ಬ್ರಿಟನ್: ಚಾಲಕರ ಕೊರತೆ; ತೈಲೋತ್ಪನ್ನಗಳ ಸಾಗಾಟಕ್ಕೆ ಅಡ್ಡಿ

Update: 2021-09-24 16:46 GMT

ಲಂಡನ್, ಸೆ.24: ಬ್ರಿಟನ್ನಲ್ಲಿ ಲಾರಿ ಚಾಲಕರ ಕೊರತೆಯಿಂದ ತೈಲೋತ್ಪನ್ನಗಳ ಸಾಗಾಟಕ್ಕೆ ಅಡ್ಡಿಯಾಗಿದ್ದು ಕೆಲವು ಪೆಟ್ರೋಲ್ ಬಂಕ್ಗಳು ಬಾಗಿಲು ಮುಚ್ಚಿವೆ. ಇದರಿಂದ ಜನತೆ ಪೆಟ್ರೋಲ್ ಕೊರತೆಯ ಸಮಸ್ಯೆ ಉದ್ಭವಿಸಿದೆ ಎಂದು ಆತಂಕಿತರಾಗಿ ಪೆಟ್ರೋಲ್ ದಾಸ್ತಾನಿಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

 ದೇಶದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆಯಿಲ್ಲ. ಪರಿಸ್ಥಿತಿ ಸಹಜವಾಗಿದೆ. ಜನತೆ ಆತಂಕಗೊಳ್ಳಬಾರದು ಎಂದು ಬ್ರಿಟನ್ ಸರಕಾರ ಶುಕ್ರವಾರ ಜನತೆಗೆ ಭರವಸೆ ನೀಡಿದೆ. ಕೊರೋನ ಸಾಂಕ್ರಾಮಿಕ ಮತ್ತು ವೇತನ ಸಮಸ್ಯೆಯಿಂದಾಗಿ ಬ್ರಿಟನ್ನ ಹಲವು ಚಾಲಕರು ತಮ್ಮ ವೃತ್ತಿಯನ್ನು ಬದಲಾಯಿಸಿದ್ದಾರೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

 ಜನತೆ ಈ ಹಿಂದಿನಂತೆಯೇ ತೈಲಗಳನ್ನು ಖರೀದಿಸಬಹುದು. ದೇಶದಲ್ಲಿ ತೈಲೋತ್ಪನ್ನಗಳ ಕೊರತೆಯಿಲ್ಲ ಎಂದು ಪ್ರಧಾನಿ ಬೋರಿಸ್ ಜಾನ್ಸನ್ರ ಕಚೇರಿ ಜನತೆಯನ್ನು ಆಗ್ರಹಿಸಿದೆ. ಬ್ರಿಟನ್ನ ಟ್ಯಾಬ್ಲೋಯ್ಡೋ ಸುದ್ಧಿಪತ್ರಿಕೆ ‘ದಿ ಸನ್’ನ ಮುಖಪುಟದಲ್ಲಿ ಪ್ರಕಟವಾದ ‘ನಮ್ಮ ತೈಲ ಸಂಗ್ರಹ ಖಾಲಿಯಾಗುತ್ತಿದೆ’ ಎಂಬ ಶೀರ್ಷಿಕೆಯ ವರದಿ ಜನತೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿತು. ಬಿಪಿ ಮತ್ತು ಎಕ್ಸಾನ್ಮೊಬಿಲ್ ಮಾಲಕತ್ವದ ಎಸ್ಸೊ ಸಂಸ್ಥೆ ನಿರ್ವಹಿಸುತ್ತಿರುವ 1,200 ಸರ್ವಿಸ್ ಸ್ಟೇಷನ್ಗಳಲ್ಲಿ ಕನಿಷ್ಟ 50 ಸ್ಟೇಷನ್ಗಳು ತೈಲದ ಕೊರತೆಯಿಂದ ಬಾಗಿಲು ಮುಚ್ಚಿವೆ ಎಂದು ಪತ್ರಿಕೆ ವರದಿ ಮಾಡಿದೆ.

 ಇದಕ್ಕೆ ಪ್ರತಿಕ್ರಿಯಿಸಿರುವ ಬ್ರಿಟನ್ ಸಾರಿಗೆ ಸಚಿವ ಗ್ರ್ಯಾಂಟ್ ಶ್ಯಾಪ್, ತೈಲೋತ್ಪನ್ನಗಳ ಕೊರತೆಯಿಲ್ಲ, ಚಾಲಕರ ಕೊರತೆಯಿದೆ. ಸಾಕಷ್ಟು ಸಂಖ್ಯೆಯ ಚಾಲಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
  ಆಕಾಶ ಅಥವಾ ಪಾತಾಳಕ್ಕೆ ತೆರಳಿಯಾದರೂ ಲಾರಿಗಳು ಸಂಚಾರ ಆರಂಭಿಸಿ ದೇಶದಾದ್ಯಂತ ಪೆಟ್ರೋಲ್ ಹಾಗೂ ತೈಲಗಳನ್ನು ಸಾಗಿಸಲು ಅಗತ್ಯವಿರುವ ಚಾಲಕರನ್ನು ಗುರುತಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು. ಬ್ರಿಟನ್ನಲ್ಲಿ ನಿವಾಸಿ ಸ್ಥಾನಮಾನ ಹೊಂದಿರುವ ಮತ್ತು ಲಾರಿ ಚಾಲಕರ ಲೈಸೆನ್ಸ್ ಪಡೆದಿರುವ ಯುರೋಪಿಯನ್ ಯೂನಿಯನ್ ಪ್ರಜೆಗಳನ್ನು ಕೆಲಸ ಮುಂದುವರಿಸುವಂತೆ ಮನವೊಲಿಸಲಾಗುವುದು ಎಂದು ಸಚಿವರು ಹೇಳಿರುವುದಾಗಿ ಬಿಬಿಸಿ ರೇಡಿಯೋ ವರದಿ ಮಾಡಿದೆ.
    ಲಾರಿ ಚಾಲಕರನ್ನು ಉದ್ಯಮಗಳ ವಿಶೇಷ ಪಟ್ಟಿಯಲ್ಲಿ ಸೇರಿಸಬೇಕೆಂಬ ಉದ್ಯಮಗಳ ಆಗ್ರಹವನ್ನು ಟೀಕಿಸಿದ ಅವರು, ಇದರಿಂದ ಇಯು(ಯುರೋಪಿಯನ್ ಯೂನಿಯನ್) ದೇಶಗಳ ಚಾಲಕರು ಉದ್ಯೋಗ ವೀಸಾ ಪಡೆಯಲು ಸುಲಭವಾಗಿದೆ. ಇಂತಹ ಚಾಲಕರು ಕಡಿಮೆ ಸಂಬಳಕ್ಕೆ ದುಡಿಯಲು ಮುಂದೆ ಬಂದಿರುವದರಿಂದ ಬ್ರಿಟನ್ನ ಚಾಲಕರು ತಮ್ಮ ವೃತ್ತಿಗೆ ತಿಲಾಂಜಲಿ ನೀಡಿ ಬೇರೆ ಉದ್ಯೋಗ ಅರಸಿದ್ದಾರೆ. ಈಗ ಕೊರೋನ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯುರೋಪಿಯನ್ ದೇಶಗಳ ಚಾಲಕರೂ ಸ್ವದೇಶಕ್ಕೆ ಹಿಂದಿರುಗಿರುವುದರಿಂದ ನಮ್ಮಲ್ಲಿ ಈ ಸಮಸ್ಯೆಯಾಗಿದೆ ಎಂದವರು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News