ಬಯೋಲುಮಿನೆನ್ಸಿಸ್: ಕತ್ತಲೆ ದೂರ ಓಡಿಸಲು ಸ್ಫೂರ್ತಿಯಾಯಿತೇ?

Update: 2021-09-26 11:58 GMT

2019 ಆಗಸ್ಟ್ 18ರ ರವಿವಾರ ಸಂಜೆ ಚೆನ್ನೈನ ಈಸ್ಟ್‌ಕೋಸ್ಟ್ ಬೀಚ್‌ಗೆ ಭೇಟಿ ನೀಡಿದವರು ಒಂದು ಅಸಾಮಾನ್ಯ ದೃಶ್ಯವನ್ನು ಕಂಡು ದಂಗಾದರು. ಅಲೆಗಳಲ್ಲಿ ನೀಲಿ ಹೊಳಪಿನ ಅಲೆಗಳು ಅವರ ಆಶ್ಚರ್ಯಕ್ಕೆ ಕಾರಣವಾಗಿದ್ದವು. ನೀಲಿ ಹೊಳಪಿನ ಗೆರೆಗಳು ಸಮುದ್ರದ ಮಧ್ಯದಿಂದ ದಡಕ್ಕೆ ಅಪ್ಪಳಿಸುವಂತೆ ಕಾಣುತ್ತಿದ್ದ ದೃಶ್ಯ ಅಲ್ಲಿದ್ದ ನೋಡುಗರನ್ನು ವಿಸ್ಮಯಗೊಳಿಸಿತ್ತು. ಅನೇಕರು ಆ ಸನ್ನಿವೇಶವನ್ನು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದು ಜಾಲತಾಣಗಳಲ್ಲಿ ಹರಿಬಿಟ್ಟರು. ಇದೇ ದೃಶ್ಯ ವರ್ಷದ ಹಿಂದೆ ಕರ್ನಾಟಕದ ಕರಾವಳಿಯ ಕೆಲವೆಡೆಗಳಲ್ಲೂ ಕಾಣಲು ಸಿಕ್ಕಿತ್ತು. ಹಾಗಾದರೆ ಆ ಸಮುದ್ರದಲ್ಲಿ ಕಂಡ ನೀಲಿ ಹೊಳಪು ಯಾವುದು? ಅದು ಎಲ್ಲಿಂದ ಬಂತು? ಅದರ ಹಿಂದಿನ ರಹಸ್ಯವೇನು? ಎಂಬುದರ ಕುರಿತು ತಿಳಿಯೋಣ.

 ಸಮುದ್ರ ತಜ್ಞರ ಪ್ರಕಾರ ನೀರಿನಲ್ಲಿನ ನೀಲಿ ಹೊಳಪನ್ನು ಬಯೋಲುಮಿನೆನ್ಸಿಸ್ ಎಂದು ಕರೆಯಲಾಗುತ್ತದೆ. ಅಂದರೆ ಪ್ಲಾಂಕ್ಟನ್‌ನಂತಹ ಕಿರು ಜೀವಂತ ಜೀವಿಗಳಿಂದ ಬೆಳಕಿನ ಉತ್ಪಾದನೆ ಮತ್ತು ಹೊರಸೂಸುವಿಕೆ ಪ್ರಕ್ರಿಯೆಯೇ ಬಯೋಲುಮಿನೆನ್ಸಿಸ್. ಚೆನೈನ ಸಮುದ್ರದಲ್ಲಿ ಕಂಡದ್ದೂ ಸಹ ಸಮುದ್ರ ಜೀವಿಗಳ ಹೊಳಪಿನ ಬೆಳಕು. ನಮ್ಮಲ್ಲಿನ ಮಿಂಚುಹುಳ ಬೆಳಕು ಬೀರುವಂತೆ ಸಮುದ್ರದ ಕೆಲ ಜೀವಿಗಳು ತಮ್ಮಲ್ಲಿನ ರಸಾಯನಿಕ ಶಕ್ತಿಯನ್ನು ಬೆಳಕಿನ ರೂಪದಲ್ಲಿ ಬಿಡುಗಡೆ ಮಾಡುತ್ತವೆ. ಇದನ್ನೇ ಬಯೋಲುಮಿನೆನ್ಸಿಸ್ ಎಂದು ಕರೆಯಲಾಗುತ್ತದೆ. ಚೆನ್ನೈ ಸಮುದ್ರದಂಡೆಯಲ್ಲಿ ನಡೆದ ವಿದ್ಯಮಾನ ಇಂತಹ ಬಯೋಲುಮಿನೆನ್ಸಿಸ್‌ನ ಕಾರಣದಿಂದ ಉಂಟಾದದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸ್ವಯಂದೀಪ್ತಿ ಅಥವಾ ಸ್ವಯಂ ಪ್ರಕಾಶತೆಯನ್ನು ಎಲ್ಲಡೆ ಗಮನಿಸುತ್ತೇವೆ. ರಾತ್ರಿ ವೇಳೆ ಕತ್ತಲಿನಲ್ಲಿ ಸಂಚರಿಸುವಾಗ ರಸ್ತೆಗೆ ಅಂಟಿಸಿದ ಸಣ್ಣ ಕೆಂಪು ವಸ್ತುವೊಂದು ಎಲ್ಲಿಂದಲೋ ಬಂದ ಬೆಳಕನ್ನು ಪ್ರತಿಫಲಿಸಿ ಬೆಳಕು ನೀಡುವುದನ್ನು ಗಮನಿಸಿರುತ್ತೇವೆ. ಕೆಲವು ಆಟಿಕೆಗಳಲ್ಲೂ ಸಹ ಸ್ವಯಂದೀಪ್ತಿ ರಸಾಯನಿಕಗಳನ್ನು ಅಂಟಿಸಿರುತ್ತಾರೆ. ಇಂತಹ ವಸ್ತುಗಳು ಪ್ರಕಾಶಿಸಲು ಇನ್ನೊಂದು ಬೆಳಕಿನ ಮೂಲ ಬೇಕು. ಆದರೆ ಸಮುದ್ರದಲ್ಲಿನ ಜೀವಿಗಳು ಸ್ವಯಂ ಬೆಳಕನ್ನು ಉತ್ಪತ್ತಿ ಮಾಡುತ್ತವೆ. ಇವುಗಳಿಗೆ ಯಾವುದೇ ಬ್ಯಾಟರಿ ಅಥವಾ ಇನ್ನೊಂದು ಬೆಳಕಿನ ಮೂಲದ ಅಗತ್ಯವಿಲ್ಲ. ಬೇರೆ ಬೇರೆ ಜೀವಿಗಳು ಬೇರೆ ಬೇರೆ ಅಂಗಗಳ ಮೂಲ ಬೆಳಕನ್ನು ಬೀರುತ್ತವೆ. ಬೆಳಕನ್ನು ಚೆಲ್ಲುವ ಇಂತಹ ಅಂಗಗಳಿಗೆ ಫೋಟೊ ಫೋರುಗಳೆಂದು ಹೆಸರು.

ಆಳ ಸಮುದ್ರದ ಜೀವಿಗಳಲ್ಲಿ ಶೇಕಡಾ ಎಪ್ಪತ್ತಾರರಷ್ಟು ಜೀವಿಗಳು ಒಂದಲ್ಲ ಒಂದು ರೀತಿಯಲ್ಲಿ ಬಯೋಲುಮಿನೆನ್ಸಿಸ್‌ನ್ನು ಉತ್ಪಾದಿಸುತ್ತವೆ. ಈ ರಸಾಯನಿಕ ಕ್ರಿಯೆಯು ಜೀವಕೋಶದ ಒಳಗೆ ಅಥವಾ ಹೊರಗೆ ಸಂಭವಿಸಬಹುದು. ಆದರೆ ಸಮುದ್ರದ ನೀರಿನ ಮೂಲಕ ವರ್ಣವಿಭಜನೆಯಿಂದ ಬೆಳಕು ಬೇಗನೆ ಎಲ್ಲಾ ಕಡೆಗೂ ಹರಡಿ ಪ್ರಭೆಯ ರೂಪದಲ್ಲಿ ಕಾಣುತ್ತದೆ. ಜೀವಕೋಶದಲ್ಲಿನ ಲೂಸಿಫೆರಿನ್ ಎಂಬ ಕಿಣ್ವದ ಆ್ಯಕ್ಸಿಡೀಕರಣದಿಂದ ಈ ಪ್ರಕ್ರಿಯೆ ಸಂಭವಿಸುತ್ತದೆ. ಸಾಮಾನ್ಯವಾಗಿ ಇಂತಹ ಪ್ರಕ್ರಿಯೆಗಳಲ್ಲಿ ಅಡೆನೊಸಿಸ್ ಟ್ರೈಫಾಸ್ಪೇಟ್(ಎ.ಟಿ.ಪಿ.) ಎಂಬ ರಸಾಯನಿಕ ಭಾಗಿಯಾಗಿರುತ್ತದೆ. ಇದು ಹೊಳಪಿಗೆ ಕಾರಣವಾದ ರಸಾಯನಿಕ. ಬಹುತೇಕ ಬಯೋಲುಮಿನೆನ್ಸಿಸ್ ಜೀವಿಗಳು ಸಮುದ್ರಗಳಲ್ಲಿ ಕಂಡುಬರುತ್ತವೆ. ಮೀನು, ಬ್ಯಾಕ್ಟೀರಿಯಾ, ಕಂಟಕ ಚರ್ಮಿಗಳು, ಸೆಫಲೋಪಾಡ್ ಮೃದ್ವಂಗಿಗಳು, ಕೆಲವು ಶಿಲೀಂದ್ರಗಳು, ಕೀಟಗಳು ಮತ್ತು ಜೆಲ್ಲಿಫಿಶ್‌ಗಳು ಬೆಳಕನ್ನು ಸೂಸುವ ಕೆಲವು ಜೀವಿಗಳಾಗಿವೆ. ಪಾಚಿ ಜಾತಿಗೆ ಸೇರಿದ ಕೆಲ ಸಸ್ಯಗಳೂ ಸಹ ಬೆಳಕನ್ನು ಹೊರಸೂಸುತ್ತವೆ. ಬಯೋಲುಮಿನೆಸೆಂಟ್ ಪರಿಸರ ವ್ಯವಸ್ಥೆಗಳು ಬಹಳ ಅಪರೂಪ. ಸಾಮಾನ್ಯವಾಗಿ ಕಿರಿದಾದ ಸಮುದ್ರದ ದಡಗಳಲ್ಲಿ ಇಂತಹ ವಿದ್ಯಮಾನಗಳು ಕಾಣುತ್ತವೆ. ಹೆಚ್ಚು ಬೆಚ್ಚಗಿನ ಸಮುದ್ರದ ನೀರಿನಲ್ಲಿ ಇಂತಹ ಕೆಲ ಬಯೋಲುಮಿನೆಸೆಂಟ್ ಜೀವಿಗಳು ವಾಸಿಸುತ್ತವೆ. ಸಿಹಿ ನೀರಿನ ಆವಾಸಕ್ಕಿಂತ ಉಪ್ಪು ನೀರಿನ ಆವಾಸದಲ್ಲಿ ಬಯೋಲುಮಿನೆನ್ಸಿಸ್ ಹೆಚ್ಚು ಜೀವಿಸುತ್ತವೆ.

ಬಯೋಲುಮಿನೆನ್ಸಿಸ್ ಜೀವಿಗಳ ಕುರಿತು ವಿಜ್ಞಾನಿಗಳು ಸ್ವಾರಸ್ಯಕರವಾದ ಮಾಹಿತಿಗಳನ್ನು ತಮ್ಮ ಗ್ರಂಥಗಳಲ್ಲಿ ದಾಖಲಿಸಿದ್ದಾರೆ. ಅರಿಸ್ಟಾಟಲ್ ಸತ್ತ ಮೀನು ಮತ್ತು ಮಾಂಸದಿಂದ ಬೆಳಕು ಉತ್ಪತ್ತಿಯಾಗುವ ಬೆಳಕಿನ ಬಗ್ಗೆ ತನ್ನ ಕೃತಿಯಲ್ಲಿ ತಿಳಿಸುತ್ತಾನೆ. ಇದೇ ಮಾಹಿತಿಯನ್ನು ಆಧರಿಸಿ ರಾಬರ್ಟ್ ಬೋಯೆಲ್ ಎಂಬ ವಿಜ್ಞಾನಿ ಬೆಳಕಿನ ಮೂಲಗಳ ಪ್ರಯೋಗ ಮಾಡುತ್ತಾನೆ. ಆಗ ಗ್ಲೋ-ವರ್ಮ್‌ಗಳ ಬಗ್ಗೆ ಬೋಯೆಲ್ ಸಂಶೋಧನೆ ನಡೆಸುತ್ತಾನೆ. 1753ರಲ್ಲಿ ಬೇಕರ್ ಫ್ಲ್ಯಾಗಲೇಟ್ ಮತ್ತು 1854ರಲ್ಲಿ ಜೋಹಾನ್ ಫ್ಲೋರಿಯನ್ ಹೆಲರ್ ಎಂಬವರು ಬಯೋಲುಮಿನೆನ್ಸಿಸ್‌ಬಗ್ಗೆ ಅಧ್ಯಯನ ಮುಂದವರಿಸುತ್ತಾರೆ. ಚಾರ್ಲ್ಸ್ ಡಾರ್ವಿನ್ ಒಮ್ಮೆ ಹಡಗಿನಲ್ಲಿ ಪಯಣಿಸುವಾಗ ಬಯೋಲುಮಿನೆನ್ಸಿಸ್‌ಗಳನ್ನು ನೋಡಿ ಆಶ್ಚರ್ಯ ಹೊಂದುತ್ತಾನೆ ಮತ್ತು ತನ್ನ ವೀಕ್ಷಣಾ ಅನುಭವವನ್ನು ದಾಖಲಿಸುತ್ತಾನೆ. ಹಾರ್ವೆ ಸಹ ಎಲ್ಲಾ ರೀತಿಯ ಪ್ರಕಾಶಮಾನ ಜೀವಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ತನ್ನ ಪುಸ್ತಕದಲ್ಲಿ ಬರೆದಿದ್ದಾನೆ. ತೀರಾ ಇತ್ತೀಚೆಗೆ ಅಂದರೆ 2016ರಲ್ಲಿ ಆಳ ಸಮುದ್ರದಲ್ಲಿ ಬಯೋಲುಮಿನೆನ್ಸಿಸ್ ಜೀವಿಗಳ ಬಗ್ಗೆ ವೀಡಿಯೊ ಸೆರೆಹಿಡಿಯಲಾಯಿತು.

ಕೆಲವು ಜೀವಿಗಳು ಆಹಾರದ ಬೇಟೆಗಾಗಿ ಬಯೋಲುಮಿನೆನ್ಸಿಸನ್ನು ಬಳಸುತ್ತವೆ. ಡ್ರ್ಯಾಗನ್ ಫಿಶ್ ಮತ್ತು ಆ್ಯಂಗ್ಲರ್ ಫಿಶ್‌ಗಳು ಬೇಟೆಯನ್ನು ಆಕರ್ಷಿಸಲು ಬಯೋಲುಮಿನೆನ್ಸಿಸನ್ನು ಬಳಸುತ್ತವೆ. ಕೆಲವು ಜೀವಿಗಳು ಮಿಮಿಕ್ರಿ ಮಾಡುತ್ತಾ ಇತರ ಜೀವಿಗಳನ್ನು ಅಣಕಿಸಲು ಬಯೋಲುಮಿನೆನ್ಸಿಸನ್ನು ಬಳಸುತ್ತವೆ. ಕೆಲವು ಜೀವಿಗಳು ವಾತಾವರಣದಲ್ಲಿ ಏರುಪೇರುಗಳಾದ ಮುಂಜಾಗ್ರತೆಯನ್ನು ಸೂಚಿಸಲು ಬಳಸುತ್ತವೆ. ಬಯೋಲುಮಿನೆನ್ಸಿಸ್ ಜೀವಿಗಳಿಗೆ ರಾತ್ರಿವೇಳೆ ತೊಂದರೆಯಾದರೆ ಅವು ತಳಭಾಗದಿಂದ ಗುಂಪುಗುಂಪಾಗಿ ನೀರಿನ ಮೇಲ್ಭಾಗಕ್ಕೆ ಬರುತ್ತವೆ. ಆಗ ಅವು ನಮ್ಮ ಕಣ್ಣಿಗೆ ಕಾಣುತ್ತವೆ. ಅವುಗಳ ಜೀವಕೋಶದಲ್ಲಿನ ರಸಾಯನಿಕ ಕ್ರಿಯೆಗಳಿಂದ ಇಂತಹ ವಿದ್ಯಮಾನಗಳು ಗೋಚರಿಸುತ್ತವೆ. ಕೆಲವು ಪ್ರಭೇದಗಳು ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕೆಲ ಜೈವಿಕ ಬದಲಾವಣೆಗಳನ್ನು ಅನುಸರಿಸುತ್ತವೆ. ಉದಾಹರಣೆಗೆ ಮುಟ್ಟಿದರೆ ಮುನಿ ಸಸ್ಯವು ರಕ್ಷಣೆಗಾಗಿ ಎಲೆಗಳನ್ನು ಮುದುರಿಕೊಳ್ಳುತ್ತದೆ. ಅಂತಯೇ ಊಸರವಳ್ಳಿ ಪರಿಸರಕ್ಕೆ ತಕ್ಕಂತೆ ದೇಹದ ಬಣ್ಣವನ್ನು ಬದಲಿಸಿಕೊಳ್ಳುತ್ತದೆ. ಅಂತೆಯೇ ಸಮುದ್ರದ ಕೆಲ ಜೀವಿಗಳೂ ಸಹ ರಕ್ಷಣೆಗಾಗಿ ಹೊಳಪನ್ನು ಹೊಂದುತ್ತವೆ. ಕೌಂಟರ್‌ಲುಮಿನೆಸ್ ಎಂಬ ತಂತ್ರದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ. ಹ್ಯಾಟ್ಚೆಟ್ ಎಂಬ ಮೀನು ಕೌಂಟರ್‌ಲುಮಿನೆಸ್ ತಂತ್ರದಿಂದ ಇತರ ಜೀವಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುತ್ತದೆ. ಇಂತಹ ವಿಶೇಷತೆ ಹೊಂದಿದ ಸಮುದ್ರದ ಜೀವಿಗಳು ತಮ್ಮ ಶಕ್ತಿಯನ್ನು ಬಳಸಿ ಬೆಳಕನ್ನು ಉತ್ಪಾದಿಸುತ್ತವೆ. ಸಾಗರದಲ್ಲಿ ಸೂರ್ಯನ ಬೆಳಕು ಕೆಲವೇ ನೂರು ಮೀಟರ್‌ಗಳವರೆಗೆ ಚಲಿಸುತ್ತದೆ. ಆದರೆ ಸಮುದ್ರದ ಆಳದಲ್ಲಿನ ಜೀವಿಗಳಿಗೆ ಬೆಳಕು ತಲುಪುವುದೇ ಇಲ್ಲ. ಅಲ್ಲಿ ವಾಸಿಸುವ ಜೀವಿಗಳು ಸಂವಹನಕ್ಕಾಗಿ ತಮ್ಮದೇ ಆದ ಬೆಳಕನ್ನು ಉತ್ಪಾದಿಸಿಕೊಳ್ಳುವ ಸಾಮರ್ಥ್ಯ ಪಡೆದಿವೆ. ಬಹುಶಃ ಇಂತಹ ವಿದ್ಯಮಾನಗಳು ಮಾನವ ವಿದ್ಯುತನ್ನು ಕಂಡು ಹಿಡಿಯಲು ಪ್ರೇರಕವಾಗಿರಬಹುದೇ?. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ.

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News