ನ್ಯಾಯಾಂಗ,ಶಾಸಕಾಂಗ ಮತ್ತು ಕಾರ್ಯಾಂಗಗಳ ಮಧ್ಯೆ ಸಾಮರಸ್ಯ ಅಗತ್ಯ: ಸಿಜೆಐ ಎನ್.ವಿ.ರಮಣ

Update: 2021-09-25 17:17 GMT

ಕಟಕ್(ಒಡಿಶಾ),ಸೆ.25: ಸೂಕ್ತ ನ್ಯಾಯದಾನ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಪ್ರಭುತ್ವದ ಮೂರು ಅಂಗಗಳಾದ ನ್ಯಾಯಾಂಗ,ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವೆ ಸಾಮರಸ್ಯದ ಅಗತ್ಯವಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ.ರಮಣ ಅವರು ಶನಿವಾರ ಇಲ್ಲಿ ಪ್ರತಿಪಾದಿಸಿದರು. ಒಡಿಶಾ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,ಕಾನೂನುಗಳನ್ನು ರೂಪಿಸುವುದು ನ್ಯಾಯಾಲಯಗಳ ಜವಾಬ್ದಾರಿಯಾಗಿದೆ ಎನ್ನುವುದು ಜನರ ಸಾಮಾನ್ಯ ತಿಳುವಳಿಕೆಯಾಗಿದೆ. ಈ ಭಾವನೆಯನ್ನು ನಿವಾರಿಸಬೇಕಿದ್ದು,ಇಲ್ಲಿ ಪ್ರಭುತ್ವದ ಮೂರು ಅಂಗಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಶಾಸಕಾಂಗವು ಕಾನೂನುಗಳನ್ನು ಪುನರ್‌ಪರಿಶೀಲಿಸಿ ಕಾಲದ ಮತ್ತು ಜನರ ಅಗತ್ಯಗಳಿಗೆ ತಕ್ಕಂತೆ ಅವುಗಳಲ್ಲಿ ಸುಧಾರಣೆಗಳನ್ನು ತರುವ ಅಗತ್ಯವಿದೆ. ನಮ್ಮ ಕಾನೂನುಗಳು ನಮ್ಮ ಪ್ರಾಯೋಗಿಕ ವಾಸ್ತವಗಳಿಗೆ ತಾಳೆಯಾಗುವಂತಿರಬೇಕು. ಅನುಗುಣವಾದ ನಿಯಮಗಳನ್ನು ಸರಳಗೊಳಿಸುವ ಮೂಲಕ ಕಾರ್ಯಾಂಗವು ಈ ಪ್ರಯತ್ನಗಳಿಗೆ ಪೂರಕವಾಗಬೇಕು. ಸಾಂವಿಧಾನಿಕ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಕಾರ್ಯಾಂಗ ಮತ್ತು ಶಾಸಕಾಂಗ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವುದು ಹೆಚ್ಚು ಮಹತ್ವದ್ದಾಗಿದೆ. ಆಗ ಮಾತ್ರ ನ್ಯಾಯಾಂಗವು ಕಾನೂನು ರೂಪಿಸುವ ಹೊಣೆಯನ್ನು ವಹಿಸಿಕೊಂಡು ಮಧ್ಯಪ್ರವೇಶಿಸುವ ಅನಿವಾರ್ಯತೆ ಇರುವುದಿಲ್ಲ ಮತ್ತು ಕಾನೂನನ್ನು ಅನ್ವಯಿಸುವ ಮತ್ತು ವ್ಯಾಖ್ಯಾನಿಸುವ ಕರ್ತವ್ಯ ಮಾತ್ರ ಅದರ ಪಾಲಿಗಿರುತ್ತದೆ. ಅಂತಿಮವಾಗಿ ಈ ಮೂರು ಅಂಗಗಳ ಸಾಮರಸ್ಯದ ಕಾರ್ಯವೈಖರಿಯು ನ್ಯಾಯಕ್ಕೆ ಕಾರ್ಯವಿಧಾನ ತೊಡಕುಗಳನ್ನು ನಿವಾರಿಸುತ್ತದೆ ಎಂದು ಹೇಳಿದರು.

ತನ್ನ ಹಿಂದಿನ ಭಾಷಣವೊಂದರಲ್ಲಿ ಕಾನೂನು ವ್ಯವಸ್ಥೆಯ ಭಾರತೀಕರಣದ ಅಗತ್ಯವನ್ನು ತಾನು ಉಲ್ಲೇಖಿಸಿದ್ದೆ ಎಂದು ಬೆಟ್ಟುಮಾಡಿದ ನ್ಯಾ.ರಮಣ,ತಾನು ಈಗಲೂ ಅದನ್ನು ಪ್ರತಿಪಾದಿಸುತ್ತೇನೆ ಎಂದು ಹೇಳಿದರು.

ಪುರಿ ದೇಗುಲಕ್ಕೆ ಭೇಟಿ

ಇದಕ್ಕೂ ಮುನ್ನ ನ್ಯಾ.ರಮಣ ಅವರು 12ನೇ ಶತಮಾನದ ಪುರಿ ಶ್ರೀಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿದರು.

ದೇವಸ್ಥಾನ ಸಂಕೀರ್ಣದಲ್ಲಿ 45 ನಿಮಿಷ ಕಾಲ ಕಳೆದ ಅವರು, ಮಂದಿರ ಮತ್ತು ಅದರ ಸುತ್ತ ಸುಂದರೀಕರಣ ಕಾಮಗಾರಿಯನ್ನು ನಡೆಸುತ್ತಿರುವುದಕ್ಕಾಗಿ ಶ್ರೀ ಜಗನ್ನಾಥ ದೇವಸ್ಥಾನ ಆಡಳಿತವನ್ನು ಪ್ರಶಂಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News