಸೆ.16ರಂದು ಒಂದೇ ಕೇಂದ್ರದಲ್ಲಿ ಲಸಿಕೆ ನೀಡಲಾಗಿತ್ತು ಎಂದು ಹೇಳಿಕೊಂಡಿದ್ದರೂ ಅದೇ ದಿನ ತಾವು ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ನಡೆಸಿದ್ದನ್ನು ದರ್ಭಾಂಗಾದ ಜಿಲ್ಲೆಯ ಹಲವಾರು ಕೇಂದ್ರಗಳ ಅಧಿಕಾರಿಗಳು ‘Scroll.in ’ಗೆ ತಿಳಿಸಿದ್ದಾರೆ.

ಸಹರ್ಸಾ,ಲಕ್ಷ್ಮಿಸರಾಯ್ ಸೇರಿದಂತೆ ರಾಜ್ಯದ ಇತರ ಹಲವಾರು ಜಿಲ್ಲೆಗಳಲ್ಲಿಯೂ ಹಿಂದಿನೆರಡು ದಿನಗಳ ಲಸಿಕೆ ನೀಡಿಕೆ ಡಾಟಾವನ್ನು ಸೆ.17ರಂದು ಕೋವಿನ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿದ್ದನ್ನು ‘Scroll.in’ ತನಿಖಾ ವರದಿಯು ಬಯಲಿಗೆಳೆದಿದೆ.
12.4 ಕೋ.ಜನಸಂಖ್ಯೆಯನ್ನು ಹೊಂದಿರುವ ಬಿಹಾರದಲ್ಲಿ ಈವರೆಗೆ 4.19 ಕೋ.ಜನರಿಗೆ ಒಂದು ಡೋಸ್ ಮತ್ತು 98.62 ಲಕ್ಷ ಜನರಿಗೆ ಎರಡೂ ಡೋಸ್ ಗಳನ್ನು ನೀಡಲಾಗಿದೆ. 

ಅದು ದೇಶದಲ್ಲಿ ಕಳಪೆ ಸಾಧನೆ ಪ್ರದರ್ಶಿಸಿರುವ ಐದು ರಾಜ್ಯಗಳಲ್ಲಿ ಒಂದಾಗಿದೆ. ಸೆ.17ರ ಮುನ್ನ ಒಂದೇ ದಿನದಲ್ಲಿ ಅತ್ಯಂತ ಹೆಚ್ಚಿನ ಲಸಿಕೆ ನೀಡಿಕೆ ಆ.31ರಂದು ದಾಖಲಾಗಿತ್ತು. ಅಂದು 27.57 ಲ.ಡೋಸ್ ಲಸಿಕೆಯನ್ನು ವಿತರಿಸಲಾಗಿತ್ತು. ಪ್ರಧಾನಿಯವರ ಜನ್ಮದಿನದ ಅಂಗವಾಗಿ ಸೆ.17ರಂದು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ನೀಡಿಕೆಯನ್ನು ದಾಖಲಿಸುವಂತೆ ತಮ್ಮ ಮೇಲೆ ಅಗಾಧ ಒತ್ತಡವಿತ್ತು ಎಂದು ಡಾಟಾ ಎಂಟ್ರಿ ಆಪರೇಟರ್ ಗಳು ತಿಳಿಸಿದ್ದಾರೆ. ಅಂದು ಹೆಚ್ಚುವರಿ ಕೆಲಸಕ್ಕಾಗಿ ಈ ಆಪರೇಟರ್ ಗಳಿಗೆ 150 ರೂ.ಗಳ ಪ್ರೋತ್ಸಾಹ ಧನವನ್ನೂ ನೀಡಲಾಗಿತ್ತು.

ಸೆ.17ರಂದು ದೇಶಾದ್ಯಂತ ಪ್ರತಿ ನಿಮಿಷಕ್ಕೆ 40,000ಕ್ಕೂ ಅಧಿಕ ಡೋಸ್ ಲಸಿಕೆ ನೀಡಿಕೆಯ ಡಾಟಾ ಅಪ್ಲೋಡ್ ಆಗುತ್ತಿತ್ತು. ಮಧ್ಯಾಹ್ನದ ವೇಳೆಗೆ ಇದು ಒಂದು ಕೋಟಿಯನ್ನು ದಾಟಿತ್ತು. ಅಂದು ಒಟ್ಟು 2.5 ಕೋ.ಡೋಸ್ ಲಸಿಕೆ ನೀಡಿಕೆ ದಾಖಲಾಗಿದೆ.

ಕೃಪೆ: Scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News