ಚೀನಾ: ಮಕ್ಕಳ ಉಡುಪುಗಳ ಮೇಲೆ ಜನಾಂಗೀಯ ಹಿಂಸೆಗೆ ಪ್ರಚೋದನೆ ನೀಡುವ ಪದ ಬಳಕೆಗೆ ವ್ಯಾಪಕ ಆಕ್ರೋಶ

Update: 2021-09-24 16:55 GMT

ಬೀಜಿಂಗ್, ಸೆ.24: ಚೀನಾದಲ್ಲಿ ಮಕ್ಕಳ ಸಿದ್ಧ ಉಡುಪುಗಳ ಶ್ರೇಣಿಯೊಂದರ ಮೇಲಿನ ವಿನ್ಯಾಸ ಹಾಗೂ ಪದಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಸಂಸ್ಥೆ ಕ್ಷಮೆ ಯಾಚಿಸಿದೆ ಎಂದು ವರದಿಯಾಗಿದೆ.

ಜೆಎನ್ಬಿವೈ ರೂಪಿಸಿದ ವಿನ್ಯಾಸ ಮತ್ತು ಪದಗಳು ಜನಾಂಗೀಯ ಹಿಂಸೆಗೆ ಪ್ರಚೋದನೆ ನೀಡುವ ಜತೆಗೆ ಉತ್ತೇಜಕಗೊಳಿಸುವ ರೀತಿಯಲ್ಲಿವೆ ಎಂದು ಆಕ್ಷೇಪ ಕೇಳಿಬಂದಿತ್ತು. ಮಕ್ಕಳು ಉಡುವ ಬಟ್ಟೆಯ ಮೇಲೆ ‘ನಾನು ನಿನ್ನನ್ನು ಸ್ಪರ್ಶಿಸಲೇ’ ಎಂಬ ಪದಗಳಿವೆ. ಇನ್ನು ಕೆಲವು ಬಟ್ಟೆಗಳಲ್ಲಿ ‘ಇಡೀ ಪ್ರದೇಶವೇ ‘ಇಂಡಿಯನ್ಸ್’ಗಳಿಂದ ತುಂಬಿ ಹೋಗಿದೆ. ನಾನು ಈ ಬಂದೂಕು ಕೈಗೆತ್ತಿಕೊಂಡು ಅವರನ್ನು ಚಿಂದಿ ಉಡಾಯಿಸುತ್ತೇನೆ’ ಎಂಬ ಪದಗಳಿವೆ. ಇನ್ನು ಕೆಲವು ಬಟ್ಟೆಗಳಲ್ಲಿ ರಚಿಸಿರುವ ಕಾರ್ಟೂನ್ನಲ್ಲಿ ಒಬ್ಬ ಹುಡುಗನ ಮೇಲೆ ಹಲವು ಬಾಣಗಳು ಚುಚ್ಚಿಕೊಂಡಿರುವ ಚಿತ್ರಗಳಿವೆ. ಈ ಬಟ್ಟೆಗಳ ಸಂಗ್ರಹದ ಬಗ್ಗೆ ಚೀನಾದ ಜನಪ್ರಿಯ ಸಾಮಾಜಿಕ ಜಾಲತಾಣ ವೆಯಿಬೊದಲ್ಲಿ ಪ್ರಕಟವಾದ ಜಾಹೀರಾತು ಮತ್ತು ವಿವರಗಳು ವ್ಯಾಪಕ ಖಂಡನೆ ಮತ್ತು ಟೀಕೆಗೆ ಗ್ರಾಸವಾಗಿದೆ. ಈ ವಿನ್ಯಾಸಗಳು ಪ್ರಭಾವಿತರಾಗಬಲ್ಲ ಯುವಜನತೆಗೆ ಸೂಕ್ತವಲ್ಲ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ವ್ಯಾಪಕ ಟೀಕೆ, ಖಂಡನೆ ಬಳಿಕ ಈ ಉಡುಪುಗಳ ಶ್ರೇಣಿಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಜೆಎನ್ಬಿವೈ ಹೇಳಿದ್ದು ಈ ಬಗ್ಗೆ ಕ್ಷಮೆ ಯಾಚಿಸಿದೆ ಮತ್ತು ಈ ಪ್ರಮಾದದ ಬಗ್ಗೆ ಆಂತರಿಕ ವಿಚಾರಣೆ ನಡೆಸುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News