ದಕ್ಷಿಣ ಏಶ್ಯಾದಲ್ಲಿ ಭಯೋತ್ಪಾದಕ ಪ್ರತಿನಿಧಿಗಳ ಬಳಕೆ ಖಂಡನೀಯ: ಕ್ವಾಡ್ ಮುಖಂಡರಿಂದ ಪಾಕ್‌ಗೆ ಪರೋಕ್ಷ ಸಂದೇಶ

Update: 2021-09-25 17:04 GMT

ವಾಷಿಂಗ್ಟನ್, ಸೆ.25: ದಕ್ಷಿಣ ಏಶ್ಯಾದಲ್ಲಿ ಭಯೋತ್ಪಾದಕ ಬಳಕೆ ಖಂಡನೀಯ ಎಂದು ಕ್ವಾಡ್ ದೇಶಗಳ ಮುಖಂಡರು ಪರೋಕ್ಷವಾಗಿ ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಯೋತ್ಪಾದಕ ಪ್ರತಿನಿಧಿಗಳ ಬಳಕೆಯನ್ನು ಖಂಡನೀಯವಾಗಿದೆ. ಅಲ್ಲದೆ ಭಯೋತ್ಪಾದಕ ಗುಂಪುಗಳಿಗೆ ಆರ್ಥಿಕ ನೆರವು ಮತ್ತು  ಗಡಿಯಾಚೆಗಿನ ದಾಳಿ ಸಹಿತ ಯಾವುದೇ ಭಯೋತ್ಪಾದಕ ದಾಳಿಗೆ ನೆರವು ನಿರಾಕರಿಸುವ ಅಗತ್ಯವಿದೆ ಎಂದು ಅಮೆರಿಕ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ಮುಖಂಡರು ಬಿಡುಗಡೆಗೊಳಿಸಿರುವ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ .

ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ರಾಜತಾಂತ್ರಿಕ, ಆರ್ಥಿಕ ಮತ್ತು ಮಾನವ ಹಕ್ಕು ಕಾರ್ಯನೀತಿಯನ್ನು ನಿಕಟ ಹೊಂದಾಣಿಕೆಯ ಮೂಲಕ ಕಾರ್ಯಗತಗೊಳಿಸಲು ಶುಕ್ರವಾರ ಅಮೆರಿಕದ ಶ್ವೇತಭವನದಲ್ಲಿ ನಡೆದ ಶೃಂಗಸಭೆಯಲ್ಲಿ ನಿರ್ಧರಿಸಲಾಗಿದೆ. ಕ್ವಾಡ್ ಮುಖಂಡರು ವೈಯಕ್ತಿಕವಾಗಿ ಭಾಗವಹಿಸಿದ ಪ್ರಪ್ರಥಮ ಶೃಂಗಸಭೆ ಇದಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ನ ಪ್ರಧಾನಿ ಯೊಶಿಹಿಡೆ ಸುಗಾ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಅಫ್ಘಾನಿಸ್ತಾನ ಪ್ರಾಂತ್ಯವನ್ನು ಇತರ ದೇಶಗಳ ಮೇಲೆ ಬೆದರಿಕೆ ಒಡ್ಡಲು, ಉಗ್ರರಿಗೆ ಆಶ್ರಯ ಅಥವಾ ತರಬೇತಿ ನೀಡಲು ಅಥವಾ ಭಯೋತ್ಪಾದಕ ಕೃತ್ಯಗಳಿಗೆ ಆರ್ಥಿಕ ನೆರವು ಸಂಗ್ರಹಿಸಲು ಬಳಸಬಾರದು ಎಂದು ಮುಖಂಡರು ಆಗ್ರಹಿಸಿದ್ದಾರೆ. ಅಫ್ಘಾನ್ ಪ್ರಜೆಗಳ ಜತೆಗೆ ನಾವು ನಿಲ್ಲಲ್ಲಿದ್ದು ಅಫ್ಘಾನ್‌ನಲ್ಲಿ ಮಕ್ಕಳು, ಮಹಿಳೆಯರ ಸಹಿತ ಮಾನವಹಕ್ಕು ಉಲ್ಲಂಘನೆಯಾಗದಂತೆ ಮತ್ತು ಅಫ್ಘಾನ್‌ನಿಂದ ಹೊರಹೋಗ ಬಯಸುವವರಿಗೆ ಸುರಕ್ಷಿತ ಪ್ರಯಾಣವನ್ನು ಖಾತರಿಗೊಳಿಸಬೇಕು ಎಂದು ಜಂಟಿ ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್, ಅಫ್ಘಾನಿಸ್ತಾನದಲ್ಲಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲಾಗಿದೆ. ಅಫ್ಘಾನ್‌ನಿಂದ ತೆರಳಲು ಬಯಸುವ ಜನರಿಗೆ ನೆರವು ಒದಗಿಸುವ ಬಗ್ಗೆ ಚರ್ಚೆ ನಡೆದಿದ್ದು ಹೊರ ತೆರಳುವವರಿಗೆ ರಕ್ಷಣೆ ಒದಗಿಸುವುದು ತಾಲಿಬಾನ್ ಹೊಣೆಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News