ಹಿಮಪಾತ: ರಶ್ಯದ 5 ಪರ್ವತಾರೋಹಿಗಳ ಮೃತ್ಯು‌

Update: 2021-09-24 16:52 GMT

ಸಾಂದರ್ಭಿಕ ಚಿತ್ರ

ಮಾಸ್ಕೊ, ಸೆ.24: ಯುರೋಪ್ ನ ಅತ್ಯಂತ ಎತ್ತರದ ಎಲ್ಬ್ರಸ್ ಪರ್ವತದಲ್ಲಿ ಸಂಭವಿಸಿದ ಭಾರೀ ಹಿಮಪಾತಕ್ಕೆ ಸಿಲುಕಿದ ರಶ್ಯಾದ 5 ಪರ್ವತಾರೋಹಿಗಳು ಮೃತಪಟ್ಟಿರುವುದಾಗಿ ರಶ್ಯಾದ ವಿಪತ್ತು ಮತ್ತು ತುರ್ತು ಪರಿಸ್ಥಿತಿ ನಿರ್ವಹಣಾ ಇಲಾಖೆ ಶುಕ್ರವಾರ ಹೇಳಿದೆ. ಸುಮಾರು 18,510 ಅಡಿ ಎತ್ತರವಿರುವ , ರಶ್ಯದ ನಾರ್ತ್ ಕೌಕಾಸಸ್ ಪ್ರದೇಶದಲ್ಲಿರುವ ಎಲ್ಬ್ರಸ್ ಪರ್ವತವನ್ನು ಏರಲು 19 ಮಂದಿಯಿದ್ದ ಪರ್ವತಾರೋಹಿಗಳ ಗುಂಪು ಮುಂದಾಗಿದ್ದು ಸುಮಾರು 16,000 ಅಡಿ ಎತ್ತರ ಏರಲು ಸಫಲವಾಗಿತ್ತು. ಈ ತಂಡದ ಮಾರ್ಗದರ್ಶಕರಾಗಿ 4 ವೃತ್ತಿಪರ ಗೈಡ್ಗಳಿದ್ದರು. ಪರ್ವತ ಏರುವ ಸಂದರ್ಭ ಮಹಿಳಾ ಸದಸ್ಯೆಯೊಬ್ಬರು ಅಸ್ವಸ್ಥರಾದ ಕಾರಣ ಗೈಡ್ನ ಜತೆ ಮೂಲ ಶಿಬಿರದತ್ತ ವಾಪಸಾಗುತ್ತಿದ್ದಾಗ ಮೃತಪಟ್ಟರು. ಉಳಿದವರು ಪರ್ವತಾರೋಹಣ ಕಾರ್ಯ ಮುಂದುವರಿಸಿದಾಗ ಹಠಾತ್ತನೆ ಮೇಲಿಂದ ಭಾರೀ ಹಿಮಪಾತ ಸಂಭವಿಸಿದ್ದು ಹಿಮರಾಶಿಯಡಿ ಸಿಲುಕಿದ ಇಬ್ಬರು ಆರೋಹಿಗಳು ಮೃತಪಟ್ಟರೆ, ಗಾಯಗೊಂಡಿದ್ದ ಇತರ ಇಬ್ಬರು ಬಳಿಕ ಮೃತಪಟ್ಟರು ಎಂದು ತಿಳಿದು ಬಂದಿದೆ. 

ಓರ್ವ ಆರೋಹಿಯ ಕಾಲು ಮುರಿದಿದೆ. ಬಳಿಕ ರಕ್ಷಣಾ ಕಾರ್ಯಾಚರಣೆಯ ತಂಡದ ನೆರವಿನಿಂದ 14 ಮಂದಿಯನ್ನು ಅಪಾಯದಿಂದ ರಕ್ಷಿಸಲಾಗಿದ್ದು, ಭಾರೀ ಗಾಳಿ ಹಾಗೂ ಮಂದ ಬೆಳಕಿನ ನಡುವೆಯೂ ಅವರನ್ನು ಮೂಲ ಶಿಬಿರಕ್ಕೆ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News