ಇಸ್ರೇಲ್ ಸ್ವಾಧೀನ ಅಂತ್ಯವನ್ನು ಬೆಂಬಲಿಸುವ ವಿದೇಯಕ ಅಮೆರಿಕ ಸಂಸತ್ತಿನಲ್ಲಿ ಮಂಡನೆ

Update: 2021-09-24 17:12 GMT

ವಾಷಿಂಗ್ಟನ್, ಸೆ.24: ಇಸ್ರೇಲ್- ಪೆಲೆಸ್ತೀನ್ ವಿವಾದ ಪರಿಹಾರಕ್ಕೆ ಪ್ರಸ್ತಾವಿಸಲಾದ ದ್ವಿರಾಷ್ಟ್ರ ಪರಿಹಾರ ಸೂತ್ರ ಮತ್ತು ಪೂರ್ವ ಜೆರುಸಲೇಂ ಸೇರಿದಂತೆ ಪೆಲೆಸ್ತೀನ್ನ ಪ್ರದೇಶದ ಮೇಲೆ ಇಸ್ರೇಲ್ನ ಸ್ವಾಧೀನತೆ ಅಂತ್ಯಗೊಳಿಸುವ ಪ್ರಸ್ತಾವನೆಯನ್ನು ಬೆಂಬಲಿಸುವ ವಿಧೇಯಕತೆಯನ್ನು ಅಮೆರಿಕದ ಡೆಮೊಕ್ರಟಿಕ್ ಪಕ್ಷದ ಸಂಸದರು ಮಂಡಿಸಿದ್ದಾರೆ.

ಅಲ್ಲದೆ, ಅಮೆರಿಕವು ಇಸ್ರೇಲ್ಗೆ ನೀಡುತ್ತಿರುವ ನೆರವು ಮಾನವಹಕ್ಕು ಉಲ್ಲಂಘನೆಗೆ ಬಳಕೆಯಾಗದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆಯ ಅಗತ್ಯವಿದೆ ಎಂದೂ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

ಪೂರ್ವ ಜೆರುಸಲೇಂ ಸಹಿತ ಇಸ್ರೇಲ್ ಸ್ವಾಧೀನಪಡಿಸಿಕೊಂಡಿರುವ ಪೆಲೆಸ್ತೀನ್ ಪ್ರದೇಶ ಮತ್ತು ಇಸ್ರೇಲ್ಗೆ ಸೇರಿದ ಪ್ರದೇಶವನ್ನು ಸ್ಪಷ್ಟವಾಗಿ ಗುರುತಿಸಬೇಕು ಎಂಬ ಶಿಫಾರಸನ್ನು ಗುರುವಾರ ಸಂಸದ ಆ್ಯಂಡಿ ಲೆವಿನ್ ಮಂಡಿಸಿರುವ ವಿಧೇಯಕ ಒಳಗೊಂಡಿದೆ.
ವಾಷಿಂಗ್ಟನ್ ಡಿಸಿಯಲ್ಲಿ ಪೆಲೆಸ್ತೀನ್ ಲಿಬರೇಷನ್ ಆರ್ಗನೈಸೇಷನ್ನ ಕಚೇರಿಯನ್ನು ಮತ್ತು ಪೂರ್ವ ಜೆರುಸಲೇಂನಲ್ಲಿ ಅಮೆರಿಕದ ಕಾನ್ಸುಲೇಟ್ ಕಚೇರಿಯನ್ನು ತಕ್ಷಣದಿಂದಲೇ ಪುನರಾರಂಭಿಸಿ ರಾಜತಾಂತ್ರಿಕ ಸಂಬಂಧ ಮರುಸ್ಥಾಪಿಸುವಂತೆ ವಿಧೇಯಕದಲ್ಲಿ ಆಗ್ರಹಿಸಲಾಗಿದೆ. ಈ ಎರಡೂ ಕಚೇರಿಗಳನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ಮುಚ್ಚಲಾಗಿದೆ.

ಇಸ್ರೇಲ್ನ ಭದ್ರತೆಗೆ ಸಂಬಂಧಿಸಿ ನೀಡುತ್ತಿರುವ ಅಮೆರಿಕದ ನೆರವಿನ ಒಂದು ಡಾಲರ್ ಹಣವೂ ಬೇರೆ ಉದ್ದೇಶಕ್ಕೆ, ಅಂದರೆ ಮಾನವಹಕ್ಕು ಉಲ್ಲಂಘನೆ, ಸ್ವಾಧೀನತೆಯನ್ನು ಶಾಶ್ವತಗೊಳಿಸುವ ಕೃತ್ಯಗಳಿಗೆ ಬಳಸಬಾರದು. ಅಮೆರಿಕದ ತೆರಿಗೆ ಪಾವತಿದಾರರ ಹಣದ ಸದ್ಬಳಕೆ ಬಗ್ಗೆ ಅಮೆರಿಕದ ಸಂಸತ್ತು ಈ ಹಿಂದೆಯೂ ಕಳವಳ ಸೂಚಿಸಿದೆ. ಆದರೆ, ಈ ಪ್ರಕರಣ ದ್ವಿರಾಷ್ಟ್ರ ಪರಿಹಾರ ಮತ್ತು ಇಸ್ರೇಲ್ ಹಾಗೂ ಪೆಲೆಸ್ತೀನಿಯರ ಮಾನವಹಕ್ಕು ಎತ್ತಿಹಿಡಿಯುವ ಕುರಿತಾದ್ದರಿಂದ ಅತ್ಯಗತ್ಯವಾಗಿದೆ ಎಂದು ಆ್ಯಂಡಿ ಲೆವಿನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News